Site icon Vistara News

Self Harming : ಜಿಮ್‌ ಟ್ರೇನರ್‌ ಆತ್ಮಹತ್ಯೆ; ಸಾವಿಗೆ ಯಾರೂ ಕಾರಣರಲ್ಲ ಎಂದ ಪತ್ನಿ

Gym Trainer suicide

ಮೈಸೂರು: ಮೈಸೂರಿನ ಜಿಮ್‌ ಟ್ರೇನರ್‌ (Gym Trainer) ಒಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿಗೆ ಶರಣಾಗಿದ್ದಾರೆ (Self Harming). ಮೈಸೂರು ಜಿಲ್ಲೆಯ (Mysore News) ನಂಜನಗೂಡಿನ ವಜ್ರದೇಹಿ ಜಿಮ್‌ನಲ್ಲಿ ಟ್ರೇನರ್‌ ಆಗಿರುವ ಶಬರೀಶ್ (35) ಅವರೇ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡವರು.

ನಂಜನಗೂಡಿನ ಸಿದ್ದೇಗೌಡ ಲೇಔಟ್‌ನಲ್ಲಿ ವಾಸವಾಗಿರುವ ಶಬರೀಶ್ (35) ಬುಧವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾರೆ. ತಾನು ಜೀವನದಲ್ಲಿ ಬಹಳಷ್ಟು ನೊಂದಿರುವುದಾಗಿ ಅವರು ಡೆತ್‌ ನೋಟ್‌ನಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಯಾವ ಕಾರಣಕ್ಕಾಗಿ ನೊಂದಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

ಈ ನಡುವೆ, ಅವರ ಪತ್ನಿ ಮೇಘಾ ಅವರು ನಂಜನಗೂಡು ಪೊಲೀಸ್‌ ಠಾಣೆಗೆ ಗಂಡನ ಸಾವಿನ ಬಗ್ಗೆ ದೂರು ನೀಡಿದ್ದಾರೆ. ಆದರೆ, ಶಬರೀಶ್ ಸಾವಿಗೆ ಯಾರೂ ಕಾರಣರಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಹುಶಃ ಶಬರೀಶ್‌ ಅವರೇ ನೊಂದಿದ್ದರು, ಇದಕ್ಕೆ ಬೇರೆ ಯಾರೂ ಕಾರಣರಲ್ಲ ಎಂದು ಅವರು ಹೇಳಿರಬಹುದು ಎನ್ನಲಾಗಿದೆ.
ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Self Harming: ರಿಪ್ಪನ್‌ಪೇಟೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಬಾರ್‌ ಮುಂದೆ ನಿಂತಿದ್ದ ವ್ಯಕ್ತಿಯನ್ನು ಇರಿದು ಕೊಲೆ

ಮಂಡ್ಯ: ಕಳೆದ ನವೆಂಬರ್‌ 13ರಂದು ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿಯ ಬಾರ್ ಎದುರು ಗುರುವಿಲಾಸ್‌ (34) ಎಂಬವರ ಭೀಕರ ಕೊಲೆಯಾಗಿದ್ದು, ಅದಕ್ಕೆ ಸಂಬಂಧಿಸಿದ ಸಿಸಿ ಟಿವಿ ಫೂಟೇಜ್‌ಗಳು ಲಭ್ಯವಾಗಿದ್ದು, ಭಯ ಹುಟ್ಟಿಸುತ್ತಿದೆ. ಇಬ್ಬರು ವ್ಯಕ್ತಿಗಳು ಬಾರ್ ಮುಂದೆ ನಿಂತಿದ್ದ ವ್ಯಕ್ತಿಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದ ಗುರುವಿಲಾಸ್ ಅವರು ಕೊಲೆಯಾದವರು. ಅವರು ಮತ್ತು ಗೆಳೆಯರ ಮಧ್ಯೆ ಬಾರ್‌ನಲ್ಲಿ ಕುಡಿದ ಮೇಲೆ ಜಗಳವಾಗಿತ್ತು. ಜಗಳವಾದ ಬಳಿಕ ಗುರುವಿಲಾಸ್ ಬಾರ್ ಮುಂದೆ ನಿಂತಿದ್ದರು. ಇದನ್ನು ಗಮನಿಸಿದ ಆರೋಪಿಗಳು ಕಾರಿನಲ್ಲಿ ಮರಳಿ ಬಂದು ಕೊಲೆ ಮಾಡಿದ್ದಾರೆ.

ಕಡಿಲುವಾಗಿಲು ಗ್ರಾಮದ ಶಿವಕುಮಾರ್, ಮಂಡ್ಯದ ಗುತ್ತಲು ಕಾಲೋನಿಯ ರಾಘವೇಂದ್ರ ಎಂಬವರೇ ಕೊಲೆ ಮಾಡಿದವರು. ಜಗಳ ಮಾಡಿದ ಬಳಿಕ ಶಿವಕುಮಾರ್‌ ಮತ್ತು ರಾಘವೇಂದ್ರ ಹೊರಗೆ ಹೋಗಿದ್ದರು. ಅವರು ಕಾರಿನಲ್ಲಿ ತೆರಳುವಾಗ ಗುರುವಿಲಾಸ್‌ ಹೊರಗೆ ಬಂದು ನಿಂತಿದ್ದರು. ಆಗ ಕಾರಿನಿಂದ ಇಳಿದು ಬಂದ ದುಷ್ಕರ್ಮಿಗಳು ಚಾಕುವಿನಿಂದ ಮನಸೋ ಇಚ್ಛೆ ಇರಿದು ಕೊಲೆ ಮಾಡುತ್ತಾರೆ. ಮತ್ತು ಬಳಿಕ ಅದೇ ಕಾರಿನಲ್ಲಿ ಪರಾರಿಯಾಗಿದ್ದರು.

ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ಮಂಡ್ಯದ ಪೂರ್ವ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Exit mobile version