ರಾಮನಗರ: ಆಹಾರ ಅರಸಿ ಮತ್ತೆ ಕಾಡುಪ್ರಾಣಿಗಳು ನಾಡಿಗೆ ಲಗ್ಗೆಯಿಡುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿರುವ (Wild Animal Attack) ಪ್ರಕರಣಗಳು ಹೆಚ್ಚಾಗುತ್ತಿವೆ. ಸದ್ಯ ರಾಮನಗರ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ತೋಟದಲ್ಲಿ ನೀರು ಹಾಯಿಸುವಾಗ ಕಾಡಾನೆ ದಾಳಿಗೆ (Elephant attack) ರೈತರೊಬ್ಬರು ಬಲಿಯಾಗಿದ್ದಾರೆ. ಕನಕಪುರ ತಾಲೂಕಿನ ತಿಪ್ಪೂರು ಗ್ರಾಮದ ಶಿವರುದ್ರ (42) ಮೃತ ದುರ್ದೈವಿ.
ಶಿವರುದ್ರ ರೇಷ್ಮೆ ತೋಟದಲ್ಲಿ ನೀರು ಹಾಯಿಸುವಾಗ ಏಕಾಏಕಿ ಒಂಟಿ ಸಲಗವೊಂದು ದಾಳಿ ಮಾಡಿದೆ. ಆನೆಯಿಂದ ತಪ್ಪಿಸಿಕೊಳ್ಳಲು ಆಗದೆ ಅದರ ಕಾಲ್ತುಳಿತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವರುದ್ರ ಮನೆಗೆ ಬಾರದೆ ಇದ್ದಾಗ ತೋಟಕ್ಕೆ ಬಂದು ಹುಡುಕಾಟ ನಡೆಸಿದ್ದಾಗ ಶವವಾಗಿ ಪತ್ತೆಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಕಾಡಾನೆಯನ್ನು ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Elephant Attack : ಕಾಫಿ ತೋಟದ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ
ಕೊಪ್ಪಳದಲ್ಲಿ ಹೆಚ್ಚಾಯಿತು ಕರಡಿ ದಾಂಧಲೆ
ಕೊಪ್ಪಳದಲ್ಲಿ ಮತ್ತೆ ಕರಡಿ ಹಾವಳಿ ಹೆಚ್ಚಾಗಿದೆ. ರಾತ್ರೋರಾತ್ರಿ ಕಲ್ಲಗಂಡಿ ತೋಟಕ್ಕೆ ನುಗ್ಗಿದ ಎರಡು ಕರಡಿಗಳು ಹಣ್ಣು ತಿಂದು ಹಾಳು ಮಾಡಿವೆ. ಸಾವಿರಾರು ರೂಪಾಯಿ ಬೆಲೆ ಬಾಳುವ ಕಲ್ಲಗಂಡಿ ಬೆಳೆಯನ್ನು ಹಾಳು ಮಾಡಿದೆ. ಕೊಪ್ಪಳ ತಾಲೂಕಿನ ಸೂಳಿಕೇರಿ ತಾಂಡಾದಲ್ಲಿ ಈ ಘಟನೆ ನಡೆದಿದೆ.
ಶರಣಪ್ಪ ರಾಠೋಡ್ ಎಂಬುವವರ ಜಮೀನಿಗೆ ನುಗ್ಗಿದ್ದ ಎರಡು ಕರಡಿಗಳು ಒಂದು ಎಕರೆ ಪ್ರದೇಶದಲ್ಲಿ ಬೆಳದಿದ್ದ ಬೆಳೆಯನ್ನು ನಾಶ ಮಾಡಿವೆ. ಇತ್ತ ಜಮೀನಿನಲ್ಲಿ ಮಲಗಿದ್ದವರ ಮೇಲೆ ಕರಡಿಗಳು ದಾಳಿಗೆ ಮುಂದಾಗಿವೆ. ಕರಡಿ ಭಯದಿಂದ ಜಮೀನಿನಿಂದ ಓಡಿ ಹೋಗಿ ಶರಣಪ್ಪ ಜೀವ ಉಳಿಸಿಕೊಂಡಿದ್ದಾರೆ. ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಶರಣಪ್ಪ ಆಗ್ರಹಿಸಿದ್ದಾರೆ.
ಮುರಾರ್ಜಿ ಶಾಲೆ ಬಳಿ ಮತ್ತೆ ಹುಲಿ ಪ್ರತ್ಯಕ್ಷ
ಮೈಸೂರಿನ ವರುಕೋಡು ಮುರಾರ್ಜಿ ಶಾಲೆ ಬಳಿ ತಡರಾತ್ರಿ ಹುಲಿ ಮತ್ತೆ ಪ್ರತ್ಯಕ್ಷವಾಗಿದೆ. ಕಳೆದ ಒಂದು ವಾರದ ಹಿಂದೆ ಕಾಣಿಸಿಕೊಂಡಿದ್ದ ಹುಲಿಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಆದರೆ ವಾರ ಕಳೆದರೂ ಹುಲಿ ಮಾತ್ರ ಸೆರೆಯಾಗಿರಲಿಲ್ಲ. ಇದೀಗ ಮತ್ತೆ ಹುಲಿ ಗ್ರಾಮದೊಳಗೆ ಓಡಾಡುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಆದಷ್ಟು ಬೇಗ ಹುಲಿ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿದ್ದು, ಕ್ಯಾಮೆರಾ ಟ್ರ್ಯಾಪಿಂಗ್, ಡ್ರೋಣ್ ಕ್ಯಾಮೆರಾಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹುಲಿ ಚಲನವಲನಗಳ ಜಾಡು ಹಿಡಿದು ಹುಡುಕಾಡುತ್ತಿದ್ದಾರೆ.
ಬಳ್ಳಾರಿಯಲ್ಲಿ ಚಿರತೆ ದಾಳಿಗೆ ಕುರಿಗಳು ಸಾವು
ಕುರಿಗಳ ಮೇಲೆ ಚಿರತೆ ದಾಳಿ ಮಾಡಿದ್ದು, ಮೂರು ಕುರಿಗಳು ಮೃತಪಟ್ಟಿವೆ. ಬಳ್ಳಾರಿ ತಾಲೂಕಿನ ಮಿಂಚೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಮಹಮ್ಮಸ್ ಸಾಬ್ ಎಂಬುವವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಶುಕ್ರವಾರ ರಾತ್ರಿ ಮಿಂಚೇರಿ ಗ್ರಾಮದ ಕುರಿಹಟ್ಟಿಗೆ ನುಗ್ಗಿದ ಚಿರತೆ ಕುರಿಗಳ ಮೇಲೆ ದಾಳಿ ಮಾಡಿ ತಿಂದು ಹಾಕಿದೆ. ಸದ್ಯ ಬಳ್ಳಾರಿಯಲ್ಲಿ ಚಿರತೆ ಮತ್ತು ಕರಡಿ ದಾಳಿ ಹೆಚ್ಚುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ