ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಹಿರಿಯ ಪ್ರಚಾರಕ, ಲೇಖಕ, ಕವಿ, ಅನುವಾದಕ ಚಂದ್ರಶೇಖರ ಭಂಡಾರಿ (87) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆರ್‌ಎಸ್‌ಎಸ್ ಸಂಘಟನಾತ್ಮಕ ಚಟುವಟಿಕೆಯಲ್ಲಿ ವಿವಿಧೆಡೆ ಹೊಣೆಯನ್ನು ನಿಭಾಯಿಸಿದ್ದ ಚಂದ್ರಶೇಖರ ಭಂಡಾರಿ ಅವರು ಆರ್‌ಎಸ್‌ಎಸ್‌ನ ಬೌದ್ಧಿಕ ವಲಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅನೇಕ ಪುಸ್ತಕಗಳನ್ನು ರಚಿಸುವ ಜತೆಗೆ ಬೇರೆ ಭಾಷೆಗಳಿಂದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು.
ಭಾರತೀಯ ಮಜ್ದೂರ್ ಸಂಘದ ನಾಯಕರಾಗಿದ್ದ ದತ್ತೋಪಂತ ಠೇಂಗಡಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಮರಾಠಿಯಲ್ಲಿ ರಚಿಸಿದ್ದ ‘ಸಾಮಾಜಿಕ ಕ್ರಾಂತೀಚೀ ವಾಟಚಾಲ ಆಣಿ ಡಾ|| ಅಂಬೇಡ್ಕರ್’ ಕೃತಿಯನ್ನು ಕನ್ನಡಕ್ಕೆ ʼಸಾಮಾಜಿಕ ಕ್ರಾಂತಿ ಸೂರ್ಯ ಡಾ. ಬಿ.ಆರ್. ಅಂಬೇಡ್ಕರ್ʼ ಶೀರ್ಷಿಕೆಯಲ್ಲಿ 2011ರಲ್ಲಿ ಅನುವಾದಿಸಿದ್ದರು. ಅಂಬೇಡ್ಕರ್ ಅವರ ಕುರಿತು ವಿಭಿನ್ನ ದೃಷ್ಟಿಕೋನವಿರುವ ಕೃತಿಯ ಅನುವಾದಕ್ಕೆ ಕುವೆಂಪು ಭಾಷಾ ಭಾರತಿ ವತಿಯಿಂದ 2011ನೇ ಸಾಲಿನ ʼಉತ್ತಮ ಅನುವಾದಕʼ ಪ್ರಶಸ್ತಿಯನ್ನು 2014ರಲ್ಲಿ ಪಡೆದಿದ್ದರು.
ಅನೇಕ ದೇಶಭಕ್ತಿ ಕವಿತೆಗಳನ್ನು ಭಂಡಾರಿ ಅವರು ರಚಿಸಿದ್ದರು. ಇವರ ರಚನೆಯ ʼಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವುʼ ಗೀತೆಯನ್ನು ರಾಜ್ಯ ಸರ್ಕಾರವು ದೇಶಭಕ್ತಿ ಗೀತೆ ಎಂದು ಪರಿಗಣಿಸಿ ಶಾಲೆಗಳಲ್ಲಿ ಹಾಡಿಸಲು ಆಯ್ಕೆ ಮಾಡಿಕೊಂಡಿತ್ತು. ಸುಮಾರು ಅರವತ್ತು ವರ್ಷ ಅವರು ಆರ್‌ಎಸ್‌ಎಸ್ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕದ ವಿಶ್ವ ಸಂವಾದ ಕೇಂದ್ರದ ಸಂಸ್ಥಾಪಕ ಟ್ರಸ್ಟಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪದಾಧಿಕಾರಿ ಸೇರಿ ಅನೇಕ ಕಾರ್ಯಗಳನ್ನು ನಿರ್ವಹಣೆ ಮಾಡಿದ್ದಾರೆ.
2019ರಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು, ಅಡುಗೆಗೆ ಸರಿಯಾದ ಪ್ರಮಾಣದಲ್ಲಿ ಉಪ್ಪು ಇದ್ದರೆ ಮಾತ್ರ ರುಚಿಯಾಗಿರುತ್ತದೆ. ಅಂತಹ ʼಸಾಲ್ಟ್ ಆಫ್ ದಿ ಅರ್ಥ್ʼ ಎಂದು ಚಂದ್ರಶೇಖರ ಭಂಡಾವರಿ ಅವರಿಗೆ ಹೇಳಬಹುದು ಎಂದು ಬಣ್ಣಿಸಿದ್ದರು.
ಅಂತಿಮ ದರ್ಶನ
ಅಂತಿಮ ದರ್ಶನವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಾಲಯ ‘ಕೇಶವಕೃಪಾ’ದಲ್ಲಿ ಸೋಮವಾರ ಬೆಳಗ್ಗೆ 8.00 ರಿಂದ 9.00ರ ತನಕ ನಡೆಯಲಿದೆ. ಅಂತ್ಯಕ್ರಿಯೆಯು ಬೆಳಗ್ಗೆ 10.00 ಗಂಟೆಗೆ ಬೆಂಗಳೂರಿನ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ.
ಇದನ್ನೂ ಓದಿ | RSS | ಭಾರತದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಹಿಂದೂ: ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್