ವಿವೇಕ ಮಹಾಲೆ, ಶಿವಮೊಗ್ಗ
ಶಿವಮೊಗ್ಗ ನಗರ ಬೆಳೆದಂತೆ ರಚನೆಯಾದ ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಗ್ರಾಮಾಂತರ. ರಾಜಕೀಯವಾಗಿ ಇದು ಮೊದಲು ಹೊಳೆಹೊನ್ನೂರು ಮೀಸಲು ಕ್ಷೇತ್ರವಾಗಿತ್ತು. 2008ರಲ್ಲಿ ಕ್ಷೇತ್ರ ಪುನರ್ವಿಂಗಡನೆಯಾದ ಬಳಿಕ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾಯಿತು. ಆದ್ದರಿಂದ ಈ, ಕ್ಷೇತ್ರ ಇಲ್ಲಿಯವರೆಗೆ ಕೇವಲ ಮೂರು ಚುನಾವಣೆಗಳನ್ನು ಮಾತ್ರ ಕಂಡಿದೆ. ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದ ಶಾಸಕ ಬಿಜೆಪಿಯ ಕೆ.ಬಿ. ಅಶೋಕ್ ಕುಮಾರ್ ನಾಯ್ಕ್.
ಚುನಾವಣಾ ಇತಿಹಾಸ
ಕ್ಷೇತ್ರ ರಚನೆಯಾದ ನಂತರ ಮೊದಲ ಬಾರಿ ನಡೆದ 2008ರ ಚುನಾವಣೆಯಲ್ಲಿ ಬಿಜೆಪಿಯ ಕೆ.ಜಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ 24,265 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಕೆಜೆಪಿ ಸ್ಪರ್ಧೆಯಿಂದ ಮತ ವಿಭಜನೆಗೊಂಡಿದ್ದರಿಂದ ಬಿಜೆಪಿಯ ಕುಮಾರಸ್ವಾಮಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಪರಿಣಾಮ ಜೆಡಿಎಸ್ನ ಶಾರದಾ ಪೂರ್ಯಾ ನಾಯ್ಕ್ ಗೆಲುವಿನ ನಗೆ ಬೀರಿದರು. ಕೆಜೆಪಿ ಮತ್ತು ಬಿಜೆಪಿ ಪಡೆದ ಮತಗಳನ್ನು ಸೇರಿಸಿದರೆ ಜೆಡಿಎಸ್ ಮತಗಳಿಗಿಂತ ಎರಡೂವರೆ ಸಾವಿರದಷ್ಟು ಹೆಚ್ಚು. ಕೆಜೆಪಿಯ ಜಿ. ಬಸವಣ್ಯಪ್ಪ ಎರಡೇ ಸ್ಥಾನ ಪಡೆದರೆ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 2018ರಲ್ಲಿ ಬಿಜೆಪಿಯಿಂದ ಮೊದಲ ಬಾರಿ ಸ್ಪರ್ಧಿಸಿದ್ದ ಕೆ.ಬಿ. ಅಶೋಕಕುಮಾರ್ ನಾಯ್ಕ್ 3777 ಮತಗಳ ಅಂತರದಿಂದ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಅವರನ್ನು ಸೋಲಿಸಿದರೆ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಬಿಜೆಪಿಯ ಗಟ್ಟಿ ನೆಲ
ಕಳೆದ ಮೂರು ಚುನಾವಣೆಗಳನ್ನು ಅವಲೋಕಿಸಿದರೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಬಿಜೆಪಿಗೆ ಕಟ್ಟಿಟ್ಟ ಬುತ್ತಿ. ಮೊದಲ ಮತ್ತು ಮೂರನೇ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಎರಡನೇ ಚುನಾವಣೆಯಲ್ಲಿ ಸೋತು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರೂ, ಅಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಸ್ಪರ್ಧೆಯಿಂದ ಸೋತಿರುವುದು ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಅಂದರೆ ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನೂ ಇದು ಎತ್ತಿ ತೋರಿಸುತ್ತದೆ. ಪರಿಣಾಮ ಕಳೆದ 2018ರಲ್ಲಿ ಕ್ಷೇತ್ರದ ಹಾಲಿ ಶಾಸಕಿಯ ವಿರುದ್ಧ ಅವರದ್ದೇ ಬಂಜಾರ ಸಮುದಾಯದ ಹೊಸ ಮುಖ, ಪದವೀಧರ ಕೆ.ಬಿ. ಅಶೋಕಕುಮಾರ್ ನಾಯ್ಕ್ ಅವರನ್ನು ಬಿಜೆಪಿ ಕಣಕ್ಕಿಳಿಸಿದಾಗ ಅವರನ್ನು ಕ್ಷೇತ್ರದ ಮತದಾರರು ಗೆಲ್ಲಿಸಿದ್ದಾರೆ.
ಕಾಂಗ್ರೆಸ್ ಕಣ್ಣು
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ನೆಲೆಯಿಲ್ಲ ಎಂಬುದು ಕಳೆದ ಮೂರು ಚುನಾವಣೆಗಳಿಂದ ಸಾಬೀತಾಗಿದೆ. 2008ರಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದರೆ, 2013 ಮತ್ತು 2018ರಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಾಂಗ್ರೆಸ್ಗಿಂತ ಜೆಡಿಎಸ್ ಇಲ್ಲಿ ಪ್ರಭಾವಶಾಲಿ. ಇದನ್ನು ಗಮನಿಸಿರುವ ಕಾಂಗ್ರೆಸ್ ಈ ಬಾರಿಯಾದರೂ ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಂತಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್. ರವಿಕುಮಾರ್ ಸಂಘಟಿಸಿದ್ದ ಬೋವಿ ಸಮಾಜದ ಸಮಾವೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಆಗಮಿಸಿ ಪಕ್ಷದ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಿ ಹೋಗಿದ್ದಾರೆ.
2023ರ ಆಕಾಂಕ್ಷಿಗಳು
ಬಿಜೆಪಿಯಿಂದ ಹಾಲಿ ಶಾಸಕ ಕೆ.ಬಿ. ಅಶೋಕಕುಮಾರ್ ನಾಯ್ಕ್ ಸ್ಪರ್ಧಿಸುವುದು ಬಹುತೇಕ ಖಾತ್ರಿಯಿದೆ. ಕಾಂಗ್ರೆಸ್ನಿಂದ ಉದ್ಯಮಿ ಎನ್. ರವಿಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಬೋವಿ ಸಮಾಜದ ಬೃಹತ್ ಸಮಾವೇಶ ನಡೆಸಿ ಎನ್. ರವಿಕುಮಾರ್ ಪಕ್ಷದ ಮುಖಂಡರ ಗಮನಸೆಳೆದಿದ್ದಾರೆ. ಇದಲ್ಲದೆ ವೈದ್ಯ ಶ್ರೀನಿವಾಸ್ ಕರಿಯಣ್ಣ ಸೇರಿದಂತೆ ಹಲವರು ಕಾಂಗ್ರೆಸ್ ಅಭ್ಯರ್ಥಿಯಾಗುವ ಉತ್ಸುಕತೆಯಲ್ಲಿದ್ದಾರೆ. ಜೆಡಿಎಸ್‌ನಿಂದ, ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯಕ್ ಅವರೇ ಸ್ಪರ್ಧೆ ಮಾಡಲಿದ್ದಾರೆ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಕೆ. ಬಿ. ಅಶೋಕಕುಮಾರ್ (ಬಿಜೆಪಿ)
2. ಎನ್.ರವಿಕುಮಾರ್, ಶ್ರೀನಿವಾಸ ಕರಿಯಣ್ಣ (ಕಾಂಗ್ರೆಸ್)
3. ಶಾರದಾ ಪೂರ್ಯಾ ನಾಯ್ಕ (ಜೆಡಿಎಸ್)
ಇದನ್ನೂ ಓದಿ | ಎಲೆಕ್ಷನ್ ಹವಾ | ಸೊರಬ | ಅಭಿವೃದ್ಧಿಯಲ್ಲಿ ಸೊರಗಿರುವ ಕ್ಷೇತ್ರ ಮತ್ತೊಮ್ಮೆ ಸಹೋದರರ ಸವಾಲ್‌ಗೆ ಅಣಿ