Site icon Vistara News

PSI Parshuram Death Case: ಪಿಎಸ್ಐ ಪರಶುರಾಮ ಸಾವು ಪ್ರಕರಣ; ಯಾದಗಿರಿ ಕೈ ಶಾಸಕ, ಪುತ್ರನ ವಿರುದ್ಧ ಎಫ್‌ಐಆರ್‌

PSI Parshuram death Case

ಯಾದಗಿರಿ: ಪಿಎಸ್ಐ ಪರಶುರಾಮ ಸಾವು ಪ್ರಕರಣಕ್ಕೆ (PSI Parshuram Death Case) ಸಂಬಂಧಿಸಿದಂತೆ ಘಟನೆ ನಡೆದ 17 ಗಂಟೆ ಬಳಿಕ ಕೇಸ್‌ ದಾಖಲಾಗಿದೆ. ಮೃತ ಪಿಎಸ್ಐ ಪತ್ನಿ ಶ್ವೇತಾ ಕೊಟ್ಟ ದೂರಿನನ್ವಯ ಯಾದಗಿರಿ ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬಿಎನ್ಎಸ್ ಸೆಕ್ಷನ್ 108 ಅಡಿ ಪ್ರಕರಣ ದಾಖಲಾಗಿದ್ದು, ಕೇಸ್‌ನಲ್ಲಿ ಎ1 ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್, ಎ2 ಪುತ್ರ ಪಂಪನಗೌಡ ಹೆಸರು ಉಲ್ಲೇಖಿಸಲಾಗಿದೆ. ಸತತ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ, ಕೊನೆಗೂ ಎಫ್ಐಆರ್ ದಾಖಲಿಸಿಕೊಂಡಿದೆ.

ಕೇಸ್ ದಾಖಲಾಗುತ್ತಿದ್ದಂತೆ ಶಾಸಕನ ಮೊಬೈಲ್ ಸ್ವಿಚ್ ಆಫ್

ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ ಕೇಸ್ ದಾಖಲಾಗುತ್ತಿದ್ದಂತೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಪುತ್ರ ಪಂಪಣ್ಣಗೌಡ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೇಸ್ ದಾಖಲಾಗಿದ್ದರಿಂದ ಅಪ್ಪ-ಮಗ ತಲೆ ಮರೆಸಿಕೊಂಡಿದ್ದು, ಬೆಂಗಳೂರಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.

ಏನಿದು ಪ್ರಕರಣ?

ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ ಶುಕ್ರವಾರ(ಆ.2) ನಿಧನರಾಗಿದ್ದರು. ಇತ್ತೀಚೆಗೆ ಸೈಬರ್ ಕ್ರೈಮ್ (Cyber Crime) ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ಪೊಲೀಸ್ ಕ್ವಾರ್ಟರ್ಸ್‌ ನಿವಾಸದಲ್ಲಿ ಶುಕ್ರವಾರ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದರು.

ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಪಿಎಸ್‌ಐ ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿ, ಸ್ಥಳೀಯ ದಲಿತ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿ ಶಾಸಕ, ಪುತ್ರನ ವಿರುದ್ಧ ದೂರು ನೀಡಿದ್ದರು.

PSI Death: ನಿನ್ನೆ ಬೀಳ್ಕೊಡುಗೆ ಪಡೆದ ಪಿಎಸ್‌ಐ ಇಂದು ಹೃದಯಾಘಾತದಿಂದ ಸಾವು; 30 ಲಕ್ಷ ರೂ. ಲಂಚಕ್ಕೆ ಶಾಸಕ ಒತ್ತಡ ಹಾಕಿದ್ದರಿಂದ ಖಿನ್ನತೆ?

ಯಾದಗಿರಿ ನಗರ ಠಾಣೆಯಲ್ಲಿ ಉಳಿದುಕೊಳ್ಳಲು ಶಾಸಕ ಚನ್ನಾರೆಡ್ಡಿ ಪಾಟೀಲ ಅವರು 30 ಲಕ್ಷ ರೂ. ಹಣ ಲಂಚ ನೀಡುವಂತೆ ಒತ್ತಾಯಿಸಿದ್ದರು. ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ರೂ. ಹಣ ನೀಡಿ ನಗರ ಠಾಣೆಗೆ ಪೋಸ್ಟಿಂಗ್ ಪಡೆದುಕೊಂಡಿದ್ದರು. ಇದರಿಂದ ಸಾಲದ ಸುಳಿಗೆ ಸಿಲುಕಿದ್ದರು. ಇದೀಗ ‌ಮತ್ತೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿ ಪತಿ ಪರಶುರಾಮ ಮೃತಪಟ್ಟಿದ್ದಾರೆ ಎಂದು ಶ್ವೇತಾ ಆರೋಪಿಸಿದ್ದರು. ಹೀಗಾಗಿ ಶಾಸಕ ಹಾಗೂ ಪುತ್ರನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಶಾಸಕ, ಪುತ್ರನ ಬಂಧನಕ್ಕೆ ಆಗ್ರಹ

ಪಿಎಸ್ಐ ಪರಶುರಾಮ್ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಹಾಗೂ ಪುತ್ರನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮೃತ ಪಿಎಸ್ಐ ಪತ್ನಿ ಸೇರಿ ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಯಿಮ್ಸ್‌ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಕ್ಷೇತ್ರದ ಪಕ್ಷೇತರ ಪರಾಜಿತ ಅಭ್ಯರ್ಥಿ ಹಣಮೇಗೌಡ ಬೀರನಕಲ್ ಮಾತನಾಡಿ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಕಂಡಲ್ಲಿ ಕಲ್ಲು ಹೊಡೆಯಬೇಕು. ವೋಟ್ ಹಾಕಿ ಗೆಲ್ಲಿಸಿದ್ದೀರಿ, ಈಗ ಕಂಡರೇ ಕಲ್ಲು ತೆಗೆದುಕೊಂಡು ಹೊಡೆಯಿರಿ. ಶಾಸಕ ಭೃಷ್ಟಚಾರದಲ್ಲಿ ಭಾಗಿಯಾಗಿದ್ದು, ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಾರೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

Exit mobile version