Site icon Vistara News

Modi in Karnataka: ಮೈಸೂರಲ್ಲಿ ಮೋದಿ ಸಂಚಲನ; ನಾಳೆ ಹುಲಿಗಣತಿ ವರದಿ ಬಿಡುಗಡೆ; ಬಂಡೀಪುರದಲ್ಲಿ ಹುಲಿ ಸಫಾರಿ

Security tightened in and around Radisson Hotel ahead of PM Modi in Karnataka updates

ಮೈಸೂರು/ಚಾಮರಾಜನಗರ: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Modi in Karnataka) ಮೇನಿಯಾ ಶುರುವಾಗಿದೆ. ಈಗಾಗಲೇ ಮೈಸೂರು ತಲುಪಿರುವ ಮೋದಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಅಲ್ಲದೆ, ಪ್ರಾಜೆಕ್ಟ್‌ ಟೈಗರ್‌ನ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮ ಮತ್ತು ಹುಲಿಗಣತಿ ಬಿಡುಗಡೆಯನ್ನು ಮಾಡಲಿರುವ ಅವರು, ಬಂಡೀಪುರದಲ್ಲಿ ಹುಲಿ ಸಫಾರಿಯನ್ನೂ ಕೈಗೊಳ್ಳಲಿದ್ದಾರೆ. ಬೆಳಗ್ಗೆಯಿಂದಲೇ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೋಡಿ ಮಾಡಲಿದ್ದಾರೆ.

ಶನಿವಾರ (ಏಪ್ರಿಲ್‌ 8) ರಾತ್ರಿಯೇ ಮೈಸೂರಿಗೆ ಬರಲಿದ್ದಾರೆ. ಭಾನುವಾರ (ಏಪ್ರಿಲ್‌ 9) ಮುಂಜಾನೆ 6.20ಕ್ಕೆ ಮೈಸೂರಿನ ವಿಶೇಷ ಹೆಲಿಪ್ಯಾಡ್‌ನಿಂದ ಚಾಮರಾಜನಗರದ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಪ್ರಯಾಣ ಬೆಳೆಸಲಿದ್ದು, ಬೆಳಗ್ಗೆ 7.15ಕ್ಕೆ ಬಂಡೀಪುರಕ್ಕೆ ಭೇಟಿ ನೀಡಿ, ಸಫಾರಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ತೆಪ್ಪಕಾಡು ಆನೆ ಕ್ಯಾಂಪ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಸುಮಾರು 2 ಗಂಟೆಗಳ ಕಾಲ ಅರಣ್ಯದಲ್ಲಿ ಕಾಲ ಕಳೆಯಲಿದ್ದಾರೆ. ಅಲ್ಲಿಂದ ಮೈಸೂರಿಗೆ ಭೇಟಿ ನೀಡಿ ಬೆಳಗ್ಗೆ 10.30ಕ್ಕೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮಿಸಲಿದ್ದಾರೆ. ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಹುಲಿಗಣತಿ ವರದಿಯನ್ನು ಬಿಡುಗಡೆಗೊಳಿಸಲಿದ್ದಾರೆ.

ಬಿಗಿ ಪೊಲೀಸ್‌ ಬಂದೋಬಸ್ತ್

ಪ್ರಧಾನಿ ನರೆಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ರ‍್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೋಟೆಲ್ ಭದ್ರತೆಗಾಗಿ 261 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 4 ಎಸಿಪಿ, 5 ಇನ್ಸ್‌ಪೆಕ್ಟರ್, 11 ಪಿಎಸ್ಐ, 19 ಎಎಸ್ಐ, 167 ಹೆಡ್‌ ಕಾನ್ಸ್‌ಟೇಬಲ್, 50 ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನಿಯೋಜನೆ ಮಾಡಲಾಗಿದೆ.

ಹೋಟೆಲ್‌ನಲ್ಲಿರುವ ಎಲ್ಲ 140 ರೂಂ ಅನ್ನು ಸಹ ಪ್ರಧಾನಿ ಕಾರ್ಯಾಲಯದವರು ಬುಕ್ ಮಾಡಿದ್ದಾರೆ. ಸಮೀಪದ ಮಾಲ್ ಆಫ್ ಮೈಸೂರಿಗೆ ಬೀಗ ಹಾಕಲಾಗಿದೆ. ಭದ್ರತಾ ದೃಷ್ಟಿಯಿಂದ ಎಂ.ಜಿ. ರಸ್ತೆಯ ಸೊಪ್ಪು, ತರಕಾರಿ ಬೀದಿ ಬದಿ ವ್ಯಾಪಾರವನ್ನೂ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: Hasana Politics: ನನ್ನ ಹತ್ರ ಬ್ಲ್ಯಾಕ್‌ಮೇಲ್‌ ನಡೆಯಲ್ಲ; ಟಿಕೆಟ್‌ ಕೊಡದಿದ್ರೆ ಪಕ್ಷೇತರ ಎಂಬ ವರಸೆಗೆ ಕುಮಾರಸ್ವಾಮಿ ತಿರುಗೇಟು

ಅನಗತ್ಯ ಸಂಚಾರಕ್ಕೆ ಬ್ರೇಕ್‌

ಪ್ರಧಾನಿ ಮೋದಿ ಮೈಸೂರಿಗೆ ಆಗಮನ ಹಿನ್ನೆಲೆಯಲ್ಲಿ ಅಂತಿಮ ಹಂತದ ಭದ್ರತಾ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ಮೈಸೂರು ಏರ್‌ಪೋರ್ಟ್ ಸುತ್ತಮುತ್ತ ಬಿಗಿ‌ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪ್ರಯಾಣಿಕರನ್ನು ಹೊರತುಪಡಿಸಿ ಅನಗತ್ಯ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಪ್ರತಿ ವಾಹನ ತಪಾಸಣೆ ನಂತರ ಏರ್‌ಪೋರ್ಟ್‌ಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಏರ್‌ಪೋರ್ಟ್ ಹೊರ ಮತ್ತು ಒಳ ಆವರಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೋದಿ ಸಂಚರಿಸುವ ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 181 ಹೆದ್ದಾರಿ ಬಂದ್‌

ರಾಷ್ಟ್ರೀಯ ಹೆದ್ದಾರಿ 181ರಲ್ಲಿ ಶನಿವಾರ (ಏ. 8) ಸಂಜೆ 4ರಿಂದ ಭಾನುವಾರ (ಏ. 9) ಮಧ್ಯಾಹ್ನ 12ರ ವರೆಗೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಆದರೆ, ಮೋದಿ ಆಗಮನ ಹಿನ್ನೆಲೆಯಲ್ಲಿ ಕರ್ನಾಟಕ-ತಮಿಳುನಾಡು ಗಡಿಯ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ಬಿಗಿ ತಪಾಸಣೆ ಮಾಡುತ್ತಿರುವ ಪರಿಣಾಮ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಂ ಉಂಟಾಯಿತು. ಇದರಿಂದ ತಮಿಳುನಾಡಿಗೆ ತೆರಳಲು ವಾಹನ ಸವಾರರು ಪರದಾಡುವಂತಾಯಿತು.

ಇದನ್ನೂ ಓದಿ: ಗಂಡನನ್ನು ಹೇಡಿ, ನಿರುದ್ಯೋಗಿ ಎನ್ನುವುದು, ಪೋಷಕರನ್ನು ಬಿಟ್ಟು ಬಾ ಎನ್ನುವುದು ಕೂಡ ಕ್ರೌರ್ಯ: ಹೈಕೋರ್ಟ್

ಎಲ್ಲೆಲ್ಲಿ ಸಂಚಾರ ಬದಲಾವಣೆ?

ಮೈಸೂರು ಮತ್ತು ಚಾಮರಾಜ ನಗರದಲ್ಲಿ ರಸ್ತೆ ಸಂಚಾರದಲ್ಲಿ ಹಲವು ಬದಲಾವಣೆ ಆಗಲಿದೆ. ಶನಿವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆವರೆಗೆ, ಬೆಳಗ್ಗೆ 3 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಮತ್ತು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೂ ಬದಲಾವಣೆ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಂಜನಗೂಡು ರಿಂಗ್ ರಸ್ತೆ ಜಂಕ್ಷನ್‌ನಿಂದ ಎಲೆತೋಟ ಜಂಕ್ಷನ್, ರಾಜಹಂಸ ಜಂಕ್ಷನ್ ಗನ್ ಹೌಸ್ ಜಂಕ್ಷನ್‌ವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ನಂಜನಗೂಡು ರಸ್ತೆ ಮೂಲಕ ಸಂಚರಿಸುವ ವಾಹನಗಳು ಕಡಕೊಳ ದಡದಹಳ್ಳಿ ರಮಾಬಾಯಿನಗರ ಶ್ರೀರಾಂಪುರ ರಿಂಗ್ ರಸ್ತೆ ಮೂಲಕ ಅವಕಾಶ ಮಾಡಿಕೊಡಲಾಗಿದ್ದು, ಟಿ.ನರಸೀಪುರ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬಲ ತಿರುವು ಪಡೆದು ವಾಯುವಿಹಾರ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Project Tiger : ಹುಲಿಗಳಿಗೆ ಏಕೆ ಗಣತಿ? ನಮ್ಮ ದೇಶದ ಹುಲಿ ಸಂತತಿ ಕುರಿತು ಇಲ್ಲಿದೆ ವಿಶೇಷ ಮಾಹಿತಿ

ಮೈಸೂರಿನಲ್ಲಿ ಬೆಳಗ್ಗೆ ವಾಹನ ಸಂಚಾರ ಇರಲ್ಲ

ಏಪ್ರಿಲ್ 9ರ ಬೆಳಗ್ಗೆ 3 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ರಾಜಹಂಸ ಜಂಕ್ಷನ್‌ನಿಂದ ಮಹಾರಾಣಾ ಪ್ರತಾಪಸಿಂಹ ವೃತ್ತದವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಬೆಳಗ್ಗೆ 06 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಹುಣಸೂರು ರಸ್ತೆ ಅಟಲ್ ಬಿಹಾರಿ ವಾಜಪೇಯಿ ವೃತ್ತದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ, ಕೆ.ಆರ್.ಬಿ ರಸ್ತೆ ಡಿ.ಸಿ ಕಛೇರಿ ಆರ್ಚ್ ಗೇಟ್ ಜಂಕ್ಷನ್ ನಿಂದ ಏಕಲವ್ಯ ವೃತ್ತದವರೆಗೆ ಹಾಗೂ ರಾಧಾಕೃಷ್ಣ ಮಾರ್ಗ ಕೌಟಿಲ್ಯ ವೃತ್ತದಿಂದ ಮುಡಾ ಜಂಕ್ಷನ್‌ವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರ ನಿರ್ಬಂಧ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಸಂಚಾರದ ಸಂಪೂರ್ಣ ವಿವರ

Exit mobile version