ಬೆಂಗಳೂರು: ನಗರದ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗುತ್ತಲೇ ಬರ್ಬರವಾಗಿ ಹತ್ಯೆಗೀಡಾದ ರೌಡಿಶೀಟರ್ ಸಿದ್ದಾಪುರ ಮಹೇಶನು (Siddapura Mahesha) ಪತ್ನಿ ಮೇಲಿನ ಪ್ರೀತಿಗಾಗಿ ರೌಡಿಸಂ ಬಿಡಲು ತೀರ್ಮಾನಿಸಿದ್ದ ಎಂದು ತಿಳಿದುಬಂದಿದೆ. ಆದರೆ, ಪತ್ನಿಯ ಮಾತು ಕೇಳಿ ರೌಡಿಸಂ ಬಿಡಲು ತೀರ್ಮಾನಿಸಿದ್ದೇ ಆತನ ಪ್ರಾಣಕ್ಕೆ ಕುತ್ತಾಯಿತು ಎಂದು ತಿಳಿದುಬಂದಿದೆ.
ಹೌದು, 13 ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯನ್ನೇ ಎರಡು ತಿಂಗಳ ಹಿಂದೆ ಮಹೇಶ ಮದುವೆಯಾಗಿದ್ದ. ಮದುವೆಯಾದ ಬಳಿಕ ಹೆಂಡತಿಯು ರೌಡಿಸಂ ಬಿಟ್ಟು, ಸಾಮಾನ್ಯ ಜೀವನ ಸಾಗಿಸೋಣ ಎಂದಿದ್ದಳು. ಹೆಂಡತಿ ಮೇಲಿನ ಪ್ರೀತಿಗಾಗಿ ಮಹೇಶನೂ ರೌಡಿಸಂ ಬಿಡಲು ಒಪ್ಪಿದ್ದ. ಇದರಿಂದಾಗಿ ಜೈಲಿನ ಬಳಿ ಯಾರೂ ಬರದಂತೆ ಮಹೇಶನ ಪತ್ನಿಯು ಆತನ ಆಪ್ತರಿಗೆ ತಿಳಿಸಿದ್ದರು. ಇಲ್ಲದಿದ್ದರೆ ಮಹೇಶ ಬಿಡುಗಡೆಯಾಗುತ್ತಲೇ ನೂರಾರು ಜನ ಜೈಲಿನ ಬಳಿ ಇರುತ್ತಿದ್ದರು. ಮಹೇಶನ ಪತ್ನಿಯು ಯಾರೂ ಬರಬೇಡಿ ಎಂಬುದಾಗಿ ಸೂಚಿಸಿದ ಕಾರಣ ಜೈಲಿನ ಬಳಿ ಯಾರೂ ಇರಲಿಲ್ಲ. ಇದರಿಂದಾಗಿ ಮಹೇಶನ ವಿರೋಧಿಗಳಾದ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್ ರೌಡಿಗಳು ಜೈಲಿನಿಂದ ಹೊರಗೆ ಬರುತ್ತಲೇ ಮಹೇಶನನ್ನು ಹತ್ಯೆಗೈದಿದ್ದಾರೆ.
ಜೈಲಿನಲ್ಲೇ ಇಟ್ಟಿದ್ದರು ಮುಹೂರ್ತ
ಜೈಲಿನಿಂದ ಹೊರಗೆ ಇದ್ದರೆ ಹತ್ಯೆ ಮಾಡುತ್ತಾರೆ ಎಂಬ ಕಾರಣದಿಂದಾಗಿ ಮಹೇಶನು ಮದುವೆಯಾದ ಕೆಲವೇ ದಿನಗಳ ಬಳಿಕ ಪೊಲೀಸರಿಗೆ ಶರಣಾಗಿ ಜೈಲು ಸೇರಿದ್ದ. ಇದಾದ ಒಂದೇ ವಾರಕ್ಕೆ ಜೈಲಿನಲ್ಲೇ ಮಹೇಶನನ್ನು ಹತ್ಯೆ ಮಾಡಲು ನಾಗನ ಗ್ಯಾಂಗ್ ಸ್ಕೆಚ್ ಹಾಕಿತ್ತು. ಮಹೇಶನ ಪಕ್ಕದ ಸೆಲ್‌ಗೆ ಇಬ್ಬರು ಹೊಸದಾಗಿ ಸೇರಿದ್ದರಿಂದ ಅನುಮಾನಗೊಂಡಿದ್ದ ಮಹೇಶ, ಜೈಲಧಿಕಾರಿಗೆ ಮನವಿ ಮಾಡಿ ಬೇರೆ ಸೆಲ್‌ಗೆ ಹಾಕಿಸಿಕೊಂಡಿದ್ದ. ಆ ಸೆಲ್‌ಗೂ ಇಬ್ಬರು ಕೈದಿಗಳು ಬಂದಿದ್ದರು. ಜೈಲಿನಲ್ಲಿಯೇ ಆತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
8 ತಂಡಗಳು ಕಾದು ಕುಳಿತಿದ್ದವು
ಮಹೇಶನು ಜೈಲಿನಿಂದ ಹೊರಗೆ ಬರುತ್ತಾನೆ ಎಂಬ ಮಾಹಿತಿ ತಿಳಿಯುತ್ತಲೇ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್ ಅಲರ್ಟ್ ಆಗಿತ್ತು. ಇದು ಕೂಡ ಮಹೇಶನಿಗೆ ಗೊತ್ತಾದ ಕಾರಣ ಸಂಜೆ 7 ಗಂಟೆಗೆ ಜೈಲಿನಿಂದ ಹೊರಬರದೆ ರಾತ್ರಿ 9 ಗಂಟೆಗೆ ಹೊರಬಂದಿದ್ದ. ಆದರೆ, ಶತಾಯ ಗತಾಯ ಮಹೇಶನನ್ನು ಕೊಲ್ಲಬೇಕು ಎಂದು ತೀರ್ಮಾನಿಸಿದ್ದ ನಾಗನ ಗ್ಯಾಂಗ್ ಎಲ್ಲ ಮಾಹಿತಿ ಸಂಗ್ರಹಿಸಿತ್ತು. ಪರಪ್ಪನ ಅಗ್ರಹಾರದಿಂದ ಜಂಕ್ಷನ್‌ವೆರಗೆ ಎಂಟು ತಂಡಗಳು ಕಾದು ಕುಳಿತಿದ್ದವು. ಅದರಂತೆ, ಜೈಲ್ ಜಂಕ್ಷನ್ ಬಳಿ ಬರುತ್ತಲೇ ಮಹೇಶನನ್ನು ಕೊಚ್ಚಿಹಾಕಿದ್ದರು.