Site icon Vistara News

Rain News | ಡ್ರೈ ಕಿಟ್‌ ಯೋಜನೆ ಮೂರು ದಿನದಲ್ಲಿ ಜಾರಿ: ಸಚಿವ ಆರ್. ಅಶೋಕ್

ashok mandya visit

ಮಂಡ್ಯ: ‌ರಾಜ್ಯದ ನೆರೆ ಸಂತ್ರಸ್ತರಿಗಾಗಿ (Rain News) ಡ್ರೈ ಕಿಟ್ ವಿತರಿಸುವ ಯೋಜನೆಗೆ ಇನ್ನೆರಡು ಮೂರು ದಿನದಲ್ಲಿ ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು. ಟಾರ್ಚ್, ಕೊಡೆ, ದಿನಸಿ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್ ಅನ್ನು ಸಂತ್ರಸ್ತರಿಗೆ ವಿತರಣೆ ಮಾಡಲು ತುರ್ತಾಗಿ ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಆರ್.‌ ಅಶೋಕ್ ತಿಳಿಸಿದರು.

ಜಿಲ್ಲೆಯಲ್ಲಿ ಮಳೆ ಹಾನಿ ವೀಕ್ಷಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್‌, ನೆರೆ ಹಾವಳಿಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಪರಿಹಾರ ಕಾರ್ಯಕ್ಕೆ ಸೂಕ್ತ ನೆರವು ಒದಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲೂ ಮನವಿ ಮಾಡಲಾಗಿದೆ. ಶೀಘ್ರವೇ ರಾಜ್ಯದ ಎಲ್ಲ ಜಿಲ್ಲೆಗಳಿಂದ ವರದಿ ಪಡೆದು, ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಾಗುವುದು ಎಂದರು.‌

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟದ ಎಲ್ಲ ಸಚಿವರು ನೆರೆ ಹಾವಳಿಯ ಖುದ್ದು ವೀಕ್ಷಣೆ, ಪರಿಹಾರ ಕಾಮಗಾರಿಗಳ ಅನುಷ್ಠಾನ ಸಂಬಂಧ ರಾಜ್ಯಾದ್ಯಂತ ಪ್ರವಾಸ ಪ್ರಾರಂಭಿಸಿದ್ದೇವೆ. ನೆರೆ ಸಂತ್ರಸ್ತರಿಗೆ ಸಾಂತ್ವನದ ಜತೆಗೆ ಸೂಕ್ತ ಪರಿಹಾರ ಕಲ್ಪಿಸುವ ಹೊಣೆ ನಿಭಾಯಿಸುವುದು ಸರ್ಕಾರದ ಆದ್ಯತೆ ಎಂದು ಆರ್. ಅಶೋಕ್ ಹೇಳಿದರು.

ಇದನ್ನೂ ಓದಿ | Heavy Rain | ಸಂಪಾಜೆ ಘಾಟ್ ರಸ್ತೆಯಲ್ಲಿ ಬಿರುಕು; ಸಾಲುಗಟ್ಟಿ ನಿಂತ ನೂರಾರು ಲಾರಿಗಳು

500 ಕೋಟಿ ಬಿಡುಗಡೆ

ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳಿಗಿಂತಲೂ ದುಪ್ಪಟ್ಟು ಪರಿಹಾರ ಮೊತ್ತವನ್ನು ಸಂತ್ರಸ್ತರಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ತಿಂಗಳೊಳಗೆ ಪರಿಹಾರ ಹಣ ಸಂತ್ರಸ್ತರಿಗೆ ತಲುಪುವ ವ್ಯವಸ್ಥೆಯನ್ನು ಕಂದಾಯ ಇಲಾಖೆ ಮಾಡಿದೆ. ನೆರೆ ಪರಿಹಾರಕ್ಕೆ ಮುಖ್ಯಮಂತ್ರಿಗಳು ಈಗಾಗಲೇ 500 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಅಶೋಕ್ ತಿಳಿಸಿದರು.

ಮನೆ ಹಾನಿಗೆ ಒಳಗಾದವರಿಗೆ ಮನೆ ಕಟ್ಟಿಕೊಳ್ಳಲು ತಲಾ 4 ಲಕ್ಷ ರೂ. ವಿತರಣೆ ಮಾಡಲಾಗುವುದು. ಮಳೆಯಾಶ್ರಿತ, ನೀರಾವರಿ ಕೃಷಿ ಪ್ರದೇಶ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಿಂದೆ ನೀಡುತ್ತಿದ್ದಕ್ಕಿಂತ ಎರಡು ಪಟ್ಟು ಪರಿಹಾರವನ್ನು ವಿತರಣೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಾಫ್ಟ್ ವೇರ್ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಮಳೆ ಅವಾಂತರಕ್ಕೆ ಒಟ್ಟು ೬೪ ಬಲಿ

ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಕರ್ನಾಟಕದ 14 ಜಿಲ್ಲೆಗಳು ಪ್ರವಾಹಪೀಡಿತವಾಗಿದ್ದರೆ, 115 ಗ್ರಾಮಗಳನ್ನು ಮಳೆ ಬಾಧಿತವೆಂದು ಗುರುತಿಸಲಾಗಿದೆ. ಸಿಡಿಲು ಬಡಿತಕ್ಕೆ 14, ಮರು ಬಿದ್ದು 4, ಮನೆ ಕುಸಿತದಿಂದ 15, ಪ್ರವಾಹಕ್ಕೆ ಸಿಲುಕಿ 19, ಭೂ ಕುಸಿತದಿಂದ 9 ಮತ್ತು ವಿದ್ಯುತ್ ಅವಘಡದಿಂದ 1 ಸೇರಿದಂತೆ ಒಟ್ಟಾರೆಯಾಗಿ 64 ಮಂದಿಯ ಸಾವು ಸಂಭವಿಸಿದೆ ಎಂದು ಸಚಿವ ಆರ್.‌ ಅಶೋಕ್ ವಿವರಣೆ ನೀಡಿದರು.

ರಾಜ್ಯದ 18 ಸಾವಿರ ಮನೆಗಳಿಗೆ ಹಾನಿ

18,280 ಹೆಕ್ಟೇರ್ ಕೃಷಿ ಬೆಳೆ, 4,565 ಹೆಕ್ಟೇರ್ ತೋಟಗಾರಿಕೆ ಬೆಳೆ, 1392 ಕಿ.ಮೀ. ರಸ್ತೆ, ಸೇತುವೆ ಮತ್ತು ಕಿರು ಸೇತುವೆಗಳು 899, ಶಾಲೆಗಳು 4324, ಅಂಗನವಾಡಿ ಕೇಂದ್ರಗಳು 2146, ವಿದ್ಯುತ್ ಕಂಬಗಳು 16,510, ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು 1580, 18 ಸಾವಿರ ಮನೆಗಳಿಗೆ ಹಾನಿಯಾಗಿದೆ. 61 ಕೆರೆ ಏರಿಗಳು ಒಡೆದಿವೆ ಎಂದು ಅವರು ಹೇಳಿದರು.

ಮಂಡ್ಯದಲ್ಲಿ 168 ಹೆಕ್ಟೇರ್ ಕೃಷಿ ಜಮೀನಿಗೆ ಹಾನಿ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಂಡ್ಯ ಜಿಲ್ಲೆಯ 168 ಹೆಕ್ಟೇರ್ ಕೃಷಿ ಜಮೀನು, 138 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. 30 ಮನೆಗಳು ಸಂಪೂರ್ಣ ಹಾನಿಗೆ ಒಳಗಾಗಿದ್ದು, 14 ಕೆರೆಗಳು ಒಡೆದಿವೆ. 46 ಜಾನುವಾರುಗಳ ಸಾವು ಸಂಭವಿಸಿದೆ. 185 ಕಿ.ಮೀ.ನಷ್ಟು ರಸ್ತೆ ಹಾಳಾಗಿದೆ. 7 ಸೇತುವೆಗಳು ಕುಸಿದಿವೆ ಎಂದು ಅಶೋಕ್‌ ತಿಳಿಸಿದರು.

ಇದನ್ನೂ ಓದಿ | Heavy Rain | ಧಾರಾಕಾರ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ರೈತ

Exit mobile version