Site icon Vistara News

ಚಂದ್ರಶೇಖರ ಗುರೂಜಿ ಹತ್ಯೆಗೂ ಮುಂಚೆ ವಾಟ್ಸ್‌ಆ್ಯಪ್‌ನಲ್ಲಿ ಕ್ರಿಯೇಟ್‌ ಆಗಿತ್ತು ಗ್ರೂಪ್!

ಸರಳ ವಾಸ್ತು

ಹುಬ್ಬಳ್ಳಿ: ಇತ್ತೀಚೆಗೆ ಹತ್ಯೆಯಾದ ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ತಿರುವು ಸಿಕ್ಕಿದೆ. ಹಂತಕರು ಹತ್ಯೆಗೆ ಮೊದಲು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಹಂತಕರಾದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಸೇರಿ ಗುರೂಜಿ ಹತ್ಯೆಗೆಂದೇ 15 ಜನರನ್ನೊಳಗೊಂಡ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದರು. ಈ ಗ್ರೂಪ್‌ಗೆ “ಸಿಜಿ ಪರಿವಾರ ಮೋಸ ಹೋದವರ ಸಂಘ” ಎಂದು ಹೆಸರಿಟ್ಟುಕೊಂಡಿದ್ದರು.

ಅಂದರೆ ಈ ಗ್ರೂಪ್‌ನಲ್ಲಿ ಇದ್ದವರೆಲ್ಲರೂ ಚಂದ್ರಶೇಖರ ಗುರೂಜಿ ಅವರಿಂದ ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋದವರಾಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇವರೆಲ್ಲರೂ ಗ್ರೂಪ್‌ನಲ್ಲಿ ಆಗಾಗ ಆಕ್ರೋಶವನ್ನು ಹೊರಹಾಕುತ್ತಿದ್ದರು ಎಂಬ ವಿಷಯ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.

ಕೆಲಸದಿಂದ ತೆಗೆದಿದ್ದರು
ಗುರೂಜಿ ಮೇಲೆ ಹಲವರು ಕೋಪಗೊಳ್ಳಲು ಕೆಲಸದಿಂದ ವಜಾಗೊಳಿಸಿದ್ದೇ ಕಾರಣ ಎಂದು ಹೇಳಲಾಗಿದೆ. ಇನ್ನು ಈ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಅವರನ್ನು ಸಹ ಗುರೂಜಿ ಕೆಲಸದಿಂದ ಬಿಡಿಸಿದ್ದರು. ಈ ಕಾರಣಕ್ಕಾಗಿ ಅವರು ಗುರೂಜಿಯವರ ಮೇಲೆ ಅಸಮಾಧಾನಗೊಂಡಿದ್ದರು. ಇದರ ಮಧ್ಯದಲ್ಲಿ ಗುರೂಜಿ ಅವರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರನ್ನು ಹೊರಹಾಕಿದ್ದರು. ಇವರಲ್ಲಿ ಹಲವರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದರು. ಕೊನೆಗೆ ಕೆಲಸದಿಂದ ವಜಾ ಮಾಡುವಾಗ ಅವರಿಂದ ಆಸ್ತಿಯನ್ನು ವಾಪಸ್‌ ಪಡೆದು ಕಳುಹಿಸಿದ್ದರು. ಅವರೂ ಕೂಡ ಗುರೂಜಿ ಮೇಲೆ ಆಕ್ರೋಶಗೊಂಡಿದ್ದರು. ಹೀಗೆ ಅಸಮಾಧಾನ ಹೊಂದಿದಂತಹ ಸುಮಾರು 15 ಜನ ಸೇರಿ ಗ್ರೂಪ್ ಮಾಡಿಕೊಂಡಿದ್ದರು. ಮಹಾಂತೇಶ ಕೂಡ ಈ ಗ್ರೂಪ್‌ಗೆ ಅಡ್ಮಿನ್ ಆಗಿದ್ದ.

ಹೊರ ರಾಜ್ಯದಿಂದಲೇ ಚಾಕು ಖರೀದಿ
ಮಹಾಂತೇಶ ಕೆಲ ವರ್ಷಗಳ ಹಿಂದೆ ಮುಂಬೈನ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಮಂಜುನಾಥ ಸಹ ಗುಜರಾತ್‌ನಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿರುವ ಸಮಯದಲ್ಲೆ ಚಾಕುವನ್ನು ಖರೀದಿಸಿಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆದರೆ, ಆಗಲೇ ಕೊಲೆ ಮಾಡುವ ಬಗ್ಗೆ ಯೋಚಿಸಿದ್ದರೇ ಎಂಬ ವಿಷಯ ತಿಳಿದಿಲ್ಲ.

ಮಂಗಳವಾರ ಆರೋಪಿಗಳು ಕೋರ್ಟ್‌ಗೆ
ಗೂರುಜಿಯ ಹತ್ಯೆ ನಡೆದ ದಿನವೇ ಆರೋಪಿಗಳನ್ನು ಪೊಲೀಸರು ರಾಮದುರ್ಗದ ಬಳಿ ಬಂಧಿಸಿದ್ದರು. ನಂತರ ನ್ಯಾಯಾಲಯವು 6 ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು. ಸೋಮವಾರಕ್ಕೆ ಈ ಅವಧಿ ಮುಕ್ತಾಯವಾಗಲಿದ್ದು, ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ: ʻಸರಳ ವಾಸ್ತುʼ ಚಂದ್ರಶೇಖರ ಗುರೂಜಿ ದೇಹಕ್ಕೆ 42 ಇರಿತ, ಕುತ್ತಿಗೆಯಲ್ಲೂ ಗಾಯ

Exit mobile version