ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಗೆ 545 ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಕುರಿತಂತೆ ಎಡಿಜಿಪಿ ರ‍್ಯಾಂಕ್ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಬಂಧನವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ.
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಈ ಕುರಿತು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕಪಾಟಿನಿಂದ ಮತ್ತಷ್ಟು ಅಸ್ತಿಪಂಜರಗಳು ಉರುಳುತ್ತಿವೆ. ಎಡಿಜಿಪಿ ಅಮೃತ್ ಪಾಲ್ ಬಂಧನವೇ ಇದಕ್ಕೆ ಉದಾಹರಣೆ. ಇಂತಹ ಹಗರಣವೊಂದು ನಡೆದೇ ಇಲ್ಲ ಎನ್ನುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಈಗ ಏನು ಹೇಳುತ್ತಾರೆ? ಕೇವಲ ಅಧಿಕಾರಿಗಳನ್ನು ದೂರಿದರೆ ಸಾಲದು. ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಸಮಾನ ತಪ್ಪಿತಸ್ಥರು. ಗೃಹಸಚಿವರನ್ನು ಸಿಎಂ ಬೊಮ್ಮಾಯಿ ಕೂಡಲೆ ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ತುರ್ತು ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಶಿವಕುಮಾರ್, ‘ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದಷ್ಟು ಮಟ್ಟಿಗೆ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಭಾರತೀಯ ಪೊಲೀಸ್ ಸೇವೆಗೂ (IPS) ಭ್ರಷ್ಟಾಚಾರ ವಿಸ್ತರಿಸಿದ್ದು, ಇಂದು ಪಿಎಸ್ಐ ನೇಮಕಾತಿಯಲ್ಲಿ ಭಾಗಿಯಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನವಾಗಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ವಿಧಾನ ಮಂಡಲದ ದಾರಿ ತಪ್ಪಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕೂಡಲೇ ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ಮುಚ್ಚಿಹಾಕಲು ಯಾರೆಲ್ಲಾ ರಾಜಕಾರಣಿಗಳು ಒತ್ತಡ ಹೇರಿದ್ದರೋ ಅವರೆಲ್ಲರ ಹೆಸರನ್ನು ಆತ್ಮಸಾಕ್ಷಿಯಿಂದ ಬಹಿರಂಗಪಡಿಸಬೇಕು.
ಸರ್ಕಾರ ನೇಮಕಾತಿ ಅಕ್ರಮದ ಅಂಗಡಿ ತೆಗೆದಿದ್ದು, ವ್ಯಾಪಾರ ಮಾಡಲು ಬಂದವರನ್ನು ಮಾತ್ರ ನೀವು ಹಿಡಿದಿದ್ದೀರಿ. ಅಂಗಡಿ ತೆರೆದವರನ್ನು, ಇದಕ್ಕೆ ಬೆಂಬಲ ನೀಡಿರುವವರನ್ನು ಬಂಧಿಸಿ ಎಂದು ಆಗ್ರಹಿಸಿದ್ದೆವು. ಈ ಅಕ್ರಮದ ಬಗ್ಗೆ ವಿರೋಧ ಪಕ್ಷದ ಶಾಸಕರು ಪ್ರಶ್ನೆ ಮಾಡಿದರೆ, ಅವರಿಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ಸರ್ಕಾರ ಕೊಡಬಾರದ ಕಿರುಕುಳ ನೀಡಿತು. ರಾಜ್ಯದ ಇತಿಹಾಸದಲ್ಲೇ ಇಂತಹ ಘಟನೆ ಮೊದಲ ಬಾರಿಗೆ ನಡೆದಿದೆ ಎಂದಿದ್ದಾರೆ.
ಅಶ್ವತ್ಥನಾರಾಯಣ ವಿರುದ್ಧ ವಾಗ್ದಾಳಿ
ಅಮೃತ್ ಪಾಲ್ ಬಂಧಿಸಿದರಷ್ಟೆ ಸಾಲದು ಎಂದ ಡಿ.ಕೆ. ಶಿವಕುಮಾರ್, ಪಿಎಸ್‌ಐ ಹಗರಣದ ಕುರಿತಂತೆ ಮತ್ತೆ ಸಚಿವ ಅಶ್ವತ್ಥನಾರಾಯಣ್ ಕುರಿತು ಪ್ರಸ್ತಾಪಿಸಿದ್ದಾರೆ. ಇಲ್ಲಿ ಅಕ್ರಮ ನಡೆದಿರುವ ಕಾರಣಕ್ಕೆ ಪೊಲೀಸ್ ಅಧಿಕಾರಿಯ ಬಂಧನವಾಗಿದೆಯಲ್ಲವೇ? ಮಾಗಡಿಯ ಅಭ್ಯರ್ಥಿಯ ವಿಚಾರಣೆ ಮಾಡದಂತೆ ಯಾರು ಬೆಂಬಲವಾಗಿ ನಿಂತರು? ಆ ಅಭ್ಯರ್ಥಿಯನ್ನು ಬಿಟ್ಟು ಕಳುಹಿಸಿದ್ದು ಏಕೆ? ನಂತರ 20 ದಿನ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಿ ಮತ್ತೆ ಆತನನ್ನು ವಿಚಾರಣೆಗೆ ಕರೆತಂದದ್ದು, ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದು ಪರೋಕ್ಷವಾಗಿ ಅಶ್ವತ್ಥನಾರಾಯಣ ಅವರ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ | ಡಿ.ಕೆ. ಶಿವಕುಮಾರ್ ಬಾಯಲ್ಲಿ ನಿತ್ಯನಿರಂತರ ʼನಾರಾಯಣ ಜಪʼ
ಅಧಿಕಾರಿಗಳಿಗೆ ಕುಮಾರಸ್ವಾಮಿ ಅಭಿನಂದನೆ
ಅಮೃತ್ ಪಾಲ್ ಬಂಧನವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, ಪಿಎಸ್ಐ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದು, ಇಂದು ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯನ್ನೇ ಬಂಧಿಸಿರುವ ಘಟನೆ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲೇ ಐತಿಹಾಸಿಕ. ಸಿಐಡಿ ತನಿಖಾ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಸಿಐಡಿ ನೇತೃತ್ವ ವಹಿಸಿರುವ ದಕ್ಷ ಅಧಿಕಾರಿ, ಪಿ.ಎಸ್. ಸಂಧು ಅವರು, ಎಷ್ಟೇ ರಾಜಕೀಯ ಮತ್ತು ಅಧಿಕಾರಿಶಾಹಿ ಮಟ್ಟದಲ್ಲಿ ಒತ್ತಡ ಎದುರಾದರೂ ಮಣಿಯದೆ ತನಿಖಾ ತಂಡವನ್ನು ಮುನ್ನಡೆಸಿದ್ದಾರೆ. ಅವರಿಗೂ ಅಭಿನಂದನೆಗಳು. ಪಿಎಸ್ಐ ಕರ್ಮಕಾಂಡದ ತನಿಖೆಯಲ್ಲಿ ಸಿಐಡಿ ಸಾಗಬೇಕಿರುವ ದೂರ ಬಹಳಷ್ಟಿದೆ. ಕೆಳ, ಹಿರಿಯ ಹಂತದ ಅಧಿಕಾರಿಗಳ ಜತೆಗೆ ಸರ್ಕಾರದ ಮಟ್ಟದಲ್ಲಿ ಅತ್ಯಂತ ಪ್ರಭಾವಿ ಸ್ಥಾನಗಳಲ್ಲಿರುವ ಕಿಂಗ್‌ಪಿನ್‌ಗಳನ್ನು ಸಿಐಡಿ ಹಿಡಿಯಬೇಕಿದೆ. ಯಾವುದೇ ಕಾರಣಕ್ಕೂ ಈ ಪ್ರಭಾವಿಗಳು ತಪ್ಪಿಸಿಕೊಳ್ಳಬಾರದು.
ಪಿಎಸ್ಐ ಹಗರಣದಲ್ಲಿ ಒಬ್ಬರು ಮಹಾನ್ ಕಿಂಗ್ ಪಿನ್ ಇದ್ದಾರೆ, ಅವರ ಹೆಸರು ಹೇಳಿದರೆ ಸರ್ಕಾರವೇ ಬಿದ್ದು ಹೋಗುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಹೀಗೆ ಹೇಳಿದಾಗ, ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದಿದ್ದರು. ದಾಖಲೆ ಕೊಡಿ ಎಂದಿದ್ದರು. ಈಗ ಅವರು ಏನು ಹೇಳುತ್ತಾರೆ? ಎಂದು ಟೀಕಾಕಾರರಿಗೆ ಸವಾಲೆಸೆದಿದ್ದಾರೆ.
ಇದನ್ನೂ ಓದಿ | ಮನವಿ ಕೊಡಲು ಬಂದವರು ಮುತ್ತಿಗೆ ಹಾಕಲ್ಲ: HD ಕುಮಾರಸ್ವಾಮಿ ಆಕ್ರೋಶ