ಬೆಂಗಳೂರು ಗ್ರಾಮಾಂತರ: ಜು.9ರಂದು ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾದ ಶಿಕ್ಷಾ ಬಂಧಿಗಳು ತಮ್ಮ ಕಣ್ಣೀರ ಕಥೆಯನ್ನು (Release of prisoners ) ತೆರೆದಿಟ್ಟಿದ್ದಾರೆ. ಕೆಲವೊಮ್ಮೆ ಸೇಡು, ಕೋಪತಾಪವೇ ಅಪರಾಧಿಗಳನ್ನಾಗಿ ಮಾಡಿಬಿಡುತ್ತೆ ಎಂಬುದಕ್ಕೆ ಈ ಪ್ರಕರಣಗಳೇ ಸಾಕ್ಷಿ. ಅಪ್ಪನ ತಂಟೆಗೆ ಬಂದಿದ್ದಕ್ಕೆ ಮಕ್ಕಳು ಎದುರಾಳಿಗಳನ್ನು ಕೊಂದೇಬಿಟ್ಟಿದ್ದರು. ಇದೀಗ ಸನ್ನಡತೆಯಿಂದ ಬಂಧಮುಕ್ತರಾಗಿದ್ದಾರೆ.
2003ರಲ್ಲಿ ಎಂಜಿನಿಯರ್‌ವೊಬ್ಬ ಕಮಿಷನ್ ಕೊಡಲಿಲ್ಲ ಎಂದು ವ್ಯಕ್ತಿಯ ಕಪಾಳಕ್ಕೆ ಹೊಡೆದಿದ್ದ. ತಂದೆಗೆ ಕಪಾಳಕ್ಕೆ ಹೊಡೆದ ವಿಷಯ ತಿಳಿದ ಕಾನೂನು ವ್ಯಾಸಂಗ ಮಾಡುತ್ತಿದ್ದ ಮಗ ಸಿದ್ದಾರೂಡ ಪ್ರತೀಕಾರಕ್ಕೆ ಸ್ಕೆಚ್ ಹಾಕಿದ್ದ. ತಂದೆ ಕಪಾಳಕ್ಕೆ ಹೊಡೆದ ಎಂಜಿನಿಯರ್‌ನ ಕೈಯನ್ನೇ ಕಡಿಬೇಕು ಎಂದುಕೊಂಡಿದ್ದ. ಕೈ ಕಡಿಯುವ ಬರದಲ್ಲಿ ಎಂಜಿನಿಯರ್ ತಲೆಯನ್ನೇ ಕಡಿದಿದ್ದ.
ಹೀಗಾಗಿ 2003ರಲ್ಲಿ ಕೊಲೆ ಮಾಡಿ ತುರುವನೂರು ಸಿದ್ದಾರೂಡ ಜೈಲಿಗೆ ಬಂದಿದ್ದ. ಈ ನಡುವೆ ಪೆರೋಲ್ ಮೇಲೆ ಹೊರಗೆ ಬಂದಿದ್ದ ವೇಳೆ ಯುವತಿಯೊಬ್ಬಳ ಜತೆಗೆ ಪ್ರೇಮಾಂಕುರವಾಗಿತ್ತು. ಯುವತಿಯನ್ನು ಮದುವೆಯಾಗಿ ಗುಂಟೂರಿಗೆ ಎಸ್ಕೇಪ್ ಆಗಿದ್ದ. ಪೆರೋಲ್ ಮೇಲೆ ಹೊರ ಹೋದ ಸಜಾ ಬಂಧಿ ಪರಾರಿ ಎಂದು ಮತ್ತೊಂದು ಕೇಸ್‌ನಲ್ಲಿ ಲಾಕ್ ಆದ ಸಿದ್ದಾರೂಡ ಮತ್ತೆ ಹತ್ತಾರು ವರ್ಷ ಜೈಲುವಾಸ ಅನುಭವಿಸಿದ್ದ. ಜೈಲುವಾಸದಲ್ಲಿಯೇ ಕೊಲೆಗಾರನ ಪ್ರೇಮದ ಸಾಲುಗಳು ಎಂಬ ಕವನ ಸಂಕಲನ ರಚನೆ ಮಾಡಿದ್ದಾನೆ.
ತನ್ನ ಬದುಕಿನ ಪ್ರಮುಖ ಸಂಗತಿಗಳ ಜತೆ ಪ್ರೇಮದ ಬಗ್ಗೆ ಕವನ ಸಂಕಲನದಲ್ಲಿ ಉಲ್ಲೇಖಿಸಿದ್ದಾನೆ. ಯಾರೂ ಕೂಡ ಕೋಪದ ಕೈಗೆ ಬುದ್ದಿ ಕೊಡಬೇಡಿ. ಬೇರೆ ಯಾರದೋ ಮುಲಾಜಿಗೆ ಅಪರಾಧ ಕೃತ್ಯವೆಸಗಿ ನಿಮ್ಮ ಬದುಕು ಹಾಳು ಮಾಡಿಕೊಳ್ಳಬೇಡಿ. ಮನುಷ್ಯ ಜನ್ಮ ಒಮ್ಮೆ ಮಾತ್ರ ಸಿಗಲಿದೆ. ಅದನ್ನು ಇತರರಿಗೆ ಒಳ್ಳೆಯದು ಮಾಡಲು ಹಾಗೂ ತಮ್ಮ ಕುಟುಂಬ ನೆಮ್ಮದಿಯಾಗಿ ಬದುಕಲು ಬಳಸಿ ಎಂದು ಮನವಿ ಮಾಡಿದ್ದಾನೆ. ಬರೋಬ್ಬರಿ 21 ವರ್ಷ ಜೈಲುವಾಸದಲ್ಲಿ ಇದ್ದುಕೊಂಡೆ ಅರ್ಧಕ್ಕೆ ನಿಂತಿದ್ದ ಎಲ್ಎಲ್‌ಬಿ ಪದವಿಯನ್ನು ಸಿದ್ದರೂಢ ಪೂರ್ಣ ಮಾಡಿದ್ದಾರೆ.
ಇದನ್ನೂ ಓದಿ: Kadri Temple : ಕದ್ರಿ ದೇವಸ್ಥಾನಕ್ಕೆ ನುಗ್ಗಿ ಅಣ್ಣಪ್ಪ ಸ್ವಾಮಿಯ ಗುಡಿಗೆ ಕಾಲಿನಿಂದ ಒದ್ದು ಯುವಕನ ರಂಪಾಟ
ತಂದೆಯನ್ನು ಕೊಂದವರ ಮನೆಗೆ ಬೆಂಕಿ ಇಟ್ಟ ಮಗ!
20 ವರ್ಷದ ಜೈಲುವಾಸದ ಬಳಿಕ ಸಜಾ ಕೈದಿ ಸನ್ನಡತೆ ಆಧಾರದ ಮೇಲೆ ಇಂಡಿ ತಾಲೂಕಿನ ಆನಂದ ಎಂಬುವವರು ಬಿಡುಗಡೆ ಆಗಿದ್ದಾರೆ. ಆನಂದ್ ತಮ್ಮ ತಂದೆಯನ್ನು ಕೊಂದವರ ಮೇಲಿನ ಪ್ರತೀಕಾರ ತೀರಿಸಿಕೊಳ್ಳಲು ಹೋಗಿ ಜೈಲುಪಾಲಾಗಿದ್ದರು.
ಆನಂದ್ ತಂದೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರು. ಆನಂದ್ ಅಧ್ಯಕ್ಷತೆಯಲ್ಲಿ ಪಕ್ಕದ ಊರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗಿತ್ತು. ಅಷ್ಟಕ್ಕೆ ಕುಪಿತಗೊಂಡ ಅದೇ ಗ್ರಾಮದ ಕುಟುಂಬವೊಂದು ಆನಂದ್ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿತ್ತು. ಕಣ್ಮುಂದೆ ತಂದೆಯ ಬರ್ಬರ ಹತ್ಯೆ ಕಂಡ ಆನಂದ್ ತನ್ನ ಸಂಗಡಿಗರೊಂದಿಗೆ ಸೇರಿ ಅದೇ ಕೋಪದಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ಗ್ರಾಮಕ್ಕೆ ನುಗ್ಗಿದ್ದ.
ಆನಂದ್ ಹಾಗೂ ಸಂಗಡಿಗರ ದಿಢೀರ್ ದಾಳಿಗೆ ಹೆದರಿದ ಆರೋಪಿಗಳು ಮನೆಯೊಳಗೆ ಸೇರಿಕೊಂಡಿದ್ದರು. ಈ ವೇಳೆ ಮನೆಗೆ ಬೀಗ ಜಡಿದ ಆನಂದ್ ಗ್ಯಾಂಗ್ ಹೊರಗಿನಿಂದ ಬೆಂಕಿ ಹಚ್ಚಿದ್ದರು. ಬೆಂಕಿ ಕೆನ್ನಾಲಿಗೆಗೆ ಸುಮಾರು 10 ಮಂದಿ ಸುಟ್ಟು ಕರಕಲಾಗಿದ್ದರು. 10 ಮಂದಿ ಕೊಲೆ ಪ್ರಕರಣದಲ್ಲಿ 25 ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಆನಂದ್ ಬಿಡುಗಡೆ ಆಗಿದ್ದು, ಯಾರೂ ಕೂಡ ರೋಷಾವೇಷ, ದ್ವೇಷ ಎಂದು ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ಒಂದು ಏಟು ಹೊಡೆದರೂ ಸುಮ್ಮನೆ ಬನ್ನಿ, ಕಾನೂನು ರೀತಿಯಲ್ಲಿ ಹೋರಾಟ ಮಾಡಿ ಎಂದು ಮನವಿ ಮಾಡಿದ್ದಾರೆ.
77 ಕೈದಿಗಳಿಗೆ ಬಿಡುಗಡೆ ಭಾಗ್ಯ
ಸನ್ನಡತೆ ಆಧಾರದ ಮೇಲೆ 77 ಮಂದಿ ಶಿಕ್ಷಾ ಬಂಧಿಗಳ ಬಿಡುಗಡೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ಮೈಸೂರು-7, ಬೆಳಗಾವಿ-5, ಕಲಬುರಗಿ-9, ವಿಜಯಪುರ-6, ಬಳ್ಳಾರಿ-10, ಧಾರವಾಡ-6 ಸೇರಿ ಒಟ್ಟು 7 ಕಾರಾಗೃಹಗಳಿಂದ 77 ಮಂದಿ ಶಿಕ್ಷಾ ಬಂಧಿಗಳ ಬಿಡುಗಡೆ ಮಾಡಲಾಗಿದೆ. ಶಿಕ್ಷಾ ಬಂಧಿಗಳಿಗೆ ಗೃಹ ಸಚಿವ ಪರಮೇಶ್ವರ್ ಬಿಡುಗಡೆ ಪ್ರಮಾಣ ಪತ್ರ ಹಾಗೂ ಪದಕ ಪ್ರಧಾನ ಮಾಡಿದರು. 2022ನೇ ಸಾಲಿನ ರಾಷ್ಟ್ರಪತಿ ಪದಕ ಮತ್ತು 2023ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ನೀಡಲಾಯಿತು. ರಾಷ್ಟ್ರಪತಿ ಸುಧಾರಣಾ ಸೇವಾ ಪದಕ ನಾಲ್ಕು ಮಂದಿಗೆ ಹಾಗೂ ಮುಖ್ಯಮಂತ್ರಿ ಪದಕ 14 ಮಂದಿಗೆ ಪ್ರಧಾನ ಮಾಡಲಾಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ