ರಾಮನಗರ: ಮಾಗಡಿ ತಾಲೂಕಿನ ಬಂಡೇ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರ ಆತ್ಮಹತ್ಯೆಗೆ ಕಾರಣವಾಯಿತು ಎನ್ನಲಾದ ಹನಿ ಟ್ರ್ಯಾಪ್‌ಗೆ ಸಂಬಂಧಿಸಿದ ಮೊಬೈಲ್ ದಾಖಲೆಗಳನ್ನು ಸಂಗ್ರಹಿಸಲು ಪೊಲೀಸರು ಭಾರಿ ಹೆಣಗಾಡುತ್ತಿದ್ದಾರೆ. ಇದಕ್ಕೆ ಕಾರಣ ನೀಲಾಂಬಿಕೆ!
ಹೌದು, ಹನಿ ಟ್ರ್ಯಾಪ್‌ನಲ್ಲಿ ಪ್ರಧಾನ ಪಾತ್ರ ವಹಿಸಿರುವ ಈ ಎಂಜಿನಿಯರಿಂಗ್ ವಿದ್ಯಾರ್ಥಿನಿಯಿಂದಾಗಿ ಪೊಲೀಸರು ದಾಖಲೆ ಸಂಗ್ರಹಕ್ಕೆ ಪರದಾಡಬೇಕಾಗಿದೆ. ನಿಜವಾಗಿ ಹನಿ ಟ್ರ್ಯಾಪ್‌ನ ಪ್ರಕರಣಗಳಲ್ಲಿ ಮೊಬೈಲ್‌ಗಳಲ್ಲೇ ಸಾಕಷ್ಟು ದಾಖಲೆಗಳು ಇರುವುದರಿಂದ ಸಾಕ್ಷ್ಯ ಸಂಗ್ರಹ ತುಂಬ ಸುಲಭ. ಆದರೆ, ನೀಲಾಂಬಿಕೆ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದು, ಸ್ವಲ್ಪ ಹೆಚ್ಚೇ ಮೊಬೈಲ್ ಬಗ್ಗೆ ತಿಳಿದುಕೊಂಡಿದ್ದಾಳೆ ಎನ್ನಲಾಗಿದೆ. ತನ್ನೆಲ್ಲ ಜ್ಞಾನ ಬಳಸಿರುವ ಆಕೆ ವಿಡಿಯೊ ಕಾಲ್‌ನ ಎಲ್ಲ ಡಾಟಾಗಳನ್ನು ಡಿಲೀಟ್ ಮಾಡಿದ್ದಾಳೆ. ಇದು ಎಷ್ಟರ ಮಟ್ಟಿಗೆ ಎಂದರೆ ಅದನ್ನು ರಿಟ್ರೀವ್ ಮಾಡಲು ಡಾಟಾ ತಜ್ಞರೇ ಹೆಣಗಾಡಬೇಕಾದ ಪರಿಸ್ಥಿತಿ ಬಂದಿದೆ ಎನ್ನಲಾಗಿದೆ.
ಇತ್ತೀಚೆಗೆ ಪೊಲೀಸರು ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಮತ್ತು ಮಹದೇವಯ್ಯ ಅವರನ್ನು ಬಂಧಿಸಿದಾಗ ಅವರ ಕೈಯಿಂದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ಆಕೆ ಕೊಟ್ಟಿದ್ದು ಹೊಸ ಮೊಬೈಲ್. ಆದರಲ್ಲಿದ್ದ ಡಾಟಾವನ್ನೂ ಡಿಲೀಟ್ ಮಾಡಿದ್ದಳು. ಪೊಲೀಸರು ಅದೇ ಆಕೆಯ ಮೊಬೈಲ್ ಎಂದು ತಿಳಿದು ಅದರ ಬೆನ್ನು ಹತ್ತಿದ್ದರು. ಅದರಲ್ಲಿ ಏನೂ ಸಿಗಲಿಲ್ಲ. ಅಷ್ಟು ಹೊತ್ತಿಗೆ ಅದು ಹೊಸ ಮೊಬೈಲ್. ಈ ಕಿತಾಪತಿಗಳೆಲ್ಲ ನಡೆದಿದ್ದು ಹಳೆ ಮೊಬೈಲ್‌ನಲ್ಲಿ ಎಂದು ಅವರಿಗೆ ತಿಳಿಯಿತು. ಆಗ ಅವರು ಹಳೆ ಮೊಬೈಲ್ ಬೆನ್ನು ಹತ್ತಿದರು. ಹಳೆಯ ಮೊಬೈಲ್ ಬಚ್ಚಿಟ್ಟು ಅಮಾಯಕಳಂತೆ ವರ್ತಿಸುತ್ತಿದ್ದ ಆಕೆಯ ವರಸೆ ಬಯಲಾಯಿತು. ಆದರೆ, ಎಷ್ಟೇ ಪ್ರಯತ್ನಪಟ್ಟರೂ ಮೊಬೈಲ್‌ನಲ್ಲಿ ಏನಿದೆ ಎನ್ನುವುದು ಬಯಲಾಗಿಲ್ಲ. ಯಾಕೆಂದರೆ ಆಕೆ ಹಳೆ ಪುರಾಣ ಬಿಚ್ಚಿಡಲಾಗದ ಹಾಗೆ ಡಿಲೀಟ್ ಮಾಡಿದ್ದಳು ಎನ್ನಲಾಗಿದೆ.
ಫೋನನ್ನು ಬಚ್ಚಿಟ್ಟಿದ್ದು ಮಾತ್ರವಲ್ಲ ಅದನ್ನು ಹಲವು ಬಾರಿ ಫ್ಲ್ಯಾಶ್ ಮಾಡಿ ಹಳೆ ದಾಖಲೆ ರಿಟ್ರೀವ್ ಮಾಡಲಾಗದಂತೆ ಮಾಡಿದ್ದಾಳೆ ಎನ್ನಲಾಗಿದೆ. ಕಂಪ್ಯೂಟರ್ ಸೈನ್ಸ್ ಓದಿದ್ದ ಯುವತಿ ಸಾಕ್ಷ್ಯ ನಾಶ ಮಾಡಲು ತನ್ನ ಬುದ್ಧಿವಂತಿಕೆ ಬಳಸಿದ್ದಾಳೆ ಎನ್ನಲಾಗಿದೆ. ಹಲವು ಬಾರಿ ಫ್ಲ್ಯಾಶ್ ಆಗಿರೋದ್ರಿಂದ ಹಳೆ ಮೊಬೈಲ್ ರಿಟ್ರೀವ್ ಕಷ್ಟ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Seer suicide | ಬಸವಲಿಂಗ ಶ್ರೀಗಳ ಮೇಲೆ ದ್ವೇಷ ಸಾಧನೆಗೆ ಮುಂದಾಗಿದ್ದೇಕೆ ನೀಲಾಂಬಿಕೆ?