Site icon Vistara News

Karnataka Election: ಚನ್ನಪಟ್ಟಣಕ್ಕೆ ರಮ್ಯಾ ಸ್ಪರ್ಧೆ ಇಲ್ಲ ಎಂದ ಸ್ಥಳೀಯ ಕಾಂಗ್ರೆಸ್‌; ಹೌದು ಅದು ಸುಳ್ಳೆಂದ ನಿಖಿಲ್‌ ಕುಮಾರಸ್ವಾಮಿ

Karnataka election Ramya wont contest from Channapatna says local Congress and Nikhil Kumaraswamy

ರಾಮನಗರ/ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election) ಇನ್ನು ಮೂರು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಹಲವು ಹೈವೋಲ್ಟೇಜ್‌ ಕ್ಷೇತ್ರಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ಭಾಗವಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಶಾಸಕರಾಗಿರುವ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರವು ಈಗ ಬಹು ಚರ್ಚಿತ ವಿಷಯವಾಗಿದೆ. ಇವರಿಗೆ ಬಿಜೆಪಿಯಿಂದ ಈಗಾಗಲೇ ಎದುರಾಳಿಯಾಗಿ ವಿಧಾನ ಪರಿಷತ್‌ ಸದಸ್ಯ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಇದ್ದರೆ, ಕಾಂಗ್ರೆಸ್‌ನಿಂದ ಮೋಹಕ ತಾರೆ, ಮಾಜಿ ಸಂಸದೆ ರಮ್ಯಾ (Ramya) ಹೆಸರು ಕೇಳಿಬರುತ್ತಿದೆ. ಆದರೆ, ಇದು ಸ್ಥಳೀಯ ಕಾಂಗ್ರೆಸ್‌ನಲ್ಲಿ ನಡುಕವನ್ನುಂಟು ಮಾಡಿದ್ದು, ಸ್ಪರ್ಧೆಯನ್ನು ಅಲ್ಲಗಳೆಯಲಾಗಿದೆ. ಇನ್ನು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy), ರಮ್ಯಾ ಸ್ಪರ್ಧೆ ಮಾಧ್ಯಮದವರ ಸೃಷ್ಟಿ ಎಂದು ಹೇಳಿದ್ದಾರೆ.

ಈ ಬಗ್ಗೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿರುವ ನಿಖಿಲ್‌ ಕುಮಾರಸ್ವಾಮಿ, ಜನರು ಬಯಸಿದ್ದರಿಂದಲೇ ನಾನು ರಾಮನಗರಕ್ಕೆ ಹೋದೆನೇ ಹೊರತು, ನಾನಾಗಿಯೇ ಹೋಗಿಲ್ಲ. ಪಕ್ಷ ಬಯಸಿದಂತೆ ನಾನು ಕೆಲಸ ಮಾಡುತ್ತೇನೆ. 2023 ಆದ ಮೇಲೆಯೇ ೨೦24 ಬರೋದು. ರಾಮನಗರದಲ್ಲಿ ಸ್ಪರ್ಧೆ ಮಾಡಿದ ಮೇಲೆ ನಾನು ಲೋಕಸಭೆಗೆ ಬರಲಾಗಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸೋಲಿನಿಂದ ನಾನು ಮನೆಯಲ್ಲಿ ಕುಳಿತುಕೊಂಡಿಲ್ಲ ಎಂದು ಹೇಳಿದರು. ಅಲ್ಲದೆ, ರಮ್ಯಾ ಚನ್ನಪಟ್ಟಣದಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಎಂಬ ವಿಚಾರವು ಇದೆಲ್ಲ ಮಾಧ್ಯಮದವರ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Operation Tiger : ಆಪರೇಷನ್‌ ಟೈಗರ್‌ ಸಕ್ಸಸ್‌; ಕೊಡಗಿನಲ್ಲಿ ಇಬ್ಬರನ್ನು ಬಲಿ ಪಡೆದ ನರಹಂತಕ ಹುಲಿ ಕೊನೆಗೂ ಸೆರೆ

ರಮ್ಯಾ ಅವರಿಗೂ ನನಗೂ ಒಳ್ಳೆಯ ಬಾಂಡಿಂಗ್ ಇದೆ. ಅವರು ಸಿಕ್ಕಾಗ ನಾವು ಸಿನಿಮಾ‌ ಬಗ್ಗೆ ಮಾತನಾಡುತ್ತೇವೆಯೇ ಹೊರತು ರಾಜಕೀಯ ಮಾತನಾಡಲ್ಲ. ಅವರು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಮಾಧ್ಯಮದ ಸೃಷ್ಟಿ ಎಂದು ನಿಖಿಲ್‌ ತಿಳಿಸಿದ್ದಾರೆ.

ಕೆ.ಆರ್. ಪೇಟೆಯಲ್ಲಿ ನಾರಾಯಣಗೌಡ ಅವರು ಅಭಿವೃದ್ಧಿ ಮಾಡುವುದಾಗಿ ಪಕ್ಷ ತೊರೆದು ಹೋದರು. ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ. ಸಿ.ಪಿ. ಯೋಗೇಶ್ವರ್ ಹೇಳಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಅವರು ಹತಾಶಗೊಂಡಿದ್ದಾರೆ. ಕಾಂಗ್ರೆಸ್ ನಮಗೆ ಅಧಿಕಾರ ಎಂಬ ಕುದುರೆ ಕೊಟ್ಟರು. ಆದರೆ, ಕುದುರೆಯ ನಾಲ್ಕೂ ಕಾಲುಗಳನ್ನು ಹಿಡಿದು ಅಧಿಕಾರ ಕೊಟ್ಟರೆ ಹೇಗೆ ಆಡಳಿತ ನಡೆಸಲಾಗುತ್ತದೆ ಎಂದು ಅವರು ಪ್ರಶ್ನೆ ಮಾಡಿದರು.

ಚನ್ನಪಟ್ಟಣಕ್ಕೆ ಪ್ರಸನ್ನ ಗೌಡರೇ ಕಾಂಗ್ರೆಸ್‌ ಅಭ್ಯರ್ಥಿ

ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣದಿಂದ ರಮ್ಯಾ ಸ್ಪರ್ಧೆ ಮಾಡುವ ಚರ್ಚೆಗಳು ಪ್ರಾರಂಭವಾಗಿದ್ದೇ ಸ್ಥಳೀಯ ಚನ್ನಪಟ್ಟಣ ಕಾಂಗ್ರೆಸ್ ಮುಖಂಡರಲ್ಲಿ ನಡುಕ ಉಂಟಾಗಿದೆ. ಅಲ್ಲಿವರೆಗೆ ಇದ್ದ ಭಿನ್ನಮತವನ್ನು ಬದಿಗೊತ್ತಿ ಒಗ್ಗಟ್ಟಿನ ಜಪ ಪಠಿಸಿದ್ದಾರೆ. ಪ್ರಸನ್ನ ಪಿ ಗೌಡ ಅವರೇ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಲಾಗಿದೆ.
ಜಿಲ್ಲಾ ಕಾಂಗ್ರೆಸ್‌ನಿಂದ ಸಭೆ ನಡೆಸಿ ಪ್ರಸನ್ನಗೌಡ ಹೆಸರು ಅಂತಿಮಗೊಳಿಸಲಾಗಿದೆ.

ಇದನ್ನೂ ಓದಿ: Operation Tiger : ಆಪರೇಷನ್‌ ಟೈಗರ್‌ ಸಕ್ಸಸ್‌; ಕೊಡಗಿನಲ್ಲಿ ಇಬ್ಬರನ್ನು ಬಲಿ ಪಡೆದ ನರಹಂತಕ ಹುಲಿ ಕೊನೆಗೂ ಸೆರೆ

ಈ ಬಗ್ಗೆ ಮಂಗಳವಾರ (ಫೆ.೧೪) ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಕಾಂಗ್ರೆಸ್ ಮುಖಂಡರು, ನಮ್ಮಲ್ಲಿದ್ದ ಎಲ್ಲ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದೇವೆ. ಪ್ರಸನ್ನಗೌಡ ಅವರೇ ಸೂಕ್ತ ಅಭ್ಯರ್ಥಿ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಈ ಬಗ್ಗೆ ಕೆಪಿಸಿಸಿಗೆ ಅಭಿಪ್ರಾಯ ರವಾನೆ ಮಾಡಿದ್ದೇವೆ. ಕ್ಷೇತ್ರದಲ್ಲಿ ರಮ್ಯಾ ಸ್ಪರ್ಧೆ ಊಹಾಪೋಹವಷ್ಟೇ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಹೇಳಿಕೆ ನೀಡಿದ್ದಾರೆ.

Exit mobile version