ಕಲಬುರಗಿ/ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ನಡೆದ ನೇಮಕಾತಿ ಪರೀಕ್ಷೆಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತೆಯ ಮೂಲಕ ನಡೆದ ಭಾರೀ ಹಗರಣದ (psi karnataka) ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Bommai) ಅವರು ಗುರುವಾರ ಮದ್ಯಾಹ್ನ ಕಲಬುರಗಿಗೆ ಆಗಮಿಸಲಿದ್ದಾರೆ.
ಏಪ್ರಿಲ್ 19ರಂದು ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸ ಆರಂಭಿಸಿದ ಸಿಎಂ ಅಲ್ಲಿಂದ ಎರಡು ದಿನ ಶಿವಮೊಗ್ಗ ಪ್ರವಾಸದಲ್ಲಿದ್ದಾರೆ. ಗುರುವಾರ ಮದ್ಯಾಹ್ನ ಬಳ್ಳಾರಿ ಮೂಲಕ ಕಲಬುರಗಿಗೆ ತೆರಳಲಿದ್ದಾರೆ. ಕಲಬುರಗಿಯಲ್ಲಿ ನಡೆಯಲಿರುವ ವಿಭಾಗೀಯ ಕಾರ್ಯಕಾರಿಣಿ ಸಭೆಯಲ್ಲಿ ಬೊಮ್ಮಾಯಿ ಭಾಗವಹಿಸಲಿದ್ದಾರೆ.
ರಾಜ್ಯಾದ್ಯಂತ, ಅದರಲ್ಲೂ ಚುನಾವಣೆ ವರ್ಷದಲ್ಲಿ ಬಿಜೆಪಿಗೆ ಭಾರೀ ಮುಜುಗರ ಉಂಟುಮಾಡಿರುವ ಪಿಎಸ್‌ಐ ಹಗರಣ ಹೆಚ್ಚು ನಡೆದಿರುವುದೇ ಕಲಬುರಗಿಯಲ್ಲಿ. ಅದರಲ್ಲೂ ಇಡೀ ಹಗರಣದ ಪ್ರಮುಖ ಆರೋಪಿಯಾದ ದಿವ್ಯಾ ಹಾಗರಗಿ ಬಿಜೆಪಿ ಕಾರ್ಯಕರ್ತೆ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆಯೂ ಹೌದು.
545 ಪಿಎಸ್‌ಐ ಹುದ್ದೆಗೆ 2021ರ ಆಗಸ್ಟ್ 3ರಂದು ರಾಜ್ಯಾದ್ಯಂತ ಪರೀಕ್ಷೆಗಳು ನಡೆದಿದ್ದವು. 2022ರ ಜನವರಿ 19 ರಂದು ಹೊರಬಂದಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯ ನಂತರ ವಿವಾದ ಭುಗಿಲೆದ್ದಿತ್ತು. ಪರೀಕ್ಷೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ರೀತಿ ಅನೇಕ ಅಭ್ಯರ್ಥಿಗಳು ದೂರು ನೀಡಿದ್ದರಿಂದ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ಗೃಹ ಇಲಾಖೆ ವಹಿಸಿತ್ತು. ಹಗರಣಕ್ಕೆ ಉದಾಹರಣೆಯಾಗಿ ಹೇಳುವುದಾದರೆ, ವೀರೇಶ್ ಎಂಬ ಅಭ್ಯರ್ಥಿ ಪರೀಕ್ಷೆಯಲ್ಲಿ 21 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದ. ಆದರೆ ಈತನಿಗೆ ಪರೀಕ್ಷೆಯಲ್ಲಿ 121 ಅಂಕ ಲಭಿಸಿತ್ತು. ಅಂದರೆ ಈತ ಪರೀಕ್ಷೆ ಬರೆದ ನಂತರ ಈತನ ಉತ್ತರ ಪತ್ರಿಕೆಯನ್ನು ಯಾರೋ ತಿದ್ದಿ ಸರಿಯುತ್ತರ ಬರೆದಿದ್ದರು. ಈತ ಪರೀಕ್ಷೆ ಬರೆದ ಶಹಬಜಾರ್ ಬಿಡಿಎ ಲೇಔಟ್‌ನಲ್ಲಿರುವ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೊಠಡಿ ಮೇಲ್ವಿಚಾರಕಿಯೇ ಉತ್ತರ ಪತ್ರಿಕೆಯನ್ನು ತಿದ್ದಿದ್ದರು ಎನ್ನಲಾಗಿತ್ತು.
ಹೆಚ್ಚಿನ ಓದಿಗಾಗಿ: ಖಡಕ್ CM ಅಂದರೆ ಏನು?: ಪ್ರತಿಪಕ್ಷಗಳಿಗೆ ಬಸವರಾಜ ಬೊಮ್ಮಾಯಿ ಪ್ರಶ್ನೆ
ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯು ಬಿಜೆಪಿ ಸ್ಥಳೀಯ ನಾಯಕಿ ದಿವ್ಯಾ ಹಾಗರಗಿ ಅವರ ಒಡೆತನದಲ್ಲಿದೆ. ಈ ಶಾಲೆಯಲ್ಲಿ ಪರೀಕ್ಷೆ ಬರೆದವರ ಪೈಕಿ 10 ಅಭ್ಯರ್ಥಿಗಳು ಪಿಎಸ್‌ಐ ಆಗಿ ಆಯ್ಕೆಯಾಗಿದ್ದರು. ಪರೀಕ್ಷೆ ಬರೆದ ಅಭ್ಯರ್ಥಿಗಳು ಖಾಲಿ ಬಿಟ್ಟಿರುವ ಉತ್ತರಗಳನ್ನು ತಿದ್ದುವಂತೆ ಸಿಬ್ಬಂದಿಗೆ ದಿವ್ಯಾ ಹಾಗರಗಿ ಅವರೇ ಒತ್ತಡ ಹೇರಿದ್ದರು ಎಂಬ ಆರೋಪ ಕೇಳಿಬಂದಿತ್ತು. ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣೀಯೂ ಆಗಿದ್ದ ದಿವ್ಯಾ, ದಿಶಾ ಸಮಿತಿಯ ಸದಸ್ಯೆಯೂ ಆಗಿದ್ದರು. ಕಳೆದ ಫೆಬ್ರವರಿಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ದಿವ್ಯಾ ಅವರ ಮನೆಗೆ ಭೇಟಿ ನೀಡಿದ್ದರು. ಇದೀಗ ಗೃಹ ಇಲಾಖೆಗೆ ಸಂಬಂಧಿಸಿದ ಪರೀಕ್ಷೆಯಲ್ಲೇ ಅಕ್ರಮ ನಡೆದಿರುವುದು ಬಿಜೆಪಿಗೆ ಹಾಗೂ ಗೃಹಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈವರೆಗೆ ದಿವ್ಯಾ ಪತಿ ರಾಜೇಶ್ ಸೇರಿ 8 ಜನರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿ ದಿವ್ಯಾ ಮಾತ್ರ ಇಲ್ಲಿವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ದಿವ್ಯಾ ಡ್ರೈವ್ ಮೊಬೈಲ್ ಲೊಕೇಷನ್ ಕಲಬುರಗಿಯಿಂದ ಅಫಜಲಪುರಕ್ಕೆ ಸಾಗುವ ಮಧ್ಯದಲ್ಲಿ ಕಡಿತವಾಗಿದೆ. ದಿವ್ಯ ಅವರ ಮೊಬೈಲ್ ಲೊಕೇಷನ್ ಪೊಲೀಸರಿಗೆ ಸಿಕ್ಕಿದ ಎನ್ನಲಾಗುತ್ತಿದೆ. ಇದೇ ವೇಳೆ ಕಲಬುರಗಿಗೆ ಆಗಮಿಸುತ್ತಿರುವ ಸಿಎಂ ಬೊಮ್ಮಾಯಿ ಅವರಿಗೆ ಸಹಜವಾಗಿ ಈ ವಿಚಾರದಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಿಎಂ ಆಗಮನಕ್ಕೂ ಮುನ್ನವೇ ಪ್ರಮುಖ ಆರೋಪಿಯನ್ನು ಬಂಧಿಸಬೇಕೆಂಬ ಒತ್ತಡ ಪೊಲೀಸರ ಮೇಲಿದೆ.
ಇಂದು 50 ಅಭ್ಯರ್ಥಿಗಳ ವಿಚಾರಣೆ
ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಅಭ್ಯರ್ಥಿಗಳ ನಿರಂತರ ವಿಚಾರಣೆ ಮುಂದುವರಿದಿದೆ. ಬುಧವಾರ 50 ಅಭ್ಯರ್ಥಿಗಳು ವಿಚಾರಣೆಗೆ ಆಗಮಿಸಿದ್ದರು. ಗುರುವಾರವೂ 50 ಅಭ್ಯರ್ಥಿಗಳನ್ನು ವಿಚಾರಣೆಗಾಗಿ ಸೂಚನೆ ನೀಡಲಾಗಿದೆ. ಪರೀಕ್ಷೆಯ ಪ್ರವೇಶ ಪತ್ರ, 2ನೇ ಪತ್ರಿಕೆಯ OMR ಶೀಟ್‌ನ ಕಾರ್ಬನ್ ಶೀಟ್ ಅನ್ನು ಸಿಐಡಿ ಪೊಲೀಸರು ಬುಧವಾರ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದರು. ಇವುಗಳನ್ನು ನೇಮಕಾತಿ ವಿಭಾಗದಲ್ಲಿರುವ ಅಸಲಿ ಪತ್ರಿಗಳ ಜತೆ ತಾಳೆ ನೋಡಬೇಕಿದೆ. ಎರಡರಲ್ಲೂ ಇರುವ ಒತ್ತರಗಳು ತಾಳೆಯಾದರೆ ಮಾತ್ರ ಅಭ್ಯರ್ಥಿಗಳು ಬಚಾವ್ ಆಗುತ್ತಾರೆ. ವ್ಯತ್ಯಾಸ ಕಂಡುಬಂದರೆ ಎರಡೂ ಪ್ರತಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಓದಿಗಾಗಿ: ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಬಳಸಿದ 11 ಕಟು ಶಬ್ದಗಳು: ಇದು ಮಾಜಿ CMಗಳ ಸಮರ