ಮಂಗಳೂರು: ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಈ ಹೊತ್ತಿನಲ್ಲಿ ಅಮೃತಾ ಜೋಷಿ ಎಂಬ ಈಗಷ್ಟೇ ೨೨ರ ಹರೆಯಕ್ಕೆ ಕಾಲಿಟ್ಟಿರುವ ಹುಡುಗಿ ಇಡೀ ದೇಶ ಸುತ್ತಿ ಬಂದಿದ್ದಾಳೆ. ಆರು ತಿಂಗಳ ಹಿಂದೆ ಅರುಣಾಚಲ ಪ್ರದೇಶಕ್ಕೆ ಬೈಕ್‌ನಲ್ಲಿ ಹೊರಟ ಈ ಹುಡುಗಿ ಈಗ ಮಂಗಳೂರಿಗೆ ಮರಳಿದ್ದಾರೆ. ದೇಶವನ್ನು ಒಂಟಿಯಾಗಿ ಸುತ್ತಿ ಅದ್ಭುತ ಅನುಭವಗಳ ಮೂಟೆ ಹೊತ್ತು ತಂದಿದ್ದಾರೆ.
ಇಂಥ ಸಾಹಸಿ ಹುಡುಗಿ ಅಮೃತಾ ಮೂಲತಃ ಕಾಸರಗೋಡು ಜಿಲ್ಲೆಯ ಕುಂಬಳೆಯವರು. ಅಪ್ಪ ಅಶೋಕ್ ಜೋಷಿ ಮತ್ತು ಅಮ್ಮ ಅನ್ನಪೂರ್ಣ ಜೋಷಿ. ಈಕೆಗೆ ಒಬ್ಬ ಸಹೋದರ, ಸಹೋದರಿ ಇದ್ದಾರೆ. ಸಣ್ಣ ವಯಸ್ಸಿನಿಂದಲೇ ಸಾಹಸಕ್ಕೆ ಹೆಸರಾದ ಈ ಹುಡುಗಿ ಫೆಬ್ರವರಿ ೯ರಂದು ಬೈಕ್ ಯಾತ್ರೆ ಶುರು ಮಾಡಿದ್ದರು. ನಡುವೆ ಬೈಕ್ ಅಪಘಾತವಾದ ಹಿನ್ನೆಲೆಯಲ್ಲಿ ಒಂದು ತಿಂಗಳು ಯಾತ್ರೆಯನ್ನು ಮೊಟಕುಗೊಳಿಸಲಾಗಿತ್ತು. ಆದರೆ, ಛಲ ಬಿಡದ ಅಮೃತಾ ಅವರು ಯಾತ್ರೆಯನ್ನು ಮುಂದುವರಿಸಿ ದೇಶದ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿ ವಾಪಸ್ ಬಂದಿದ್ದಾರೆ.
ತಂದೆಯ ಆಸೆ, ತಾಯಿಯ ಪ್ರೋತ್ಸಾಹ
ಅಮೃತಾ ಹದಿನೇಳನೇ ವಯಸ್ಸಿನಲ್ಲೇ ಬೈಕ್ ರೈಡಿಂಗ್ ಕಲಿತಿದ್ದರು. ಈಕೆಯ ಬೈಕ್ ಕ್ರೇಝ್‌ಗೆ ಸಂಪೂರ್ಣ ಸಹಕಾರ ನೀಡಿದ್ದು ತಂದೆ ಅಶೋಕ್ ಜೋಷಿ. ಮಗಳು ಬೈಕ್ ರೈಡಿಂಗ್ ಕಲೀಬೇಕು ಮತ್ತು ಬೈಕ್‌ನಲ್ಲಿ ದೇಶ ಸುತ್ತಬೇಕು ಅನ್ನೋದು ಜೋಷಿಯವರ ಕನಸಾಗಿತ್ತು. ಅದರೆ ಅಮೃತಾ ಪರಿಪೂರ್ಣವಾಗಿ ಬೈಕ್ ರೈಡಿಂಗ್ ಕಲಿಯುವ ವೇಳೆಗೆ ತಂದೆ ಅಶೋಕ್ ಜೋಷಿ ಅವರು ಇಹಲೋಕ ತ್ಯಜಿಸಿದ್ದರು. ಎರಡುವರೆ ವರ್ಷದ ಹಿಂದೆ ಅಶೋಕ್ ಜೋಷಿಯವರ ಅಕಾಲಿಕ ಅಗಲಿಕೆಯಿಂದ ಮನೆಯವರು ಕುಗ್ಗಿ ಹೋಗಿದ್ದರು. ಹೇಗೋ ಸುಧಾರಿಸಿಕೊಂಡು ತನ್ನ ಪದವಿಯನ್ನು ಮುಗಿಸಿದ ಅಮೃತಾ ಜೋಷಿಗೆ ಈ ವೇಳೆ ಪ್ರೋತ್ಸಾಹ ನೀಡಿದ್ದು ತಾಯಿ ಅನ್ನಪೂರ್ಣ ಜೋಷಿ ಅವರು. ತಂದೆಯ ಆಸೆಯನ್ನು ಪೂರೈಸಬೇಕು ಹಾಗೂ ಬೈಕ್‌ನಲ್ಲೇ ದೇಶ ಪರ್ಯಟನೆ ಮಾಡಿ ಸಮಾಜಕ್ಕೆ ಸಂದೇಶ ನೀಡಬೇಕು ಎಂದು ತಾಯಿ ಬೆನ್ನು ತಟ್ಟಿದರು. ಆದರೆ, ಒಬ್ಬ ಹೆಣ್ಮಗಳು ಏಕಾಂಗಿಯಾಗಿ ಬೈಕ್‌ನಲ್ಲಿ ಸುತ್ತೋದು ಅಂದ್ರೆ ಸುಲಭ ಅಲ್ಲ ಮತ್ತು ಜನರು ಈ ಬಗ್ಗೆ ಏನಾದರೂ ಮಾತನಾಡಬಹುದು ಅನ್ನುವ ಮಾತು ಕೂಡಾ ಕೇಳಿ ಬಂದಿತ್ತು. ಆದರೆ ಜನರು ಮಾತನಾಡ್ತಾರೆ ಅಂತ ನಾವು ಏನೂ ಮಾಡದೇ ಇದ್ದರೆ ಅದು ಆತ್ಮವಂಚನೆ ಆಗುತ್ತದೆ ಅಂತ ಮತ್ತೆ ಬೆನ್ನಿಗೆ ನಿಂತದ್ದು ಅದೇ ಅಮ್ಮ ಅನ್ನಪೂರ್ಣ ಜೋಷಿ. ಹಾಗೆ ಧೈರ್ಯ ಮಾಡಿ ಹೊರಟರು ಅಮೃತಾ ಜೋಷಿ.
ಕ್ಯಾಲಿಕಟ್‌ನಿಂದ ಬೈಕ್ ಯಾತ್ರೆ ಆರಂಭ
ನಿಜವೆಂದರೆ ಒಂದೇ ಹಂತದಲ್ಲಿ ಇಡೀ ದೇಶ ಸುತ್ತುವ ಪ್ಲ್ಯಾನ್ ಅಮೃತಾ ಅವರಿಗೆ ಇರಲಿಲ್ಲ. ಆದರೆ, ಮೊದಲ ಹಂತದಲ್ಲಿ ಸಿಕ್ಕಿದ ಪ್ರೋತ್ಸಾಹದಿಂದ ಅದು ದೇಶವ್ಯಾಪಿ ಪರ್ಯಟನೆಯಾಗಿ ಪರಿವರ್ತನೆಗೊಂಡಿತು. ೨೦೨೨ರ ಫೆಬ್ರವರಿ ೯ರಂದು ಕ್ಯಾಲಿಕಟ್‌ನಿಂದ ಆರಂಭಗೊಂಡ ಬೈಕ್ ಯಾತ್ರೆ ಏಪ್ರಿಲ್ ೯ರ ಹೊತ್ತಿಗೆ ಅರುಣಾಚಲ ತಲುಪಿತ್ತು. ಅರುಣಾಚಲದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು ಅಲ್ಲಲ್ಲಿ ಸಣ್ಣಪುಟ್ಟ ಗಲಭೆಗಳು ಕೂಡಾ ನಡೀತಾ ಇತ್ತು. ಆದರೆ, ಅದಕ್ಕೆ ಹೆದರದೆ ಅಲ್ಲಿಗೆ ತೆರಳಿದ್ದರು ಅಮೃತಾ. ಪ್ರತಿ ದಿನ 8 ಗಂಟೆಗಳ ಕಾಲ ಬೈಕ್ ರೈಡ್ ಮಾಡುತ್ತಿದ್ದ ಅಮೃತಾ ಅವರಿಗೆ ಅರುಣಾಚಲ ಪ್ರದೇಶ ತಲುಪುವವರೆಗೂ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಜನರು ಸ್ವಂತ ತಂಗಿಯೊಬ್ಬಳು, ಮಗಳೊಬ್ಬಳು ಬೈಕ್ ಯಾತ್ರೆ ಮಾಡ್ತಾ ಇದ್ದಾಳೆ ಅನ್ನೋ ರೀತಿಯಲ್ಲಿ ಮಾರ್ಗದರ್ಶನ ಮಾಡಿದರು. ಮುಂದಿನ ಊರಿಗೆ ಹೇಗೆ ಹೋಗಬೇಕು ಎಲ್ಲಿ ಉಳಿದುಕೊಳ್ಳಬೇಕು ಯಾರನ್ನು ಸಂಪರ್ಕಿಸಬೇಕು ಹೀಗೆ ಎಲ್ಲಾ ವ್ಯವಸ್ಥೆಗಳನ್ನು ಜನರೇ ಮಾಡಿ ಕೊಟ್ಟಿದ್ದಾರಂತೆ. ಅರುಣಾಚಲ ತಲುಪಿದ ಬಳಿಕ ಅಲ್ಲಿನ ಜನರು ನೀಡಿದ ಆತಿಥ್ಯ ಹಾಗೂ ಪ್ರೀತಿ, ಗೌರವಗಳನ್ನು ನೋಡಿ ಬೈಕ್ ಯಾತ್ರೆ ಮುಂದುವರಿಸಲು ಪ್ರೇರಣೆಯಾಯಿತು ಎನ್ನುತ್ತಾರೆ ಅಮೃತಾ.
ಬೈಕ್ ಅಪಘಾತದಿಂದ ಯಾತ್ರೆ ಮೊಟಕು
ಅರುಣಾಚಲದ ತವಾಂಗ್ ನಲ್ಲಿ ಅಂತ್ಯಗೊಳ್ಳಬೇಕಾಗಿದ್ದ ಅಮೃತಾ ಅವರ ಬೈಕ್ ಪ್ರಯಾಣ ಮತ್ತೆ ಆರಂಭವಾಗಿತ್ತು. ದೇಶದ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡುವ ಹಿನ್ನೆಲೆಯಲ್ಲಿ ಲಡಾಕ್, ಪಂಜಾಬ್, ದೆಹಲಿ ಸುತ್ತಿ ಉತ್ತರ ಪ್ರದೇಶ ತಲುಪಿದ್ದ ಅಮೃತಾ ಅವರಿಗೆ ಹೈವೇಯಲ್ಲಿ ಅಪಘಾತವಾಗಿತ್ತು. ಹಿಂದಿನಿಂದ ಬಂದ ಸ್ಕಾರ್ಪಿಯೋ ವಾಹನ ಅಮೃತಾ ಓಡಿಸುತ್ತಿದ್ದ ಬೈಕ್‌ಗೆ ಪರಿಣಾಮ ಬೈಕ್ ಹೊಡೆದಿತ್ತು. ಸಂಪೂರ್ಣ ನುಜ್ಜುಗುಜ್ಜಾಗಿತ್ತು. ಅಮೃತಾಗೂ ಗಂಭೀರ ಸ್ವರೂಪದ ಏಟುಗಳಾಗಿದ್ದ ಕಾರಣ ಮನೆಗೆ ವಾಪಸಾಗಿ ಒಂದು ತಿಂಗಳು ಮನೆಯಲ್ಲೇ ಇರುವಂತಾಗಿತ್ತು. ಹಾಗಂತ ದೇಶ ಸುತ್ತುವ ಕನಸು ಅಪೂರ್ಣವಾಗಲು ಬಿಡಬಾರದು ಅನ್ನೋ ಛಲವೂ ಇತ್ತು.
ಬಿಎಂಡಬ್ಲ್ಯೂ ಬೈಕ್ ಕೊಟ್ಟ ಭಾವಿ ಪತಿ
ಅಮೃತಾ ತಮ್ಮ ಯಾತ್ರೆಯನ್ನು ಆರಂಭ ಮಾಡಿದ್ದು ಕೆಟಿಎಂ ಬೈಕ್ ಮೂಲಕ. ಆದರೆ, ಅದು ಅಪಘಾತಕ್ಕೊಳಗಾಗಿತ್ತು. ಆಗ ಅಮೃತಾ ಅವರಿಗೆ ಹೊಸ ಬಿಎಂಡಬ್ಲ್ಯೂ ಬೈಕ್ ನೀಡುವ ಮೂಲಕ ಪ್ರೋತ್ಸಾಹ ನೀಡಿದ್ದು ಅವರ ಭಾವಿ ಪತಿ. ಎಲ್ಲಿ ಯಾತ್ರೆ ಮೊಟಕುಗೊಂಡಿತ್ತೋ ಅಲ್ಲಿಗೆ ಬೈಕ್ ಕಳುಹಿಸಿ ಅಲ್ಲಿಂದ ಮತ್ತೆ ಯಾತ್ರೆಯನ್ನು ಆರಂಭ ಮಾಡಲಾಗಿತ್ತು. ಇದೀಗ ಸುದೀರ್ಘ 5 ತಿಂಗಳ ಬೈಕ್ ಯಾತ್ರೆ ಮುಗಿಸಿ ತವರಿಗೆ ಹಿಂತಿರುಗಿರುವ ಅಮೃತಾ ಅವರಿಗೆ ಅವರು ಕಲಿತ ಮಂಗಳೂರಿನ ಕೆನರಾ ಹೆಣ್ಣುಮಕ್ಕಳ ಶಾಲೆಯಲ್ಲಿ ಅದ್ದೂರಿ ಸ್ವಾಗತ ನೀಡಿ ಗೌರವಿಸಲಾಗಿದೆ.
ಈ ಯಾತ್ರೆ ಸೈನಿಕರಿಗೆ ಅರ್ಪಣೆ
ಪಾಕಿಸ್ತಾನ , ಚೈನಾ, ಬಾಂಗ್ಲಾದೇಶ ಗಡಿ ಪ್ರದೇಶಗಳಲ್ಲಿ ಹಾದು ಹೋಗುವಾಗ ಅಮೃತಾ ಅವರು ಹಲವು ಸೈನಿಕರನ್ನು ಭೇಟಿಯಾಗಿದ್ದಾರೆ. ಈ ವೇಳೆ ಏಕಾಂಗಿಯಾಗಿ ಬೈಕ್ ಮೂಲಕ ದೇಶ ಸುತ್ತುವ ಈಕೆಯ ಧೈರ್ಯವನ್ನು ಅವರು ಕೊಂಡಾಡಿ ಬೆನ್ನು ತಟ್ಟಿದ್ದಾರೆ. ತನ್ನ ಬೈಕನಲ್ಲಿ ಐ ರೈಡ್ ಫಾರ್ ಇಂಡಿಯನ್ ಆರ್ಮಿ ಅಂತ ಬರೆದುಕೊಂಡಿದ್ದ ಅಮೃತಾ ಸೈನಿಕರ ಮನ ಗೆದ್ದಿದ್ದಾರೆ. ಅವರ ಜೊತೆ ಮಾತನಾಡಿ ಅವರ ಕಷ್ಟ ಸುಖವನ್ನೂ ವಿಚಾರಿಸಿದ್ದಾರೆ . ಹೀಗಾಗಿ ನನ್ನ ಈ ಯಾತ್ರೆ ಅದು ಸಂಪೂರ್ಣ ದೇಶದ ಸೈನಿಕರಿಗೆ ಅರ್ಪಿಸಿರುವುದಾಗಿ ಅಮೃತಾ ಹೇಳಿಕೊಂಡಿದ್ದಾರೆ.
ಅಪ್ಪನ ಕನಸು ನನಸು ಮಾಡಿದ ಖುಷಿ
ನಾನು ಬೈಕ್ ಯಾತ್ರೆ ಮಾಡಬೇಕು ಅನ್ನೋದು ನನ್ನ ತಂದೆಯ ಕನಸಾಗಿತ್ತು. ಆದ್ರೆ ಬೈಕ್ ಯಾತ್ರೆ ಮಾಡುವ ವೇಳೆ ಅವರು ನಮ್ಮ ಜೊತೆ ಇಲ್ಲವಾದ್ರೂ ಅವರ ಆಸೆಯನ್ನು ಈಡೇರಿಸಿದ ಖುಷಿ ನನ್ನಲ್ಲಿ ಇದೆ. ನನ್ನ ತಂದೆಯ ಆಸೆಯನ್ನು ಈಡೇರಿಸೋದಿಕ್ಕೆ ನನಗೆ ಸಂಪೂರ್ಣ ಸಹಕಾರ ನೀಡಿದವರು ನನ್ನ ತಾಯಿ ಹಾಗೂ ಕುಟುಂಬದವರು. ಆರ್ಥಿಕವಾಗಿ ಹಲವರು ಅಲ್ಪ ಸ್ವಲ್ಪ ಸಹಾಯ ಮಾಡಿದ್ದಾರೆ. ಆದರೆ, ಬಹುತೇಕ ಖರ್ಚು ಭರಿಸಿದ್ದು ನನ್ನ ಅಮ್ಮ. ಜನರು ಏನಾದ್ರೂ ಮಾತನಾಡ್ತಾರೆ ಅಂತ ತಲೆಕೆಡಿಸಿಕೊಳ್ಳದೆ ಏನು ಸಾಧಿಸಬೇಕು ಅನ್ನೋ ಗುರಿಯೊಂದಿಗೆ ಹೊರಡು ಅಂತ ಅಮ್ಮ ಹೇಳಿದ ಮಾತು ನನಗೆ ಇಡೀ ದೇಶ ಸುತ್ತಲು ಸ್ಪೂರ್ತಿ ನೀಡಿದೆ ಎನ್ನುತ್ತಾರೆ ಅಮೃತಾ. ಅಂದ ಹಾಗೆ ಅವರಿಗೆ ಇನ್ನೊಮ್ಮೆ ಏಕಾಂಗಿಯಾಗಿ ಬೈಕ್‌ನಲ್ಲಿ ಜಗತ್ತು ಸುತ್ತೋ ಆಸೆಯೂ ಇದ್ಯಂತೆ.
ಇದನ್ನೂ ಓದಿ| Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!