Site icon Vistara News

Security Breach in Lok Sabha‌: ಲೋಕಸಭೆ ಭದ್ರತಾ ವೈಫಲ್ಯ; ಮನೋರಂಜನ್‌ ರೂಂ ಸೀಜ್‌!

Manoranjan attack on Lok Sabha

ಮೈಸೂರು: ಲೋಕಸಭೆಯಲ್ಲಿ ಬುಧವಾರ ನಡೆದ ಭದ್ರತಾ ವೈಫಲ್ಯ (Security Breach in Lok Sabha‌) ಹಾಗೂ ಕಲರ್‌ ಗ್ಯಾಸ್‌ ಸಿಡಿತ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಗುಪ್ತಚರ ಇಲಾಖೆ (State Intelligence) ಈಗಾಗಲೇ ವಿವರವಾದ ತನಿಖೆ ನಡೆಸಿದೆ. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗೆ ತನಿಖಾ ವರದಿ ಸಲ್ಲಿಸಲಾಗಿದೆ. ಇನ್ನಷ್ಟು ತನಿಖೆಯನ್ನೂ ಕೈಗೊಳ್ಳಲಾಗುತ್ತಿದೆ. ಈ ಎಲ್ಲದರ ಮಧ್ಯೆ ಆರೋಪಿಯಲ್ಲಿ ಒಬ್ಬನಾಗಿರುವ ಮೈಸೂರಿನ ಮನೋರಂಜನ್ ರೂಮ್‌ ಅನ್ನು ಪೊಲೀಸರು ಸೀಜ್‌ (Manoranjan room seized) ಮಾಡಿದ್ದಾರೆ.

ಮೈಸೂರಿನ ವಿಜಯನಗರದಲ್ಲಿ ಮನೋರಂಜನ್ ರೂಂಗೆ ಪೊಲೀಸರು ಬೀಗ ಹಾಕಿದ್ದಾರೆ. ಮನೋರಂಜನ್ ಕುಟುಂಬಸ್ಥರಿಂದ ಈಗಾಗಲೇ ಒಂದಷ್ಟು ಮಾಹಿತಿ ಸಂಗ್ರಹಿಸಿರುವ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಅಲ್ಲದೆ, ಮತ್ತೆ ಬರುವುದಾಗಿ‌ ತಿಳಿಸಿದ್ದಾರೆ.

ಸದ್ಯ ಮನೋರಂಜನ್ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಪಡೆದುಕೊಂಡಿರುವ ಅಧಿಕಾರಿಗಳು, ಅದರಲ್ಲಿನ ಟ್ರಾನ್ಸಾಕ್ಷನ್ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

ತಂದೆ ಹೇಳಿಕೆಗೂ ಮನೋರಂಜನ್‌ ನಡವಳಿಕೆಗೂ ವ್ಯತ್ಯಾಸ!

ನನ್ನ ಮಗ ಮನೋರಂಜನ್‌ ಹೆಚ್ಚು ಖರ್ಚು ಮಾಡುತ್ತಿರಲಿಲ್ಲ ಎಂದು ತಂದೆ ದೇವರಾಜೇಗೌಡ ಅವರು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜತೆಗೆ ಆತ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ ಎಂದೂ ಹೇಳಿದ್ದಾರೆ. ಆದರೆ, ಮನೋರಂಜನ್‌ ಮೈಸೂರಿನಿಂದ ಬೆಂಗಳೂರು, ದೆಹಲಿಗೆ ಓಡಾಡುತ್ತಿದ್ದ. ಇದಕ್ಕೆಲ್ಲ ಹಣ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಶುರು ಮಾಡಿದ್ದಾರೆ.

ಸ್ಥಳೀಯ ಹೋರಾಟಗಾರರಿಗೂ ಲಿಂಕ್‌? ರಾಜ್ಯ ಗುಪ್ತಚರ ಇಲಾಖೆ ಇನ್ನಷ್ಟು ತನಿಖೆ

ದಾಳಿ ಕುರಿತು ನಡೆಸಿದ ತನಿಖಾ ವರದಿಯನ್ನು‌ ರಾಜ್ಯ ಗುಪ್ತಚರ ಇಲಾಖೆಯು ಕೇಂದ್ರಕ್ಕೆ ಸಲ್ಲಿಕೆ ಮಾಡಿದೆ. ಸದನದೊಳಗೆ ಪ್ರವೇಶಿಸಿ ಕಲರ್‌ ಗ್ಯಾಸ್‌ ಸಿಡಿಸಿದ ಮುಖ್ಯ ಆರೋಪಿಗಳಾದ ಮನೋರಂಜನ್ ಹಾಗೂ ಸಾಗರ್ ಶರ್ಮಾರ ಚಲನವಲನಗಳ ಬಗ್ಗೆ ತನಿಖೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಪ್ರಾಥಮಿಕ‌ ವರದಿಯ ಬಳಿಕವೂ ಮತ್ತೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.

ಲಖನೌದ ಸಾಗರ್‌ ಶರ್ಮಾ ಐದು ವರ್ಷಗಳಿಂದ ಬೆಂಗಳೂರು ಒಡನಾಟ ಹೊಂದಿದ್ದಾನೆ. ಸಾಗರ್‌ ಶರ್ಮಾ ಉತ್ತರ ಪ್ರದೇಶದವನಾದರೂ ಆತನ ತಂದೆ ಮೈಸೂರಿನಲ್ಲಿ ನೆಲೆಸಿದ್ದಾರೆ. ಸಾಗರ್‌ ಶರ್ಮಾನ ತಂದೆ ಶಂಕರ್‌ ಲಾಲ್‌ ಶರ್ಮಾ ಅವರೇ ಮಗನಿಗೆ ಸಂಸತ್‌ ಭೇಟಿಯ ಪಾಸ್‌ ತೆಗೆಸಿ ಕೊಟ್ಟಿದ್ದರು. ಆರೋಪಿಗಳ ಮೊದಲ ಮೀಟಿಂಗೇ ಮೈಸೂರಿನಲ್ಲಿ ನಡೆದಿತ್ತು. ʼಭಗತ್‌ ಸಿಂಗ್‌ ಫ್ಯಾನ್ಸ್‌ ಕ್ಲಬ್ʼ ಎಂಬ ಸೋಶಿಯಲ್‌ ಮೀಡಿಯಾ ಅಕೌಂಟ್‌ ಮೂಲಕ ಆರು ಮಂದಿ ಆರೋಪಿಗಳು ಲಿಂಕ್‌ ಆಗಿದ್ದರು.

ಕ್ರಾಂತಿಕಾರಿ ವ್ಯಕ್ತಿಗಳ ಪುಸ್ತಕ ಓದುತ್ತಿದ್ದ ಮನೋರಂಜನ್

ಮೈಸೂರಿನ ಮೂಲದ ಮನೋರಂಜನ್‌ ಕುಟುಂಬ, ಮನೋರಂಜನ್‌ನ ಶೈಕ್ಷಣಿಕ, ಸಂಘಟನೆ ಮತ್ತಿತರ ವಿವರಗಳನ್ನು ಗುಪ್ತಚರ ಇಲಾಖೆ ಕಲೆಹಾಕಿದೆ. ಮನೋರಂಜನ್‌ ಮನೆಗೆ ಭೇಟಿ ನೀಡಿದ್ದ ಗುಪ್ತಚರ ಇಲಾಖೆ ಸಿಬ್ಬಂದಿ, ಆತ ಹೊಂದಿದ್ದ ಪುಸ್ತಕ, ಗ್ಯಾಜೆಟ್‌ ಇತ್ಯಾದಿಗಳನ್ನು ಪರಿಶೀಲಿಸಿತ್ತು. ಚೆಗುವೆರಾ ಸೇರಿದಂತೆ ಹಲವಾರು ಕ್ರಾಂತಿಕಾರಿ ವ್ಯಕ್ತಿಗಳ ವಿಚಾರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಮನೋರಂಜನ್‌ ಓದುತ್ತಿದ್ದುದು ಪತ್ತೆಯಾಗಿತ್ತು.

ಇದನ್ನೂ ಓದಿ: Murder Case: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಭಾವನ ಕೊಲೆ ಕೇಸ್;‌ ತಮಿಳುನಾಡಲ್ಲಿ ಇಬ್ಬರ ಬಂಧನ

ಮನೋರಂಜನ್‌ ಸಂಪರ್ಕಿತರ ಬಗ್ಗೆ ಶೋಧ

ಮನೋರಂಜನ್‌ ಇತರ ಐದು ಆರೋಪಿಗಳಲ್ಲದೆ ಇನ್ನೂ ಯಾರ್ಯಾರ ಜತೆಗೆ ಸಂಪರ್ಕ ಹೊಂದಿದ್ದ, ತಾವು ನಡೆಸಿದ ದಾಳಿಗೆ ಸ್ಥಳೀಯ ಹೋರಾಟಗಾರರ, ವಿಧ್ವಂಸಕ ಚಿಂತನೆ ಹೊಂದಿದ್ದವರ ಪ್ರಭಾವ ಪಡೆದಿದ್ದನೇ ಎಂಬ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆಗಳ ಪರ ಮನೋರಂಜನ್‌ ಭಾಗವಹಿಸಿರುವ ಸಾಧ್ಯತೆಯಿದ್ದು, ಇದರಲ್ಲಿ ಆತನೊಂದಿಗೆ ಸಂಪರ್ಕ ಹೊಂದಿದ್ದವರ ಮಾಹಿತಿ ಕಲೆಹಾಕಲಾಗುತ್ತಿದೆ.

Exit mobile version