ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿತನಾಗಿರುವ ಅತ್ಯಂತ ಹಿರಿಯ ಸರ್ಕಾರಿ ಅಧಿಕಾರಿ ಅಮೃತ್ ಪಾಲ್ ಬಳಿ ಡೈರಿಯೊಂದು ಪತ್ತೆಯಾಗಿದ್ದು, ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ನಡುಕ ಆರಂಭವಾಗಿದೆ.
545 ಪಿಎಸ್‌ಐ ನೇಮಕಾತಿ ಕುರಿತಂತೆ ಒಎಂಆರ್ ಶೀಟ್ ತಿದ್ದುವ ಹಾಗೂ ಬ್ಲೂಟೂತ್ ಉಪಕರಣಗಳ ಮೂಲಕ ಭ್ರಷ್ಟಾಚಾರದ ಆರೋಪದಲ್ಲಿ ಈಗಾಗಲೆ ತನಿಖೆ ನಡೆಯುತ್ತಿದೆ. ತನಿಖೆಯ ಮುಂದುವರಿದ ಭಾಗವಾಗಿ, ನೇಮಕದ ಹೊಣೆ ಹೊತ್ತಿದ್ದ ಎಡಿಜಿಪಿ ಅಮೃತ್ ಪಾಲ್ ಅವರನ್ನು ಕಳೆದ ವಾರ ಸಿಐಡಿ ಬಂಧಿಸಿತ್ತು.
ಸಹಕಾರನಗರದಲ್ಲಿ ಅಮೃತ್ ಪಾಲ್ ಅವರಿಗೆ ಸೇರಿದ ಮನೆ ಹಾಗೂ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಅನೇಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಸಿಐಡಿ ಅಧಿಕಾರಿಗಳಿಗೆ ಪ್ರಮುಖ ದಾಖಲೆಗಳ ಜತೆಗೆ ಅಮೃತ್ ಪಾಲ್ ಡೈರಿಯೂ ಸಿಕ್ಕಿತ್ತು. ಅಧಿಕಾರಿಗಳು ಅದನ್ನೂ ಮಹಜರು ಮಾಡಿ ವಶಕ್ಕೆ ಪಡೆದುಕೊಂಡಿದ್ದರು.
ತನಿಖೆ ಮುಂದುವರಿದಂತೆ ಡೈರಿಯನ್ನು ತೆರೆದು ಸಿಐಡಿ ಅಧಿಕಾರಿಗಳು ನೋಡಿದ್ದಾರೆ. ಪಿಎಸ್‌ಐ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ಮಹತ್ವದ ಅಂಶಗಳು ಡೈರಿಯಲ್ಲಿವೆ ಎನ್ನಲಾಗಿದೆ. ಮುಖ್ಯವಾಗಿ ರಾಜಕೀಯ ಮುಖಂಡರು, ಐಎಎಸ್ ಅಧಿಕಾರಿಗಳು, ಡಿವೈಎಸ್‌ಪಿಗಳು, ಪ್ರಭಾವಿಗಳ ಹೆಸರು ಉಲ್ಲೇಖವಾಗಿದೆ.
ಇದನ್ನೂ ಓದಿ | PSI Scam | 1,974 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ: ದಿವ್ಯಾ ಹಾಗರಗಿ ಡೀಲ್ ಮಾಹಿತಿ ಬಹಿರಂಗ
ಪ್ರಭಾವಿಗಳು ತಮ್ಮ ಪರವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸೂಚನೆ ನೀಡಿರುವುದು ತಿಳಿದುಬಂದಿದೆ. ಈ ಮಾಹಿತಿಯನ್ನು ಅಮೃತ್ ಪಾಲ್ ಅವರೇ ಬರೆದಿದ್ದಾರೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಹಾಗಾಗಿ ಡೈರಿಯನ್ನು ವಿಧಿವಿಜ್ಞಾನ ಪರೀಕ್ಷೆಗೆ (ಎಫ್‌ಎಸ್‌ಎಲ್) ಕಳಿಸಿಕೊಡಲಾಗಿದೆ. ಕೈಬರಹ ಅವರದ್ದೆ ಎಂಬುದು ಖಾತ್ರಿಯಾದ ನಂತರ ತನಿಖೆ ಮುಂದುವರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾಸಕನ ಪುತ್ರನ ಹೆಸರು ಉಲ್ಲೇಖ
ಪಿಎಸ್‌ಐ ಹಗರಣದ ಸಂಬಂಧ ಕಲಬುರಗಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಅಫಜಲಪುರ ಶಾಸಕ ಎಂ. ವೈ. ಪಾಟೀಲ್ ಪುತ್ರನ ಹೆಸರು ತಳುಕುಹಾಕಿಕೊಂಡಿದೆ. ಈ ಕುರಿತು, ಈಗಾಗಲೆ ಬಂಧಿತನಾಗಿರುವ ರುದ್ರಗೌಡ ಪಾಟೀಲ್ ಹೇಳಿಕೆ ನೀಡಿದ್ದಾನೆ. ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಪುತ್ರ ಅರುಣ ಕುಮಾರ ಕರೆ ಮಾಡಿ, ತಮ್ಮ ಜತೆಗೆ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಹಯ್ಯಾಳಿ ದೇಸಾಯಿ ಅವರನ್ನು ಪಿಎಸ್‌ಐ ಆಗಿ ಆಯ್ಕೆ ಮಾಡುವಂತೆ ಕೇಳಿಕೊಂಡರು. ನಾನು ಮಂಜುನಾಥ ಮೇಳಕುಂದಿಯವರ ಫೋನ್ ನಂಬರ್ ಕೊಟ್ಟೆ ಎಂದು ರುದ್ರಗೌಡ ಪಾಟೀಲ್ ಹೇಳಿದ್ದಾನೆ.
ಈ ಆರೋಪದ ಕುರಿತು ಶಾಸಕ ಎಂ. ವೈ. ಪಾಟೀಲ್ ಪ್ರತಿಕ್ರಿಯಿಸಿದ್ದು, ಇದರ ಕುರಿತು ನಾನೇನು ಹೇಳುವುದು? ನನಗಂತೂ ಇದರ ಕುರಿತು ಮಾಹಿತಿ ಇಲ್ಲ. ಅವರಿಗೇ ಕೇಳಿದರೆ ತಿಳಿಯುತ್ತದೆ. ಯಾರೇ ತಪ್ಪು ಮಾಡಿದ್ದರೂ ಕಾನೂನು ಕ್ರಮ ಆಗಿಯೇ ಆಗುತ್ತದೆ. ಅದಕ್ಕೆ ಹೆಚ್ಚಿನ ಮಹತ್ವ ನೀಡುವುದು ಬೇಡ. ಸಾರ್ವಜನಿಕ ಜೀವನದಲ್ಲಿ, ಯಾರೋ ಏನೋ ಹೇಳಿದರು ಎನ್ನುವುದಕ್ಕೆ ಉತ್ತರ ನೀಡಲಾಗುವುದಿಲ್ಲ. ಮಾಹಿತಿಯೇ ಇಲ್ಲದೆ ಉತ್ತರ ನೀಡಲಾಗದು ಎಂದಿದ್ದಾರೆ.
ನಮ್ಮಲ್ಲಿಗೆ ನಿತ್ಯ ನೂರಾರು ಜನರು ಬರುತ್ತಾರೆ. ಕೆಲವರು ಸುಳ್ಳು ಸಮಸ್ಯೆಗಳನ್ನೂ ತರುತ್ತಾರೆ. ಅಂತಹ ಸಮಯದಲ್ಲಿ ಸಮಾಧಾನ ಮಾಡಲು ಏನೋ ಹೇಳಿ ಕಳಿಸಿರುತ್ತೇವೆ. ನಮ್ಮ ಗನ್‌ಮನ್, ಸರ್ಕಾರದಿಂದ ನಿಯೋಜಿಸಲಾಗಿದ್ದವರು. ಅವರನ್ನು ನಾವು ನೇಮಿಸಿಕೊಂಡಿಲ್ಲ, ನಮ್ಮ ಬಂಧು ಬಳಗವೂ ಅಲ್ಲ ಎಂದು ಎಂ.ವೈ. ಪಾಟೀಲ್ ಹೇಳಿದ್ದಾರೆ.
ಸದ್ಯದಲ್ಲೆ ಶಾಸಕರ ಪುತ್ರನನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ | ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ, ಬಂಧಿತ ಎಡಿಜಿಪಿ ಅಮೃತ್ ಪಾಲ್ ವಿಚಾರಣೆ ಇಂದು