ಬೆಂಗಳೂರು: ಮಂಗಳೂರಿನ ವಾಮಂಜೂರಿನಲ್ಲಿ ತನ್ನದೇ ಕುಟುಂಬದ ನಾಲ್ಕು ಮಂದಿಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದ ಪ್ರವೀಣ್ ಕುಮಾರ್‌ಗೆ ಕ್ಷಮಾದಾನ ನೀಡುವುದಕ್ಕೆ ಕುಟುಂಬದ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಗೃಹ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆಯೊಂದು ನಡೆಯಲಿದೆ.
ವಾಮಜೂರು ಪ್ರವೀಣ್ ಕುಮಾರ್‌ಗೆ ಈಗ ೬೨ ವರ್ಷ. ೧೯೯೪ರ ಫೆಬ್ರವರಿ ೨೩ರ ರಾತ್ರಿ ಆತ ವಾಮಂಜೂರಿನ ನಿವಾಸಿಗಳು ಹಾಗೂ ಆತನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ (75) ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದನು. ಈತನಿಗೆ ಮೊದಲು ಗಲ್ಲು ಶಿಕ್ಷೆಯಾಗಿತ್ತು. ಬಳಿಕ ಹಲವು ಬಾರಿ ಕ್ಷಮಾದಾನದ ಅರ್ಜಿಗಳ ವಿಚಾರಣೆ ನಡೆದು ೨೦೧೪ರಲ್ಲಿ ಗಲ್ಲು ಶಿಕ್ಷೆಯನ್ನು ಆಜೀವ ಕಾರಾಗೃಹ ಶಿಕ್ಷೆಯಾಗಿ ಮಾರ್ಪಾಟು ಮಾಡಲಾಗಿತ್ತು. ಈಗ ಸ್ವಾತಂತ್ಯ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶವಾಗಿದೆ. ಇದಕ್ಕೆ ಕುಟುಂಬಿಕರು ಮತ್ತು ಸಾರ್ವಜನಿಕರಿಂದ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಪ್ರವೀಣ್ ಬಿಡುಗಡೆಯಾಗಿ ಬಂದರೆ ಕುಟುಂಬದಲ್ಲಿರುವ ಇತರರಿಗೆ ಜೀವ ಬೆದರಿಕೆ ಇದೆ ಎನ್ನುವುದೂ ಸೇರಿದಂತೆ ಹಲವು ಅಪಾಯಗಳ ಬಗ್ಗೆ ಮಾತನಾಡಲಾಗುತ್ತಿದೆ.
ಕುಟುಂಬಿಕರು ರಾಜ್ಯ ಸರಕಾರಕ್ಕೂ ಮನವಿ ಸಲ್ಲಿಸಿ ಬಿಡುಗಡೆಯನ್ನು ತಡೆಯುವಂತೆ ಮನವಿ ಮಾಡಿದ್ದಾರೆ. ರಾಜ್ಯ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಬುಧವಾರ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆಯೊಂದು ಆಯೋಜನೆಗೊಂಡಿದ್ದು, ಪ್ರವೀಣ್ ಬಿಡುಗಡೆಯ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಸ್ವತಃ ಸಚಿವರು ತಿಳಿಸಿದ್ದಾರೆ.
ಆರಗ ಜ್ಞಾನೇಂದ್ರ ಹೇಳಿದ್ದೇನು?
ಇದೊಂದು ವಿಶೇಷ ಪ್ರಕರಣ. ಕುಟುಂಬಿಕರು ಬಿಡುಗಡೆಗೆ ಸಂಬಂಧಿಸಿ ಇರುವ ಅಪಾಯಗಳ ಬಗ್ಗೆ ತಿಳಿಸಿದ್ದಾರೆ. ಇಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ʻʻವಾಮಂಜೂರು ಪ್ರವೀಣ್‌ನಿಗೆ 14 ವರ್ಷದ ಹಿಂದೆ ಶಿಕ್ಷೆ ಆಗಿದೆ. ಮೊದಲು ಗಲ್ಲು ಆಗಿತ್ತು. ಬಳಿಕ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆಗೆ ಬದಲಾವಣೆ ಮಾಡಲಾಗಿತ್ತು. ರಾಷ್ಟ್ರಪತಿಗಳು ಅದನ್ನು ಎತ್ತಿ ಹಿಡಿದಿದ್ದರು. ಪ್ರವೀಣ್ ಮನೆಯವರು ಭೇಟಿ ಮಾಡಿದ್ದಾನೆ. ಯಾವುದೇ ಕಾರಣಕ್ಕೂ ಅವನು ಬಿಡುಗಡೆ ಆಗಬಾರದು ಎನ್ನುತ್ತಿದ್ದಾರೆ. ಹೊರಗೆ ಬಂದರೆ ಮತ್ತೆ ಕೊಲೆ ಮಾಡುವ ಬೆದರಿಕೆ ಕೂಡಾ ಹಾಕಿದ್ದಾನೆ ಎನ್ನುವುದನ್ನು ತಿಳಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ವಿಶೇಷ ನೆಲೆಯಲ್ಲಿ ಪರಿಗಣಿಸುತ್ತೇವೆʼʼ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ರಾಜ್ಯ ಸರಕಾರದ ವತಿಯಿಂದ ಬಿಡುಗಡೆಗೆ ಆಕ್ಷೇಪ ಸಲ್ಲಿಸುವ ಸಾಧ್ಯತೆ ಇದೆಯೇ ಎಂಬ ಚರ್ಚೆ ನಡೆಯುತ್ತಿದೆ.
ʻʻಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸನ್ನಡತೆಯ ಆಧಾರದಲ್ಲಿ ಈಗ ಬಿಡುಗಡೆ ಮಾಡಲಾಗುತ್ತಿದೆ. ಇದರ ಬಗ್ಗೆ ಇಂದು ನಡೆಯುವ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಕಾನೂನಿನ ಪ್ರಕಾರ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ಎರಡು ಕುಟುಂಬಕ್ಕೂ ಭದ್ರತೆ ಕೊಡುತ್ತೇವೆʼʼ ಎಂದು ಸಚಿವರು ತಿಳಿಸಿದರು.
ʻʻಕೊಲೆ ಮಾಡಿದವರು, ರೇಪ್ ಮಾಡಿದವರನ್ನು ಯಾವ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಕಳೆದ ಸಂಪುಟ ಸಭೆಯಲ್ಲಿ ನಿಯಮ ಮಾಡಿದ್ದೇವೆ. ಇನ್ನು ಮೇಲೆ ಇಂಥ ಕೇಸುಗಳಲ್ಲಿ ಬಿಡುಗಡೆ ಮಾಡುವುದಿಲ್ಲ. ಹಿಂದಿನ ಆದೇಶದ ಪ್ರಕಾರ ಆತನ ಬಿಡುಗಡೆಗೆ ಶಿಫಾರಸು ಆಗಿದೆ. ನಾಲ್ವರನ್ನು ಕೊಂದಿದ್ದಾನೆ. ಬಂಧುಗಳನ್ನೇ ಕೊಂದಿದ್ದಾನೆ ಅಂದರೆ ಸೈಕಿಕ್ ಇರಬೇಕು ಅನಿಸುತ್ತದೆ. ಏನೇ ಇದ್ದರೂ ಅಧಿಕಾರಿಗಳ ಸಭೆ ಮಾಡಿ ಸಲಹೆ ಪಡೆದು ತೀರ್ಮಾನ ಮಾಡುತ್ತೇವೆʼʼ ಎಂದು ಹೇಳಿದರು ಆರಗ ಜ್ಞಾನೇಂದ್ರ.
ಕುಟುಂಬದವರಿಂದ ತೀವ್ರ ವಿರೋಧ
ಪ್ರವೀಣ್ ಕುಮಾರ್‌ನಿಂದ ಹತ್ಯೆಗೀಡಾದವರ ಕುಟುಂಬದವರಿಂದ ಬಿಡುಗಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆತನನ್ನು ಬಿಡುಗಡೆ ಮಾಡಬಾರದೆಂದು ಹತ್ಯೆಯಾದವರ ಕುಟುಂಬಸ್ಥರ ಪರವಾಗಿ ಸೀತಾರಾಮ ಮತ್ತು ಇತರರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ವಾಮಜೂರು ಪ್ರವೀಣ್ ಕಳೆದ 28 ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿದ್ದಾನೆ.