ಬೆಂಗಳೂರು: ಪಿಎಸ್ಐ ನೇಮಕಾತಿ (PSI scam) ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತಿಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಬೆಳಗಾವಿ ಮೂಲದ ಸಿದ್ದಲಿಂಗಪ್ಪ ಪಡಸಾವಿಗೆ, ಬೀರಪ್ಪ ಮೇಟಿ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಬ್ಬರು ಅಕ್ರಮದಿಂದ ಪಿಎಸ್ಐ ಆಗಿ ಆಯ್ಕೆ ಆಗಿದ್ದ ಅಭ್ಯರ್ಥಿಗಳು ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಒಎಂಆರ್ ಶೀಟ್ ತಿದ್ದಿದ ಆರೋಪದಲ್ಲಿ ಸಿಐಡಿ ವಿಚಾರಣೆ ನಡೆಸುತ್ತಿದೆ. ಪಿಎಸ್ ಪರೀಕ್ಷೆ ಅಕ್ರಮದ ಸಂಬಂಧ ಪೊಲೀಸರು ಈಗಾಗಲೇ ಮುಖ್ಯ ಆರೋಪಿ ದಿವ್ಯಾ ಹಾಗರಗಿ, ಅಮೃತ್ ಪಾಲ್, ಜಾಗೃತ್ ಸೇರಿ 26ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣವೇನು?
545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಹುದ್ದೆಗೆ 2021ರ ಆಗಸ್ಟ್ 3ರಂದು ರಾಜ್ಯಾದ್ಯಂತ ಪರೀಕ್ಷೆಗಳು ನಡೆದಿದ್ದವು. 2022ರ ಜನವರಿ 19 ರಂದು ಹೊರಬಂದಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯ ನಂತರ ವಿವಾದ ಭುಗಿಲೆದ್ದಿತ್ತು. ಪರೀಕ್ಷೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ರೀತಿ ಅನೇಕ ಅಭ್ಯರ್ಥಿಗಳು ದೂರು ನೀಡಿದ್ದರಿಂದ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ಗೃಹ ಇಲಾಖೆ ವಹಿಸಿತ್ತು.
ಇದನ್ನೂ ಓದಿ | ಪಿಎಸ್ಐ ಕಾಟಕ್ಕೆ ರೋಸಿ ಹೋದ ಯುವಕ ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ