ಮೈಸೂರು: ಮೈಸೂರು-ಊಟಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ʻಗುಂಬಜ್ ಮಾದರಿʼಯದ್ದೆಂದು ಹೇಳಲಾಗುತ್ತಿರುವ ಬಸ್ ನಿಲ್ದಾಣ ವಿವಾದ (Shelter gumbaz) ಈಗ ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಕೃಷ್ಣರಾಜ ಶಾಸಕ ರಾಮದಾಸ್ ನಡುವಿನ ನೇರ ಕದನಕ್ಕೆ ವೇದಿಕೆಯಾಗಿದೆ.
ಕೆಲವು ದಿನಗಳ ಹಿಂದೆ ಈ ಮಾದರಿಯ ಬಸ್ ನಿಲ್ದಾಣಗಳ ವಿರುದ್ಧ ನೇರ ದಾಳಿಗಿಳಿದ ಪ್ರತಾಪ್‌ಸಿಂಹ ಅವರು, ನಾಲ್ಕು ದಿನದ ಒಳಗೆ ಈ ಶೆಲ್ಟರ್‌ಗಳ ಗುಂಬಜ್ ಆಕೃತಿಗಳನ್ನು (shelter gumbaz) ತೆರವುಗೊಳಿಸಬೇಕು. ಇಲ್ಲವಾದರೆ ತಾವೇ ಮುಂದಾಗಿ ಒಡೆದು ಹಾಕುವುದಾಗಿ ಹೇಳಿದ್ದರು. ಅ ಗಡುವಿನಲ್ಲಿ ಮೂರು ದಿನಗಳು ಕಳೆದಿದ್ದು, ಗುರುವಾರ ಕಡೇ ದಿನವಾಗಿದೆ.
ಈ ನಡುವೆ, ಕಣ ಪ್ರವೇಶ ಮಾಡಿರುವ ಶಾಸಕ ರಾಮದಾಸ್ ಅವರು ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ. ಈ ಬಸ್ ಶೆಲ್ಟರ್‌ಗಳು ಇರುವ ಪ್ರದೇಶ ರಾಮದಾಸ್ ಅವರ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ.
ರಾಮದಾಸ್ ಹೇಳಿದ್ದೇನು?
ಮೈಸೂರಿನ ಬಸ್ ನಿಲ್ದಾಣಗಳು ಮುಸ್ಲಿಂ ಶೈಲಿಯಲ್ಲಿ ಗುಂಬಜ್ ಮಾದರಿ ನಿರ್ಮಾಣ ಮಾಡಲಾಗಿದೆ ಎಂಬ ಪ್ರತಾಪ್ ಸಿಂಹ ಆರೋಪಕ್ಕೆ ರಾಮದಾಸ್ ತಿರುಗೇಟು ನೀಡಿದ್ದಾರೆ. ʻʻಮೈಸೂರಿನ ಶೆಲ್ಟರ್‌ಗಳ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇವುಗಳನ್ನು ಯಾವುದೇ ಯಾವುದೇ ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಿಲ್ಲ. .
ಮೈಸೂರಿನ ಪಾರಂಪರಿಕ ಮಹತ್ವ ಸಾರಲು ಮೈಸೂರು ಅರಮನೆಯ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆʼʼ ಎಂದು ಅವರು ಹೇಳಿದ್ದಾರೆ.
ʻʻಸಂಸದರು ಒಡೆದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ ಬಳಿಕ ಕಲಶ ನಿರ್ಮಾಣ ಮಾಡಲಾಗಿದೆ ಎನ್ನುವ ಸುಳ್ಳನ್ನು ಹಬ್ಬಿಸಲಾಗಿದೆ. ಪ್ರತಾಪ್ ಸಿಂಹ ಅವರು ಹೇಳಿರುವಂತೆ ರಾತ್ರೋರಾತ್ರಿ ಕಳಸ ನಿರ್ಮಾಣ ಮಾಡಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸಲಾಗಿದೆʼʼ ಎಂದು ರಾಮದಾಸ್ ಸ್ಪಷ್ಟಪಡಿಸಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಹರಡಿದ್ದಕ್ಕೆ ಸಂಬಂಧಿಸಿ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಲಾಗಿದೆ ಎಂದೂ ರಾಮದಾಸ್ ತಿಳಿಸಿದ್ದಾರೆ.
ಗುತ್ತಿಗೆದಾರ ಮುಸ್ಲಿಂ ಅಲ್ಲ!
ಈ ನಡುವೆ, ಈ ಶೆಲ್ಟರನ್ನು ಒಬ್ಬ ಮುಸ್ಲಿಂ ಗುತ್ತಿಗೆದಾರ ನಿರ್ಮಿಸಿದ್ದಾರೆ ಎಂಬ ಆಪಾದನೆಯೂ ಕೇಳಿಬಂದಿತ್ತು. ಆದರೆ, ಈ ಬಗ್ಗೆಯೂ ಸ್ಪಷ್ಟೀಕರಣ ನೀಡಿರುವ ರಾಮದಾಸ್ ಅವರು, ಇದನ್ನು ಮಹದೇವ್ ಎಂಬ ಗುತ್ತಿಗೆದಾರನಿಗೆ ನೀಡಲಾಗಿದೆ ಎಂದಿದ್ದಾರೆ. ʻʻ10 ಲಕ್ಷ ರೂ. ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಬಸ್ ನಿಲ್ದಾಣಗಳ ವಿನ್ಯಾಸಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಲಿ. ಸಮಿತಿ ವರದಿಯಲ್ಲಿ ಇದು ತಪ್ಪು, ಈ ರೀತಿ ನಿರ್ಮಿಸಬಾರದು ಎಂದು ಹೇಳಿದರೆ, ಬದಲಾವಣೆ ಮಾಡಲು ನಮ್ಮ ಅಭ್ಯಂತರ ಇಲ್ಲʼʼ ಎಂದು ಶಾಸಕ ರಾಮದಾಸ್ ಪತ್ರದ ಮೂಲಕ ಪುನರ್ ಸ್ಪಷ್ಟನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಜತೆ ಮಾತುಕತೆ
ಇದೇ ವೇಳೆ ಶಾಸಕ ರಾಮದಾಸ್ ಅವರು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮೈಸೂರಿನ ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅದಾದ ಬಳಿಕವೇ ಅವರು ಮಾಧ್ಯಮಗಳಿಗೆ ವಿವರ ನೀಡಿದರು.
ಇದನ್ನೂ ಓದಿ | ಶೆಲ್ಟರ್‌ನಲ್ಲಿ ಗುಂಬಜ್!| ಇನ್ನು 2 ದಿನದಲ್ಲಿ ಬಸ್ ಶೆಲ್ಟರ್ ಮೇಲಿನ ಗುಂಬಜ್ ತೆಗೆಯದಿದ್ದರೆ ನಾನೇ ಒಡೀತೇನೆ ಎಂದ ಪ್ರತಾಪ್ ಸಿಂಹ