ಮೈಸೂರು: ರಾಜಕಾರಣಿಗಳ ಜತೆ ಖಾಸಾ ಸಂಬಂಧ ಹೊಂದಿರುವ, ನೂರಾರು ಹೆಣ್ಮಕ್ಕಳ ಬಾಳಿನಲ್ಲಿ ಆಟವಾಡಿರುವ ಆರೋಪ ಹೊತ್ತಿರುವ ಮೈಸೂರಿನ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi case) ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ಆದರೆ, ಆತ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಈ ನಡುವೆ, ಸ್ಯಾಂಟ್ರೋ ರವಿಯಿಂದ ದೌರ್ಜನ್ಯ ಮತ್ತು ವಂಚನೆಗೆ ಒಳಗಾಗಿರುವ ದಲಿತ ಮಹಿಳೆ ನ್ಯಾಯಾಧೀಶರ ಮುಂದೆ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯ ಸೆಕ್ಷನ್ ೧೬೪ರ ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿದ್ದು, ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಸಂತ್ರಸ್ತ ಮಹಿಳೆ ಹೇಳಿಕೆ ದಾಖಲಿಸಿದ್ದಾರೆ. ಸ್ಯಾಂಟ್ರೋ ರವಿ ತನ್ನ ಮೇಲೆ ಅತ್ಯಾಚಾರ ಎಸಗಿ ಮದುವೆಯಾಗಿದ್ದು, ಮದುವೆ ನಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂಬ ಆರೋಪಗಳ ಜತೆಗೆ ಆತ ತನ್ನ ತಂಗಿಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಹೇಳಿಕೆ ದಾಖಲಿಸಿದ್ದಾರೆ.
ಮದುವೆಯ ವರದಕ್ಷಿಣೆ ಕಿರುಕುಳ ನೀಡಿದಲ್ಲದೆ ಮತ್ತೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಒತ್ತಡ ಹೇರಿದ್ದ ಎಂದು ಸ್ಯಾಂಟ್ರೋ ರವಿಯ ವಿಕೃತಿಗಳನ್ನು ಸಂತ್ರಸ್ತೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸ್ಯಾಂಟ್ರೋ ರವಿಗೆ ಮಾರಣಾಂತಿಕ ಕಾಯಿಲೆ ಇದ್ದು, ಅದನ್ನು ತನಗೆ ಉದ್ದೇಶಪೂರ್ವಕವಾಗಿ ಅಂಟಿಸಿದ್ದಾನೆ ಎಂದು 164 ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆ ಹೇಳಿಕೆಯಿಂದ ಸ್ಯಾಂಟ್ರೋ ರವಿಗೆ ನಿರೀಕ್ಷಣಾ ಜಾಮೀನು ಸಿಗುವುದು ಕಠಿಣ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Santro Ravi case | 1995ರಲ್ಲೇ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಸ್ಯಾಂಟ್ರೋ ರವಿ!