ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ (PSI Scam) ಪ್ರಕರಣ ಹಿನ್ನೆಲೆಯಲ್ಲಿ ಎಡಿಜಿಪಿ ಅಮೃತ್ ಪೌಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 52 ನೇ ಸೆಷನ್ಸ್ ನ್ಯಾಯಾಲಯವು, ಈ ಪ್ರಕರಣ ಗಂಭೀರವಾಗಿದ್ದು, 545 ಪಿಎಸ್ಐ ನೇಮಕಾತಿಯ ಅಕ್ರಮ ಪ್ರಕರಣವಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಇನ್ನೂ ಚಾರ್ಜ್‌ಶೀಟ್ ಸಲ್ಲಿಕೆ ಆಗಿಲ್ಲ. ಆರೋಪಿ ತುಂಬಾ ಪ್ರಭಾವಿ ಆಗಿರುವ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶದ ಸಾಧ್ಯತೆ ಇದೆ. ಅಲ್ಲದೆ, ಹಗರಣದ ಸಂಬಂಧ ಸಿಸಿಟಿವಿ ದೃಶ್ಯ ಪರಿಶೀಲನಾ ಹಂತದಲ್ಲಿದೆ.
ಜತೆಗೆ ಹೈಕೋರ್ಟ್ ಕೂಡಾ ಆರೋಪಿಗಳಿಗೆ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ನೀಡಬಾರದು ಎಂದು ಸಿಐಡಿ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ನ್ಯಾಯಾಲವು ಜಾಮೀನು ನಿರಾಕರಿಸಿದ್ದು, ಎಡಿಜಿಪಿ ಅಮೃತ್ ಪೌಲ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಅಮೃತ್ ಪಾಲ್ ಮೇಲಿರುವ ಆರೋಪವೇನು?
545 ಪಿಎಸ್‌ಐ ಅಕ್ರಮದಲ್ಲಿ ಎಡಿಜಿಪಿ ಅಮೃತ್ ಪಾಲ್ ಹಾಗೂ ಆರೋಪಿ ಶಾಂತಕುಮಾರ್ ನಡುವೆ 1.36 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿದ್ದು, ಮೊಬೈಲ್ ದತ್ತಾಂಶವನ್ನು ಅಳಿಸಿ ಹಾಕಲಾಗಿದೆ ಎಂದು ಸಿಐಡಿ ತಂಡ ಆರೋಪಿಸಿದೆ. ಸತತ ಮೂರು ಬಾರಿ ವಿಚಾರಣೆ ನಡೆಸಿದ ಸಿಐಡಿ ಜುಲೈ 4ರಂದು ಅಮೃತ್ ಪಾಲ್‌ರನ್ನು ವಶಕ್ಕೆ ಪಡೆದುಕೊಂಡಿತ್ತು. ಬಳಿಕ ಜುಲೈ 16ರಂದು ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿತ್ತು.
ಇದನ್ನೂ ಓದಿ | PSI Scam | ರಾಜಕಾರಣಿಗಳ ಬೆಂಬಲವಿಲ್ಲದೆ ಪಿಎಸ್‌ಐ ಅಕ್ರಮ ಸಾಧ್ಯವೇ?; ಪ್ರಿಯಾಂಕ್ ಖರ್ಗೆ ಪ್ರಶ್ನೆ