ರಾಮನಗರ: ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಡಿ.ಕೆ. ಸುರೇಶ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಅವರು ನಾಮಪತ್ರ ಸಲ್ಲಿಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಅವರ ನಾಮಪತ್ರ ತಿರಸ್ಕೃತವಾದರೆ ಇರಲಿ ಎಂದು ಮುಂಜಾಗ್ರತೆಯಾಗಿ ಈ ಅವರ ಸಹೋದರರೂ ಆಗಿರುವ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ, ಸಿಬಿಐನಲ್ಲಿ ಹಲವಾರು ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಜತೆಗೆ ಜಾಮೀನು ರದ್ದು ಕೋರಿದ ಅರ್ಜಿಯ ವಿಚಾರಣೆ ಕೂಡ ಚಾಲ್ತಿಯಲ್ಲಿದೆ. ಈ ಎಲ್ಲ ಪ್ರಕರಣಗಳ ಮಾಹಿತಿಯನ್ನು ಅವರು ನಾಮಪತ್ರ ಸಲ್ಲಿಸುವಾಗ ನೀಡಿದ್ದಾರೆ. ಆದರೆ ಮಾಹಿತಿ ಕೊರತೆಯಾಗಿ ನಾಮಪತ್ರವನ್ನು ತಿರಸ್ಕರಿಸಿದರೆ ಕಷ್ಟ ಎಂಬ ಕಾರಣಕ್ಕೆ ಡಿ.ಕೆ.ಸುರೇಶ್‌ಗೂ ನಾಮಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ. ಈಗಾಗಲೇ ಸಚಿವ ಆರ್. ಅಶೋಕ್ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ನಾಮಪತ್ರ ಸಲ್ಲಿಕೆಯಲ್ಲಿನ ದೋಷವನ್ನು ಪತ್ತೆ ಹಚ್ಚಿ ಬಿಜೆಪಿ ಅವರನ್ನು ಕಣದಿಂದ ದೂರ ಇಡುವ ಪ್ರಯತ್ನ ನಡೆಸಬಹುದು ಎಂಬ ಕಾರಣಕ್ಕೆ ಡಿ ಕೆ ಶಿವಕುಮಾರ್ ಈ ಮುಂಜಾಗ್ರತೆಯ ಕ್ರಮ ತೆಗೆದುಕೊಂಡಿದೆ ಎಂದು ಸಹ ವಿಶ್ಲೇಷಿಸಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏ. 17 ರಂದೇ ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಸಾಗಿ ಬಂದು ನಾಮಪತ್ರ ಸಲ್ಲಿಸಿದ್ದರು.. ಅದಕ್ಕೂ ಮೊದಲು ಕನಕಪುರದ ಕೆಂಕೇರಮ್ಮ ದೇವಸ್ಥಾನಕ್ಕೆ ಡಿಕೆಶಿ ಕುಟುಂಬ ಸಮೇತ ತೆರಳಿ ಪೂಜೆ ಸಲ್ಲಿಸಿದ್ದರು. ನಂತರ ಸಾವಿರಾರು ಕಾರ್ಯಕರ್ತರ ಜತೆ ಬೃಹತ್ ಬೈಕ್ ರ‍್ಯಾಲಿ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದರು. ಅಭಿಮಾನಿಗಳು ಅವರನ್ನು ಹೆಗಲಿನ ಮೇಲೆ ಹೊತ್ತು ಮೆರವಣಿಗೆ ಮೂಲಕ ಚುನಾವಣಾ ಅಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಕರೆತಂದಿದ್ದರು.