ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿ ಇರದ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಅದಕ್ಕಿಂತ ಕಡಿಮೆಯಾಗದಂತೆ ನಾವು ಸ್ವಾಗತ ಕೋರಬೇಕು. ಇದು ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಅವರ ಭೇಟಿಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಇದನ್ನೂ ಓದಿ | ಪ್ರಧಾನಿ ಮೋದಿಗೆ ಕಾನೂನು ಅರಿವಿಲ್ಲ: ವಿ.ಎಸ್. ಉಗ್ರಪ್ಪ ಕಿಡಿ
ನಗರದ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ʼʼಪ್ರಧಾನಿ ಮೋದಿ ಬಹಳ ದಿನಗಳ ನಂತರ ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಬೇರೆ ರಾಜ್ಯಗಳಿಗೆ ಹೋದಾಗ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನಂತರ ಈ ಪ್ರವಾಸ ಕೈಗೊಂಡಿದ್ದಾರೆʼʼ ಎಂದರು.
ಲೋಕಸಭಾ ಚುನಾವಣೆಯ ದಿಕ್ಸೂಚಿ
ʼʼಈ ವರ್ಷ ಚುನಾವಣಾ ವರ್ಷ ಕೂಡ ಆಗಿರುವುದರಿಂದ ಈ ಕಾರ್ಯಕ್ರಮವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಯಲಹಂಕದಿಂದ ಪಿಎಂ ಬರುವಾಗ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರಿಂದ ಸ್ವಾಗತ ಕೋರಬೇಕು. ಸಾರ್ವಜನಿಕ ಸಭೆಗೆ 50ರಿಂದ 60 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಿದ್ದೇವೆ. ಕಾರ್ಯಕ್ರಮದ ವ್ಯವಸ್ಥೆಯನ್ನು ಸರಕಾರ ಮಾಡುತ್ತದೆ. ಆದರೆ ಜನರನ್ನು ಕರೆಸುವುದು ನಿಮ್ಮ ಜವಾಬ್ದಾರಿʼʼ ಎಂದು ಸಿಎಂ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.
ಎರಡು ಕಡೆ ರೋಡ್ ಶೋ
ʼʼಬೆಂಗಳೂರಿನಲ್ಲಿ ಪ್ರಧಾನಿಯಿಂದ ಎರಡು ಕಡೆಗಳಲ್ಲಿ ರೋಡ್ ಶೋಗೆ ಸಿದ್ಧತೆ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣದಲ್ಲಿ ರೋಡ್ ಶೋ ನಡೆಯಲಿದೆ. ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂನಲ್ಲಿ ಒಂದು ರೋಡ್ ಶೋ; ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ ಸೇರಿದಂತೆ ಹಲವು ಕಡೆ ಮತ್ತೊಂದು ರೋಡ್ ಶೋ ನಡೆಯಲಿದೆ. ಒಟ್ಟು 12 ಕಿಲೋ ಮೀಟರ್ ರೋಡ್ ಶೋಗೆ ಸಿದ್ಧತೆ ಮಾಡಿಕೊಳ್ಳಬೇಕು. ಜೂನ್ 18ರ ಒಳಗೆ ಎಲ್ಲ ರೀತಿಯ ತಯಾರಿ ಆಗಬೇಕು. ಪ್ರಧಾನಿಯವರ ಕಾರ್ಯಕ್ರಮವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕುʼʼ ಎಂದು ಸಿಎಂ ಹೇಳಿದರು.
ಕಾಂಗ್ರೆಸ್ ರಾಜಭವನ ಮುತ್ತಿಗೆ ಖಂಡನೀಯ ಆರ್. ಅಶೋಕ್
ʼʼರಾಹುಲ್ ಗಾಂಧಿಗೆ ಇ.ಡಿ ನೋಟಿಸ್ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ರಾಜಭವನ ಮುತ್ತಿಗೆ ಹಾಕಲು ಹೊರಟಿರುವುದು ಖಂಡನೀಯ. ಕಾಂಗ್ರೆಸ್‌ನ ಅನೇಕರಿಗೆ ಇ.ಡಿ ನೋಟಿಸ್ ನೀಡಿದಾಗ ಇಲ್ಲದ ಪ್ರತಿಭಟನೆ ಈಗೇಕೆ? ರಾಹುಲ್ ಗಾಂಧಿ ಮಾತ್ರ ಈ ದೇಶದ ಪ್ರಜೆಯಾʼʼ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಅರಮನೆ ಮೈದಾನದಲ್ಲಿ ಮಾತನಾಡಿದ ಅವರು ʼʼಇ.ಡಿ ನೋಟಿಸ್ ನಿಂದಾಗಿ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ರಾಹುಲ್ ಗಾಂಧಿ ನಿತ್ಯ ಇ.ಡಿ ಡ್ರಿಲ್‌ಗೆ ಸಿಲುಕಿದ್ದಾರೆ. ರಾಹುಲ್ ಜೈಲಿಗೆ ಹೋದರೆ ತಮಗೆ ಬೇರೆ ದಿಕ್ಕಿಲ್ಲ ಅನ್ನೋ ರೀತಿ ಇವರೆಲ್ಲ ವರ್ತಿಸುತ್ತಿದ್ದಾರೆʼʼ ಎಂದು ಅಶೋಕ್ ಗೇಲಿ ಮಾಡಿದರು.
ಇದನ್ನೂ ಓದಿ | ಪ್ರಧಾನಿ ಮೋದಿಯನ್ನು ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡ; ಕೇಸ್ ದಾಖಲು