ಬೆಂಗಳೂರು: ಹಿಂದೂ ಪಂಚಾಂಗದಲ್ಲಿ ಬರುವ 12 ಮಾಸಗಳಲ್ಲಿ ಶ್ರಾವಣ ಮಾಸ (Shravan 2024) ಐದನೇ ಮಾಸವಾಗಿದೆ. ಎಲ್ಲಾ ಮಾಸಗಳು ಹುಣ್ಣಿಮೆಯ ದಿನ ಪ್ರಾರಂಭವಾಗುತ್ತದೆ ಮತ್ತು ಆ ದಿನ ಬರುವ ನಕ್ಷತ್ರದ ಹೆಸರಿನಿಂದ ಆ ಮಾಸವನ್ನು ಕರೆಯಲಾಗುತ್ತದೆ. ಅದರಂತೆ ಈ ಮಾಸ ಪ್ರಾರಂಭವಾಗುವ ಹುಣ್ಣಿಮೆಯ ದಿನ ಶ್ರವಣ ನಕ್ಷತ್ರ ಬಂದ ಕಾರಣ ಈ ಮಾಸಕ್ಕೆ ಶ್ರಾವಣ ಮಾಸ ಎಂದು ಕರೆಯುತ್ತಾರೆ. ಈ ಮಾಸ ಹಿಂದೂಗಳಿಗೆ ಬಹಳ ಶ್ರೇಷ್ಠವಾದ ಹಾಗೂ ವಿಶೇಷವಾದ ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುತ್ತದೆ. ಹಾಗಾಗಿ ಈ ಮಾಸದಲ್ಲಿ ಶಿವ, ಪಾರ್ವತಿ, ಲಕ್ಷ್ಮಿ, ವಿಷ್ಣು ಸೇರಿದಂತೆ ಅನೇಕ ದೇವಾನುದೇವತೆಗಳ ಪೂಜೆ ಮಾಡುತ್ತಾರೆ. ಹಾಗೇ ಮದುವೆ, ಮುಂಜಿಯಂತಹ ಶುಭ ಕಾರ್ಯಗಳನ್ನು ಈ ಮಾಸದಲ್ಲಿ ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್ನಲ್ಲಿ 2024ರಲ್ಲಿ ಶ್ರಾವಣ ಮಾಸ ಆಗಸ್ಟ್ 5ರ ಸೋಮವಾರದಂದು ಪ್ರಾರಂಭವಾಗಿ ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಕೊನೆಗೊಳ್ಳುತ್ತದೆ. ಹಾಗಾಗಿ ಈ ಮಾಸದ ವಿಶೇಷತೆ ಏನು ಮತ್ತು ಶುಭ ಕಾರ್ಯಗಳನ್ನು ಮಾಡಲು ಈ ಮಾಸ ಸೂಕ್ತ ಏಕೆ ಎಂಬುದನ್ನು ತಿಳಿಯೋಣ.
ಶ್ರಾವಣ ಮಾಸದ ವಿಶೇಷತೆ:
ಶ್ರಾವಣ ಮಾಸ ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸವಾಗಿದೆ. ಈ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳನ್ನು ಈ ಮಾಸದಲ್ಲಿಯೇ ಹೆಚ್ಚು ಮಾಡುತ್ತಾರೆ. ಅಲ್ಲದೇ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಈ ಮಾಸ ಬಹಳ ಪ್ರಶಸ್ತವಾಗಿದೆ.
ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನಗಳು ಒಂದರ ನಂತರ ಒಂದು ಸಾಲು ಸಾಲಾಗಿ ಬರುತ್ತದೆ. ಶ್ರಾವಣ ಮಾಸದ ಪ್ರತಿದಿನವೂ ಹಬ್ಬವೇ ಇರುತ್ತದೆ. ಹಾಗಾಗಿ ಶ್ರಾವಣ ಮಾಸದ ಎಲ್ಲಾ ದಿನಗಳು ಬಹಳ ಶುಭವೇ ಆಗಿರುತ್ತದೆ. ಆದಕಾರಣ ಈ ಶುಭ ದಿನಗಳಲ್ಲಿ ಶುಭ ಕಾರ್ಯ ಮಾಡಿದರೆ ಅದಕ್ಕೆ ಬಹಳ ಉತ್ತಮವಾದ ಫಲ ಶೀಘ್ರದಲ್ಲಿಯೇ ಸಿಗುತ್ತದೆ ಎಂಬ ನಂಬಿಕೆ ಇದೆ.
ಅಲ್ಲದೇ ಈ ಮಾಸದಲ್ಲಿ ಪ್ರಕೃತಿಯಲ್ಲಿನ ಗಿಡಮರಗಳು ಚಿಗುರೊಡೆದು ಹಚ್ಚಹಸಿರಾಗಿ, ಹೂಗಳನ್ನು ಬಿಟ್ಟು ಬಣ್ಣಗಳಿಂದ ಕಂಗೊಳಿಸುತ್ತಾ ಸಂತಸದಿಂದ ಇರುತ್ತದೆಯಂತೆ. ಹಾಗೇ ಪ್ರಾಣಿ ಪಕ್ಷಿಗಳು ಕೂಡ ಉಲ್ಲಾಸದಿಂದ ಇರುತ್ತದೆಯಂತೆ. ಇದನ್ನು ಕಂಡು ದೈವಾನುದೇವತೆಗಳು ಕೂಡ ಸಂಭ್ರಮ ಪಡುತ್ತಾರಂತೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಿದರೂ ದೇವರು ಬಹಳ ಬೇಗನೇ ಪ್ರಸನ್ನರಾಗಿ ಅನುಗ್ರಹ ನೀಡುತ್ತಾರೆ ಎನ್ನಲಾಗುತ್ತದೆ.
ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು :
- ಉಪಕರ್ಮ:
- ಶ್ರಾವಣ ಮಾಸ ಹುಣ್ಣಿಮೆ ಜ್ಞಾನಕ್ಕೆ ಕಾರಣವಾಗಿದ್ದರಿಂದ ಈ ದಿನ ಜನೀವಾರ ಹಬ್ಬ ಅಥವಾ ಉಪಕರ್ಮ ಅಥವಾ ನೂಲು ಹುಣ್ಣಿಮೆಯನ್ನು ಆಚರಿಸುತ್ತಾರೆ.
- ರಕ್ಷಾಬಂಧನ :
- ಶ್ರಾವಣ ಹುಣ್ಣಿಮೆಯಂದು ಸಹೋದರ ಪ್ರೇಮಕ್ಕೆ ಹೆಚ್ಚು ಮಹತ್ವವಿರುವುದರಿಂದ ರಕ್ಷಾಬಂಧನವನ್ನು ಆಚರಿಸುವ ಮೂಲಕ ಸಹೋದರಿ ಸಹೋದರನಿಗೆ ರಾಖಿ ಕಟ್ಟುತ್ತಾರೆ.
- ಹಯಗ್ರೀವ ಜಯಂತಿ :
- ಮಕ್ಕಳಿಗೆ ವಿದ್ಯೆ ಬುದ್ಧಿ ಕರುಣಿಸಲಿ ಎಂದು ವಿದ್ಯೆಯನ್ನು ಅನುಗ್ರಹಿಸುವ ಹಯಗ್ರೀವನನ್ನು ಪೂಜಿಸಿ ಪ್ರಾರ್ಥಿಸುತ್ತಾರೆ.
- ಸಂಕಷ್ಟ ಚತುರ್ಥಿ :
- ಅಪಘಾತ, ಆರೋಗ್ಯ ಸಮಸ್ಯೆ, ಸಂಕಷ್ಟಗಳು ಜೀವನದಲ್ಲಿ ಬರಬಾರದೆಂದು ಸಂಕಷ್ಟಹರ ಚತುರ್ಥಿಯನ್ನು ಮಾಡುತ್ತಾರೆ.
- ಕೃಷ್ಣಾಷ್ಟಮಿ :
- ದುಷ್ಟ ಸಂಹಾರಕ್ಕಾಗಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಶ್ರೀಕೃಷ್ಣ ಜನ್ಮ ತಾಳಿದ ಕಾರಣ ಈ ಮಾಸದಲ್ಲಿ ಕೃಷ್ಣಾಷ್ಟಮಿಯನ್ನು ಆಚರಿಸುವ ಮೂಲಕ ಕೃಷ್ಣನನ್ನು ಪೂಜಿಸುತ್ತಾರೆ.
- ಶ್ರಾವಣ ಸೋಮವಾರ:
- ಶ್ರಾವಣ ಮಾಸದಲ್ಲಿ ಬರುವ ಪ್ರತಿ ಸೋಮವಾರದಂದು ಶಿವನ ಆರಾಧನೆ ಮಾಡಲಾಗುತ್ತದೆ. ಇದರಿಂದ ಶಿವನು ಬೇಗನೆ ಪ್ರಸನ್ನನಾಗಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ.
- ಕಾಮನ ಏಕಾದಶಿ:
- ನಿಮ್ಮ ಕೋರಿಕೆಗಳು ಈಡೇರಲು ಶ್ರಾವಣ ಮಾಸದಲ್ಲಿ ಕಾಮನ ಏಕಾದಶಿಯನ್ನು ಆಚರಿಸುವ ಮೂಲಕ ವಿಷ್ಣುವಿನ ಪೂಜೆ ಮಾಡಲಾಗುತ್ತದೆ.
- ಪುತ್ರ ಏಕಾದಶಿ :
- ಸಂತಾನ ಭಾಗ್ಯ ಬಯಸುವವರು ಶ್ರಾವಣ ಮಾಸದಲ್ಲಿ ಬರುವ ಪುತ್ರ ಏಕಾದಶಿಯನ್ನು ಆಚರಿಸುತ್ತಾರೆ.
- ಶ್ರಾವಣ ಮಂಗಳವಾರ :
- ಶ್ರಾವಣ ಮಾಸದಲ್ಲಿ ಬರುವ ಪ್ರತಿ ಮಂಗಳವಾರದಂದು ಮಂಗಳಗೌರಿ ವ್ರತವನ್ನು ಮಾಡಲಾಗುತ್ತದೆ. ಇದು ಮದುವೆಯಾದ ಹೆಣ್ಣುಮಕ್ಕಳು ಮಾಡಿದರೆ ಅವರ ವೈವಾಹಿಕ ಜೀವನ ಸುಖಕರವಾಗಿರುತ್ತದೆಯಂತೆ.
- ವರಮಹಾಲಕ್ಷ್ಮಿ ವ್ರತ:
- ಈ ದಿನ ಮಹಿಳೆಯರು ಲಕ್ಷ್ಮಿದೇವಿಯನ್ನು ಕಳಸದ ಮೇಲೆ ಪ್ರತಿಷ್ಠಾಪನೆ ಮಾಡಿ ಜರಿ ಸೀರೆ ಉಡಿಸಿ, ಧನ, ಚಿನ್ನದ ಆಭರಣಗಳಿಂದ ದೇವಿಯನ್ನು ಅಲಂಕರಿಸಿ ಪೂಜೆ ಮಾಡಿ ವರವನ್ನು ಬೇಡಿಕೊಳ್ಳುತ್ತಾರೆ.
- ಶ್ರಾವಣ ಶುಕ್ರವಾರ :
- ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶುಕ್ರವಾರದಂದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯನ್ನು ಪೂಜಿಸುವ ಮೂಲಕ ಸಂಪತ್ ಗೌರಿ ವ್ರತವನ್ನು ಆಚರಿಸುತ್ತಾರೆ.
- ನಾಗರಪಂಚಮಿ :
- ಶ್ರಾವಣ ಮಾಸದ ಪ್ರಾರಂಭವಾದ 5ನೇ ದಿನದಂದು ಬರುವ ನಾಗರ ಪಂಚಮಿ ಹಬ್ಬದಂದು ಮಹಿಳೆಯರು ನಾಗ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
- ದೂರ್ವಾ ಗಣಪತಿ ವ್ರತ :
- ಶ್ರಾವಣ ಮಾಸದಲ್ಲಿ ಬರುವ ಈ ವ್ರತದಂದು ಗಣಪತಿಗೆ ಪ್ರಿಯವಾದ ದೂರ್ವಾ ಅಥವಾ ಗರಿಕೆಯನ್ನು ಅರ್ಪಿಸಿ ಪೂಜಿಸಲಾಗುತ್ತದೆ.
- ಶ್ರಾವಣ ಶನಿವಾರ:
- ಶ್ರಾವಣ ಮಾಸದ ಪ್ರತಿ ಶನಿವಾರ ಶ್ರಾವಣ ಶನಿವಾರವೆಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿ ಮತ್ತು ವೆಂಕಟೇಶ್ವರನನ್ನು ಆರಾಧಿಸುತ್ತಾರೆ. ಹಾಗೇ ಕೆಲವರು ಶ್ರಾವಣ ಶನಿವಾರದಂದು ಉಪವಾಸ ವ್ರತವನ್ನು ಆಚರಿಸುತ್ತಾರೆ. ಹಾಗೇ ಈ ದಿನ ಆಂಜನೇಯ ಸ್ವಾಮಿಯ ಪೂಜೆ ಹಾಗೂ ಶನಿ ಶಾಂತಿ ಪೂಜೆಗೆ ಬಹಳ ಉತ್ತಮ ಎನ್ನಲಾಗಿದೆ.
ಇದನ್ನೂ ಓದಿ:ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!
ಒಟ್ಟಾರೆ ಈ ಎಲ್ಲಾ ಶುಭ ದಿನಗಳು ಮತ್ತು ಹಬ್ಬಗಳಿಂದ ಶ್ರಾವಣ ಮಾಸ ತುಂಬಾ ವಿಶೇಷವಾದ ಹಾಗೂ ಪವಿತ್ರವಾದ ಮಾಸವಾಗಿದೆ. ಹಾಗಾಗಿ ಇಂತಹ ಶುಭಕರವಾದ ಶ್ರಾವಣ ಮಾಸವನ್ನು ಎಲ್ಲರೂ ಸಂತೋಷದಿಂದ ಸ್ವಾಗತಿಸಿ. ಹಾಗೇ ಈ ಮಾಸದಲ್ಲಿ ಎಲ್ಲರೂ ಶ್ರದ್ಧೆ, ಭಕ್ತಿಯಿಂದ ದೇವರ ಆರಾಧನೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಿ.
ಇದನ್ನೂ ಓದಿ: Shravan 2024: ಶ್ರಾವಣ ಮಾಸದಲ್ಲಿ ಯಾವ ಹಬ್ಬ, ಯಾವ ದಿನ?