ಮೈಸೂರು: ಕುಖ್ಯಾತ ಕ್ರಿಮಿನಲ್ ಹಾಗೂ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಆಪ್ತ ಸಖನಾಗಿದ್ದು ಮೈಸೂರಿನ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಕೊನೆಗೂ ಬಂಧಿಸಲಾಗಿದೆ. ಆತನ ವಿರುದ್ಧ ದಲಿತ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿ ಹತ್ತು ದಿನಗಳು ಕಳೆದ ಬಳಿಕ ಈ ಬಂಧನ ನಡೆದಿದೆ. ಆತನನ್ನು ರಾಮನಗರ ಮನೆಯೊಂದರಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ ಎಂದು ತಿಳಿದುಬಂದಿದ್ದು, ಆತನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಸ್ಯಾಂಟ್ರೋ ರವಿಯ ಮೇಲೆ ಮಹಿಳೆಯ ಕೇಸು ದಾಖಲಾಗುತ್ತಿದ್ದಂತೆಯೇ ಆತನ ವಿರುದ್ಧ ನೂರಾರು ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿದ್ದು ಆತನಿಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಜತೆಗೆ ಇರುವ ಸಂಬಂಧವೂ ಬಯಲಾಗಿತ್ತು. ಹೀಗಾಗಿ ಆತನ ಬಂಧನ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಕೊನೆಗೂ ಆತನ ಬಂಧನವಾಗಿದ್ದು, ಮುಂದೆ ಏನೆಲ್ಲ ಮಾಹಿತಿಗಳು ಹೊರಬೀಳಲಿವೆ ಎಂಬ ಕುತೂಹಲ ಜೋರಾಗಿದೆ.
ಸ್ಯಾಂಟ್ರೋ ರವಿ ಕಳೆದ ೨೫ ವರ್ಷಗಳಿಂದ ಹೈಟೆಕ್ ವೇಶ್ಯಾವಾಟಿಕೆ ಮತ್ತು ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಕಾಲ ಕಾಲದ ಪ್ರಭಾವಿ ರಾಜಕಾಣಿಗಳ ಜತೆ, ಅಧಿಕಾರಿಗಳ ಜತೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದಾನೆ ಎನ್ನುವುದು ಈ ಹಿಂದಿನಿಂದಲೂ ಸುದ್ದಿಯಲ್ಲಿತ್ತು. ಆದರೆ, ಹತ್ತು ದಿನಗಳ ಹಿಂದೆ ದಲಿತ ಮಹಿಳೆಯೊಬ್ಬರು ಮೈಸೂರು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಅತ್ಯಾಚಾರ ಮತ್ತು ವಂಚನೆಯ ಕೇಸು ದಾಖಲಿಸಿದ ಬೆನ್ನಿಗೇ ಭಾರಿ ಚರ್ಚೆ ಆರಂಭವಾಯಿತು.
ಹತ್ತು ದಿನಗಳ ಹಿಂದೆ ಕೇಸ್, ಆರು ತಂಡಗಳಿಂದ ಹುಡುಕಾಟ
ಹತ್ತು ದಿನಗಳ ಹಿಂದೆ ದಲಿತ ಮಹಿಳೆಯೊಬ್ಬರು ಮೈಸೂರಿನಲ್ಲಿ ಸ್ಯಾಂಟ್ರೋ ರವಿ ವಿರುದ್ಧ ದೂರು ನೀಡಿದ್ದರು. ಸ್ಯಾಂಟ್ರೋ ರವಿ ೨೦೧೯ರಲ್ಲಿ ತನಗೆ ಕೆಲಸ ಕೊಡಿಸುವುದಾಗಿ ಹೇಳಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಳಿಕ ತನ್ನನ್ನು ಮದುವೆಯಾಗಿದ್ದು, ಬೇರೆ ಬೇರೆ ಅಧಿಕಾರಿಗಳ ಜತೆಗೆ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಾಯಿಸುತ್ತಿದ್ದ ಎಂದು ಆರೋಪಿಸಿದ್ದರು.
ಇದರ ಬೆನ್ನಿಗೇ ಸ್ಯಾಂಟ್ರೋ ರವಿ ಹೊಂದಿದ್ದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಂಪರ್ಕದ ನೂರಾರು ಚಿತ್ರಗಳು, ಅಧಿಕಾರಿಗಳ ವರ್ಗಾವಣೆಯಲ್ಲಿ ಆತನ ಕೈವಾಡದ ಫೋನ್ ಸಾಕ್ಷ್ಯಗಳು ಲಭ್ಯವಾಗಿದ್ದವು.
ರಾಜಕಾರಣಿಗಳ ಜತೆ ಸಂಪರ್ಕ
ಸ್ಯಾಂಟ್ರೋ ರವಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಪುತ್ರ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಪುತ್ರ, ರಾಜ್ಯದ ಹಲವು ಸಚಿವರ ಜತೆಗೆ ಆತ್ಮೀಯ ಒಡನಾಟ ಇರುವ ಚಿತ್ರಗಳು ಬಯಲಾದವು. ಆರೋಪಿ ಸ್ಯಾಂಟ್ರೋ ಗೃಹ ಸಚಿವ ಅಧಿಕೃತ ನಿವಾಸ ಕುಮಾರಕೃಪಾದಲ್ಲೇ ದೊಡ್ಡ ಮಟ್ಟ ಹಣ ಇಟ್ಟುಕೊಂಡು ಎಣಿಕೆ ಮಾಡಿದ ಚಿತ್ರಗಳು ಭಾರಿ ಸದ್ದು ಮಾಡಿದ್ದವು. ಅದಕ್ಕಿಂತಲೂ ಹೆಚ್ಚು ಸದ್ದು ಮಾಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ.
೨೦೧೮ರಲ್ಲಿ ಆಪರೇಷನ್ ಕಮಲದ ಮೂಲಕ ತನ್ನ ಸರಕಾರವನ್ನು ಉರುಳಿಸಿದಾಗ ಮುಂಬಯಿಗೆ ಕರೆದೊಯ್ಯಲಾದ ೧೭ ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಮನರಂಜನೆಗೆ ಸ್ಯಾಂಟ್ರೋ ರವಿ ೧೨ ಮಂದಿ ಹುಡುಗಿಯರನ್ನು ಕಳುಹಿಸಿಕೊಟ್ಟಿದ್ದ ಎಂದು ಅವರು ಆರೋಪ ಮಾಡಿದ್ದರು. ಈ ನಡುವೆ, ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳು ಮುಗಿಬಿದ್ದವು.
ಪೊಲೀಸರು ಸ್ಯಾಂಟ್ರೋ ರವಿಯ ಬಂಧನದ ವಿಚಾರದಲ್ಲಿ ಆಸಕ್ತಿ ಹೊಂದಿಲ್ಲ. ಆತನನ್ನು ಹಿಡಿದರೆ ಹಲವರ ರಹಸ್ಯಗಳು ಬಯಲಾಗುತ್ತವೆ ಎಂಬ ಭಯವಿದೆ ಎಂಬ ಮಾತು ಕೇಳಿಬಂತು. ಈ ನಡುವೆ ಬೆಂಗಳೂರು ಮತ್ತು ಮೈಸೂರು ಪೊಲೀಸರು ಒಟ್ಟು ೧೨ ತಂಡಗಳನ್ನು ರಚಿಸಿ ಸ್ಯಾಂಟ್ರೋ ರವಿಯನ್ನು ಪತ್ತೆ ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದರು.
ಈಗ ಆತ ರಾಮನಗರದಲ್ಲಿ ಬಂಧನಕ್ಕೆ ಒಳಗಾಗಿದ್ದು, ಮೈಸೂರಿನ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಯಲಿದೆ. ಆತನನ್ನು ಕೋರ್ಟ್‌ಗೆ ಹಾಜರುಪಡಿಸುವ ಮೊದಲೇ ಸಾಕಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಜತೆಗೆ ಕೋರ್ಟ್‌ಗೆ ಹಾಜರುಪಡಿಸಿದ ನಂತರವೂ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.
ಇದನ್ನೂ ಓದಿ | Santro Ravi Case | ಸ್ಯಾಂಟ್ರೋ ರವಿ ಅನೈತಿಕ ಜಾಲ ಹೆಮ್ಮರವಾಗಿ ಬೆಳೆದದ್ದೇ ಕಾಂಗ್ರೆಸ್ ಕಾಲದಲ್ಲಿ ಎಂದ ಬಿಜೆಪಿ