ಮೈಸೂರು: ವಿಜ್ಞಾನ ಎಲ್ಲ ಕಡೆಗೂ ಒಂದೇ ಅಲ್ವೇ? ಬ್ಲಾಸ್ಟಿಂಗ್ ಪ್ರಯೋಗ ಮಾಡುವುದಾದರೆ ಸರ್ಕಾರಿ ಜಾಗದಲ್ಲಿ ಮಾಡಬಹುದಲ್ಲವೇ? ನೀವು ವಿಜ್ಞಾನಿಗಳು ಎಲ್ಲಿ ಬ್ಲಾಸ್ಟ್ ಮಾಡಿದರೆ ಎಷ್ಟು ದೂರದವರೆಗೆ ಪರಿಣಾಮ ಉಂಟಾಗುತ್ತದೆ ಎಂಬುದು ನಿಮಗೆ ಗೊತ್ತಿರಬೇಕು ಎಂದಿದ್ದಾರೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಕಿಡಿಕಾರಿದ್ದು, ಬೇಬಿ ಬೆಟ್ಟದಲ್ಲಿ (Baby Hill) ಬ್ಲಾಸ್ಟಿಂಗ್ ಟ್ರಯಲ್ ರನ್‌ಗೆ ಮುಂದಾಗಿದ್ದ ಜಿಲ್ಲಾಡಳಿತದ ನಡೆ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಅಸಮಾಧಾನವನ್ನು ಹೊರಹಾಕಿರುವ ಪ್ರಮೋದಾದೇವಿ ಒಡೆಯರ್, ಬೇಬಿ ಬೆಟ್ಟದಲ್ಲೇ (Baby Hill) ಟ್ರಯಲ್ ಮಾಡಬೇಕು ಅಂತೇನೂ ಇಲ್ಲ. ವಿಜ್ಞಾನ ಎಲ್ಲ ಕಡೆಗೂ ಒಂದೇ. ಆದ್ದರಿಂದ ಬೇರೆ ಪ್ರದೇಶದಲ್ಲೂ ಟ್ರಯಲ್ ಮಾಡಬಹುದು. ನಾನು ಪರ ಅಥವಾ ವಿರೋಧ ಎಂದು ಮಾತನಾಡುವುದಿಲ್ಲ. ಬೇಬಿ ಬೆಟ್ಟ ನಮ್ಮ ಖಾಸಗಿ ಆಸ್ತಿ ಎಂಬುದಷ್ಟೇ ನಮ್ಮ ವಾದ. ಮುಂದೆ ಅದನ್ನು ನಮ್ಮ ಹೆಸರಿಗೆ ಖಾತೆ ಮಾಡಿದರೆ ಗಣಿಗಾರಿಕೆ ಮಾಡುವಂತಿಲ್ಲ. ಅಲ್ಲಿ ಗಣಿಗಾರಿಕೆ ಮಾಡಲು ಏನೂ ಉಳಿಯುವುದಿಲ್ಲ ಎಂದಿದ್ದಾರೆ.
ಪ್ರತಿಭಟನೆ ನನಗೆ ಬೇಕಿಲ್ಲ
ರೈತರು ಹಾಗೂ ಸ್ಥಳೀಯ ಗ್ರಾಮಸ್ಥರು ಬೇಬಿ ಬೆಟ್ಟ ಟ್ರಯಲ್ ಬ್ಲಾಸ್ಟಿಂಗ್ ಅನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ. ಆದರೆ, ಪ್ರತಿಭಟನೆ ಜಾಗಕ್ಕೆ ಹೋಗುವುದಿಲ್ಲ, ನನ್ನ ಮಧ್ಯಪ್ರವೇಶದಿಂದ ಮುಂದೆ ಏನೇನೋ ಆಗಬಹುದು. ಹೀಗಾಗಿ ಅದು ಯಾವುದು ನನಗೆ ಬೇಕಾಗಿಲ್ಲವೆಂದು ಸುದ್ದಿಗೋಷ್ಠಿಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಇದನ್ನೂ ಓದಿ | KRS Dam | ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್ ತಾತ್ಕಾಲಿಕ ಮುಂದೂಡಿಕೆ? ಇನ್ನೂ ಗೆಸ್ಟ್‌ಹೌಸ್‌ನಲ್ಲೇ ಇದ್ದಾರೆ ವಿಜ್ಞಾನಿಗಳು!