ಮೈಸೂರು: ಬಹು ವಿವಾದಿತ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಯೋಜನೆ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕೊನೆಗೂ ಕೈ ಬಿಟ್ಟಿದೆ. ಈ ಮೂಲಕ ಪರಿಸರವಾದಿಗಳು ಸೇರಿದಂತೆ ನಾಗರಿಕರ ಹೋರಾಟಕ್ಕೆ ಜಯ ಸಿಕ್ಕಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ವಿಚಾರ ಪ್ರಸ್ತಾಪ ಆಗುತ್ತಿದ್ದಂತೆ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಈ ಬಗ್ಗೆ ಹಲವಾರು ಬಾರಿ ಪ್ರತಿಭಟನೆಗಳು ನಡೆದಿದೆ. ಪರಿಸರವಾದಿಗಳು, ನಾಗರಿಕರ ಸಹಿತ ವಿವಿಧ ಮುಖಂಡರ ವಿರೋಧ ಈ ಯೋಜನೆಗೆ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಅಧಿಕೃತ ಹೇಳಿಕ ನೀಡಿದ ಸಚಿವ ಎಸ್‌ಟಿಎಸ್
ಭಕ್ತರು, ಸ್ಥಳೀಯರ ಭಾವನೆಗಳಿಗಾಗಿ ನಾವು ಬೆಲೆ ಕೊಡುತ್ತೇವೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಯೋಜನೆಯನ್ನು ಕೈಬಿಡಲಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಜಿಲ್ಲಾಧಿಕಾರಿ, ಜನಪ್ರತಿನಿಧಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರಿಗಿಂತ ಭಕ್ತರು ಹೆಚ್ಚಾಗಿ ಬರುತ್ತಾರೆ. ಇಲ್ಲಿ ಮೆಟ್ಟಿಲುಗಳ ಜತೆಗೆ ಹಲವಾರು ರಸ್ತೆ ಮಾರ್ಗಗಳೂ ಇವೆ. ಹೆಚ್ಚು ಬಸ್ ಸೌಲಭ್ಯ ಇರುವುದರಿಂದ ರೂಪ್ ವೇ ಯೋಜನೆಯನ್ನು ಕೈ ಬಿಟ್ಟಿದ್ದೇವೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ | ಬರುವವರಿಗೆ ಸ್ವಾಗತ: ಎಸ್.ಟಿ. ಸೋಮಶೇಖರ್ ಹಾಗೂ ಇತರರಿಗೆ ಸಿದ್ದರಾಮಯ್ಯ ಓಪನ್ ಆಫರ್
ಪ್ರಾಧಿಕಾರದ ಬಗ್ಗೆ ಸಿಎಂ ಜತೆ ಚರ್ಚೆ
ಚಾಮುಂಡೇಶ್ವರಿ ದೇವಾಲಯದ ಪ್ರಾಧಿಕಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚೆ ಮಾಡುತ್ತೇನೆ. ದೇವಾಲಯದ ಸುತ್ತ ಅಂಗಡಿಗಳ ಬದಲಿ ಸ್ಥಳದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಅಶ್ವಿನ್ ಕುಮಾರ್, ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಬಗಾದಿ ಗೌತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರೋಪ್ ವೇ ಬಗ್ಗೆ ಭಾರಿ ವಿರೋಧವಿತ್ತು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆ ಘೋಷಣೆಯಾಗುತ್ತಿದ್ದಂತೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸ್ಥಳೀಯರು, ಪರಿಸರವಾದಿಗಳು, ಕನ್ನಡಪರ ಹೋರಾಟಗಾರರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ | PSI Scam | ಗೃಹ ಸಚಿವ ಆರಗ ಪರ ಸಿಎಂ ಬಸವರಾಜ ಬೊಮ್ಮಾಯಿ ಬ್ಯಾಟಿಂಗ್
ವಿರೋಧ ವ್ಯಕ್ತಪಡಿಸಿದ್ದ ರಾಜಮಾತೆ
ಈ ಯೋಜನೆ ಬಗ್ಗೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಸಹ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡುವ ಅವಶ್ಯಕತೆ ಇಲ್ಲ. ನಗರದಿಂದ ಬೆಟ್ಟ ತಲುಪಲು ೨೦ ನಿಮಿಷ ಸಾಕು. ಇದು ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರವಾಸೋದ್ಯಮದ ಹೆಸರಿನಲ್ಲಿ ಅಭಿವೃದ್ಧಿ ಮಾಡಲು ಹೋದರೆ ಇಲ್ಲಿ ಧಾರ್ಮಿಕತೆಗೆ ಧಕ್ಕೆ ಬರುವುದಲ್ಲದೆ, ಪರಿಸರಕ್ಕೂ ಸಾಕಷ್ಟು ಹಾನಿಯಾಗಲಿದೆ. ಈಗಾಗಲೇ ಬೆಟ್ಟದ ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗಿದ್ದು, ಇದರ ಉಳಿವಿಗೆ ಸರ್ಕಾರ ಗಮನ ನೀಡಬೇಕು. ಜತೆಗೆ ಬೆಟ್ಟದಲ್ಲಿ ಕಮರ್ಷಿಯಲ್ ಮಳಿಗೆಗಳನ್ನು ತೆರೆಯುವ ಅವಶ್ಯಕತೆಯೂ ಇಲ್ಲ. ಮೂಲ ಸೌಕರ್ಯವನ್ನು ಸರ್ಕಾರ ಕಲ್ಪಿಸಿದರೆ ಸಾಕು ಎಂದು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.