ಬೆಂಗಳೂರು: ರಾಮನಗರದಲ್ಲಿ (Ramanagara News) 40 ಮಂದಿ ವಕೀಲರ ಮೇಲೆ ಎಫ್‌ಐಆರ್ ದಾಖಲಿಸಿರುವ (FIR on Lawyers) ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಕೀಲರ ಸಂಘ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವ ನಡುವೆಯೇ ಅದು ರಾಜಕೀಯವಾಗಿಯೂ ಗಮನ ಸೆಳೆಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಈ ಘಟನೆಯನ್ನು ದೇಶದ್ರೋಹಿಗಳ ರಕ್ಷಣೆ ಎಂದು ವ್ಯಾಖ್ಯಾನಿಸಿದೆ. ವಕೀಲರು ರಾಮನಗರ ಎಸ್‌ಪಿ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ದು, ಅವರ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಬೆಂಬಲ ಘೋಷಿಸಿದ್ದಾರೆ ಮತ್ತು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ.
BY Vijayendra : ಬಿವೈ ವಿಜಯೇಂದ್ರ ಅವರ ಟ್ವಿಟರ್ ಪೋಸ್ಟ್‌ನಲ್ಲಿ ಏನಿದೆ?
‘ದೇಶ ಭಕ್ತರ ಸೆರೆ – ವಿದ್ರೋಹಿಗಳ ಪೊರೆ’ ಎಂಬುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೀತಿಯಾಗಿದೆ.
ಜ್ಞಾನವ್ಯಾಪಿ ಮಸೀದಿ ಸಂಬಂಧ ತೀರ್ಪು ನೀಡಿದ ನ್ಯಾಯಾಧೀಶರ ಕುರಿತು ಅವಹೇಳನ
ಮಾಡಿ ನ್ಯಾಯಾಂಗ ಹಾಗೂ ಸವಿಂಧಾನವನ್ನು ಧಿಕ್ಕರಿಸಿದ ರಾಷ್ಟ್ರ ವಿಧ್ವಂಸಕ ಮನಸ್ಥಿತಿಯ ಮತೀಯವಾದಿ ವಿದ್ರೋಹಿಯನ್ನು ಸ್ವಯಂ ದೂರು ದಾಖಲಿಸಿಕೊಂಡು ರಾಮನಗರ ಪೋಲಿಸರು ಬಂಧಿಸಿ ಕ್ರಮ ಕೈಗೊಳ್ಳಬೇಕಾಗಿತ್ತು.
ಆದರೆ ಈ ಸಂಬಂಧ ವಕೀಲರ ಸಂಘ ದೂರು ನೀಡಿದರೂ ಆರೋಪಿಯನ್ನು ಬಂಧಿಸದೇ ಸ್ವಧರ್ಮೀಯ ಎಂಬ ಕಾರಣಕ್ಕೆ ಆರೋಪಿಯಿಂದಲೇ ದೂರು ಬರೆಸಿಕೊಂಡು ವಕೀಲರ ಮೇಲೇ ದೂರು ದಾಖಲಿಸಿಕೊಂಡು
ಉದ್ಧಟತನ ಹಾಗೂ ಸ್ವಜನ ಪಕ್ಷಪಾತ ಮೆರೆದಿರುವ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ, ಈ ಕೂಡಲೇ ಈ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಬಂಧಿಸಿ ವಿಚಾರಣೆ ಆರಂಭಿಸಬೇಕಿದೆ.
ದೇಶ ವಿರೋಧಿ ಆರೋಪಿತನ ರಕ್ಷಣೆಗೆ ನಿಂತ ಸಬ್ ಇನ್ಸಪೆಕ್ಟರ್ ತನ್ವೀರ್ ಹುಸೇನ್ ಬೆನ್ನ ಹಿಂದೆ ಯಾವುದಾದರೂ ಬಲಾಢ್ಯ ಶಕ್ತಿ ಇದ್ದು ಕುಮ್ಮಕ್ಕು ನೀಡಿರಲೇಬೇಕು, ಇಲ್ಲವಾದರೆ ನ್ಯಾಯಾಧೀಶರನ್ನೇ ಅವಹೇಳನ ಮಾಡುವ ದುಷ್ಟನ ರಕ್ಷಣೆಗೆ ನಿಲ್ಲಲು ಸಬ್ ಇನ್ಸಪೆಕ್ಟರ್ ಗೆ ಇಷ್ಟೊಂದು ಧೈರ್ಯ ಬರಲು ಹೇಗೆ ಸಾಧ್ಯ?
ಈ ಘಟನೆಯ ಹಿಂದೆ ಕಾಂಗ್ರೆಸ್ ಇಲ್ಲವೆನ್ನುವುದನ್ನು ರುಜುವಾತು ಪಡಿಸಲು ಈ ಕೂಡಲೇ ಈ ಘಟನೆಯ ಹಿಂದಿರುವ ಸತ್ಯ ಹೊರತೆಗೆಯಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲಿ. ಈ ಸಂಬಂಧ ನ್ಯಾಯೋಜಿತ ಬೇಡಿಕೆ ಇಟ್ಟು ಧರಣಿ ನಡೆಸುತ್ತಿರುವ ವಕೀಲರ ಹೋರಾಟವನ್ನು ಕರ್ನಾಟಕ ಬಿಜೆಪಿ ಸಂಪೂರ್ಣವಾಗಿ ಬೆಂಬಲಿಸಲಿದೆ.
ಇದನ್ನೂ ಓದಿ: BY Vijayendra : ರಾಜ್ಯದ ಎಲ್ಲ 28 ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆ ವಾತಾವರಣ; ವಿಜಯೇಂದ್ರ ವಿಶ್ಲೇಷಣೆ
ಏನಿದು ರಾಮನಗರ ವಕೀಲರ ಪ್ರತಿಭಟನೆ ಪ್ರಕರಣ?
ಕಾಶಿಯ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ. ಆತನನ್ನು ಪೊಲೀಸರು ಬಂಧಿಸಿದ್ದರು. ಇದಕ್ಕೆ ಪ್ರತಿಯಾಗಿ ಚಾಂದ್ ಪಾಷಾರ ಕಡೆಯೊಬ್ಬರು ವಕೀಲರ ಸಂಘದ ಮೇಲೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಐಜೂರು ಪೊಲೀಸರು ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ ರದ್ದುಗೊಳಿಸಬೇಕು ಮತ್ತು ಪಿಎಸ್‌ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ.