Site icon Vistara News

Karnataka Election Results 2023 : ನಿಖಿಲ್‌ ಕುಮಾರಸ್ವಾಮಿಗೆ ಸೋಲು; ನಾಯಕರ ಗೆಲುವಿನ ಅಂತರದಲ್ಲೂ ಭಾರಿ ಕುಸಿತ

Karnataka Election Results 2023 Nikhil Kumaraswamy Loses From Ramanagaram

#image_title

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ (Karnataka Election Results 2023) ಜೆಡಿಎಸ್‌ ನಿರೀಕ್ಷೆಯಷ್ಟು ಸ್ಥಾನವನ್ನು ಗೆಲ್ಲದೆ ನಿರಾಸೆ ಅನುಭವಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿಯವರ ʻಪಂಚರತ್ನ ಯಾತ್ರೆʼ ಗಮನ ಸೆಳೆದಿತ್ತಾದರೂ ಮತ ಸೆಳೆಯುವಲ್ಲಿ ವಿಫಲವಾಗಿದೆ. ಕಳೆದ ಬಾರಿಗಿಂತ ಪಕ್ಷ ಸುಮಾರು 18 ಸ್ಥಾನಗಳನ್ನು ಕಳೆದುಕೊಂಡಿದೆ.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಕಣಕ್ಕಿಳಿದಿದ್ದ ಮೂವರಲ್ಲಿ ಸಹೋದರರಿಬ್ಬರು ಗೆದ್ದಿದ್ದಾರೆ. ಮೊಮ್ಮಗ ನಿಖಿಲ್‌ ಕುಮಾರ ಸ್ವಾಮಿ ಮತ್ತೆ ಸೋತಿದ್ದಾರೆ. ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಗೆಲುವಿನ ಅಂತರದಲ್ಲಿ ಭಾರಿ ಕುಸಿತವಾಗಿದೆ.

ನಿಖಿಲ್‌ ಕುಮಾರ ಸ್ವಾಮಿಗೆ ಇದು ಎರಡನೇ ಸೋಲು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿಖಿಲ್‌ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ವಿರುದ್ಧ ಸೋತಿದ್ದರು. ಈ ಬಾರಿ ಕಳೆದ ಬಾರಿ ತಾಯಿ ಅನಿತಾ ಕುಮಾರಸ್ವಾಮಿ ಗೆದ್ದಿದ್ದ ಕ್ಷೇತ್ರದಿಂದ (ರಾಮನಗರ ವಿಧಾನಸಭಾ ಕ್ಷೇತ್ರ) ಸ್ಪರ್ಧಿಸಿದ್ದ ನಿಖಿಲ್‌ ಕುಮಾರ ಸ್ವಾಮಿಯನ್ನು ವಿಜಯಲಕ್ಷ್ಮೀ ಕೈ ಹಿಡಿಯಲಿಲ್ಲ.

ರಾಮನಗರ ವಿಧಾನಸಭಾ ಕ್ಷೇತ್ರವೆಂದರೆ ಜೆಡಿಎಸ್‌ನ ಭದ್ರಕೋಟೆ ಎಂದೇ ಪ್ರಸಿದ್ಧಿ ಪಡೆದಿತ್ತು. ಅಲ್ಲಿ ಕಾಂಗ್ರೆಸ್‌ ಈಗ ಗೆದ್ದು ಬೀಗುತ್ತಿದೆ. ಈ ಕ್ಷೇತ್ರದಿಂದಲೇ ದೇವೇಗೌಡರು, ಎಚ್‌ ಡಿ ಕುಮಾರಸ್ವಾಮಿ ಗೆದ್ದು ಮುಖ್ಯಮಂತ್ರಿಯಾಗಿದ್ದರು. ಪುತ್ರ ನಿಖಿಲ್‌ಗಾಗಿ ಅನಿತಾ ಕುಮಾರಸ್ವಾಮಿ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಚುನಾವಣೆ ಘೋಷಣೆಯಾದಾಗಿನಿಂದ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ ಪುತ್ರನನ್ನು ಗೆಲ್ಲಿಸಲು ಪ್ರಚಾರ ನಡೆಸಿದ್ದರು.

ಮಾಜಿ ಪ್ರಧಾನಿ ದೇವೇಗೌಡ ಈ ಕ್ಷೇತ್ರದಲ್ಲಿ ಮೂರು ಬಾರಿ ಪ್ರಚಾರ ನಡೆಸಿದ್ದರೂ ಫಲ ನೀಡಲಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ತಮ್ಮನ್ನು ಸೋಲಿಸಲು ಯತ್ನಿಸುತ್ತಿವೆ ಎಂದು ನಿಖಿಲ್‌ ಕುಮಾರಸ್ವಾಮಿ ಆರೋಪಿಸುತ್ತಲೇ ಬಂದಿದ್ದರು.

ಮುಖ್ಯವಾಗಿ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವಲ್ಲಿ ನಿಖಿಲ್‌ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಜನರ ಭಾವನೆಗಳಿಗೆ ಜಿಡಿಎಸ್‌ ಸ್ಪಂದಿಸದೇ ಇರುವುದು ಸೋಲಿಗೆ ಕಾರಣ ಎಂದು ಗುರುತಿಸಲಾಗುತ್ತಿದೆ. ನಿಖಿಲ್‌ ಕುಮಾರಸ್ವಾಮಿ 76,975 ಮತಗಳನಷ್ಟೇ ಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 87,690 ಮತ ಪಡೆದಿದ್ದು, 10,715 ಮತಗಳಿಂದ ಗೆದ್ದಿದ್ದಾರೆ. ಬಿಜೆಪಿ ಇಲ್ಲಿ ಕೇವಲ 12,912 ಮತಗಳನ್ನು ಪಡೆದುಕೊಂಡಿವೆ. ಡಿ ಕೆ ಶಿವಕುಮಾರ್‌ ಸಹೋದರರ ಪರಿಶ್ರಮ ಇಲ್ಲಿ ಕಾಂಗ್ರೆಸ್‌ ಅನ್ನು ಗೆಲ್ಲಿಸಿದೆ.

ಕುಮಾರಸ್ವಾಮಿ, ರೇವಣ್ಣ ಗೆಲುವಿನ ಅಂತರವೂ ಕಡಿಮೆ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಈ ಬಾರಿ ಕಷ್ಟಪಟ್ಟು ಗೆದ್ದಿದ್ದಾರೆ. ಕಳೆದ ಬಾರಿ 21,530 ಮತಗಳಿಂದ ಗೆದ್ದಿದ್ದ ಅವರು ಈ ಬಾರಿ 15,915 ಮತಗಳ ಅಂತರದಿಂದ ಗೆದ್ದಿದ್ದಾರೆ.

ಕಳೆದ ಬಾರಿ 66,465 ಮತಗಳನ್ನು ಪಡೆದಿದ್ದ ಬಿಜೆಪಿಯ ಸಿ.ಪಿ ಯೋಗೇಶ್ವರ್ ಈ ಬಾರಿ 80,677 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿ ಎಚ್‌ ಡಿ ಕುಮಾರಸ್ವಾಮಿ 87,995 ಮತ ಪಡೆದಿದ್ದರು. ಈ ಬಾರಿ 96,922 ಮತ ಪಡೆದುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್.ಎಂ ರೇವಣ್ಣ 30,208 ಮತ ಪಡೆದಿದ್ದರು. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಕೇವಲ 15,374 ಮತ ಪಡೆದುಕೊಂಡಿದ್ದಾರೆ. ಹೀಗಾಗಿ ಕಳೆದ ಬಾರಿ ಕಾಂಗ್ರೆಸ್‌ಗೆ ಬಿದಿದ್ದ ಸುಮಾರು 15 ಸಾವಿರ ಮತಗಳು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಹಂಚಿಕೆಯಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ರೇವಣ್ಣಗೂ ತೀವ್ರ ಪೈಪೋಟಿ

ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಸುಲಭವಾಗಿ ಗೆಲ್ಲುತ್ತಿದ್ದ ಮಾಜಿ ಸಚಿವ ಎಚ್‌ ಡಿ ರೇವಣ್ಣ ಈ ಬಾರಿ ತೀವ್ರ ಸ್ಪರ್ಧೆ ಎದುರಿಸಿ ಬಹಳ ಕಡಿಮೆ ಮತಗಳ ಅಂತರದಿಂದ ಅಂದರೆ ಕೇವಲ 2,654 ಮತಗಳಿಂದ ಗೆದ್ದಿದ್ದಾರೆ. ಕಳೆದ ಬಾರಿ ಅವರು 43,832 ಮತಳ ಅಂತರದಿಂದ ಗೆದ್ದಿದ್ದರು. ಇದು ಅವರ ಆರನೇ ಗೆಲುವು. ಏಳು ಬಾರಿ ಸ್ಪರ್ಧಿಸಿರುವ ಅವರು ಒಮ್ಮೆ ಮಾತ್ರ ಸೋತಿದ್ದರು. ಗೆದ್ದಾಗಲೆಲ್ಲಾ ದೊಡ್ಡ ಮಾರ್ಜಿನ್‌ನಲ್ಲಿಯೇ ಗೆಲ್ಲುತ್ತಿದ್ದರು.

ಈ ಬಾರಿ ಹೆಚ್.ಡಿ.ರೇವಣ್ಣ 86, 401 ಮತ ಪಡೆದುಕೊಂಡಿದ್ದರೆ, ಕಾಂಗ್ರೆಸ್‌ನ ಶ್ರೇಯಸ್ ಪಟೇಲ್ 83, 747 ಮತ ಪಡೆದುಕೊಂಡಿದ್ದಾರೆ. ಬಿಜೆಪಿಯ ದೇವರಾಜೇಗೌಡ 4,666 ಮತ ಪಡೆದುಕೊಂಡಿದ್ದಾರೆ.

ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಬಿಜೆಪಿ ಮತ್ತೆ ಬಾವುಟ ಹಾರಿಸಿದೆ. ಕಳೆದ ಬಾರಿ ಹಾಸನದಲ್ಲಿ ಗೆದ್ದಿದ್ದ ಪ್ರೀತಂ ಗೌಡ ಈ ಬಾರಿ ಸೋತಿದ್ದರೂ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹೆಚ್.ಕೆ.ಸುರೇಶ್ 63,571 ಮತಗಳನ್ನು ಪಡೆದು 7,736 ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್‌ ಇಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು, ಬಿ. ಶಿವರಾಮ್ 55,835 ಮತ ಪಡೆದಿದ್ದಾರೆ. ಜೆಡಿಎಸ್‌ನ ಕೆ.ಎಸ್.ಲಿಂಗೇಶ್ 38,893 ಮತ ಪಡೆದಕೊಂಡಿದ್ದಾರೆ.

ಇನ್ನು ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಬಿಜೆಪಿಯ ಸಿಮೆಂಟ್ ಮಂಜು 58,604 ಮತ ಪಡೆದು, 2,056 ಮತಗಳಿಂದ ಅಂತರದಿಂದ ಗೆದ್ದಿದ್ದಾರೆ. ಜೆಡಿಎಸ್‌ನ ಹೆಚ್.ಕೆ.ಕುಮಾರಸ್ವಾಮಿ 56,548 ಮತ ಪಡೆದಿದ್ದರೆ, ಕಾಂಗ್ರೆಸ್ ನ ಮುರುಳಿಮೋಹನ್ 42,811 ಮತ ಪಡೆದಿಕೊಂಡಿದ್ದಾರೆ.

ಇದನ್ನೂ ಓದಿ: Ramanagara Election Results : ಜೆಡಿಎಸ್‌ ಭದ್ರಕೋಟೆ ರಾಮನಗರದಲ್ಲೇ ನಿಖಿಲ್‌ ಕುಮಾರಸ್ವಾಮಿಗೆ ಸೋಲು!

Exit mobile version