Site icon Vistara News

Karnataka CM: ಪದಗ್ರಹಣದ ಬೆನ್ನಿಗೇ ಮತ್ತೆ ದಿಲ್ಲಿಗೆ ಹೋಗ್ತಾರಾ ಸಿದ್ದರಾಮಯ್ಯ, ಡಿಕೆಶಿ?

cm Siddaramaiah And DK Shivakumar

cm Siddaramaiah And DK Shivakumar

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಪದಗ್ರಹಣ ಸಮಾರಂಭ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava stadium) ಶನಿವಾರ ಮಧ್ಯಾಹ್ನ 12.30ಕ್ಕೆ ನಡೆಯಲಿದ್ದು, ಅದಾದ ಬಳಿಕ ಸಂಜೆಯ ಹೊತ್ತಿಗೆ ಈ ಇಬ್ಬರೂ ನಾಯಕರು ದಿಲ್ಲಿಗೆ ಪ್ರಯಾಣ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಕನಿಷ್ಠ 25 ಜನ ಸಚಿವರನ್ನು ಸೇರಿಸಿಕೊಂಡು ಪ್ರಮಾಣವಚನ ಸ್ವೀಕರಿಸಬೇಕು ಎನ್ನುವುದು ಸಿದ್ದರಾಮಯ್ಯ ಅವರ ಅಪೇಕ್ಷೆಯಾಗಿತ್ತು. ಆದರೆ, ಸಿದ್ದು ಮತ್ತು ಡಿಕೆಶಿ ನಡುವೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ಉಂಟಾದ ಸಂಘರ್ಷದಿಂದ ಅಂತಿಮವಾಗಿ ಕೇವಲ 10 ಮಂದಿ ಮಾತ್ರ ಮೊದಲ ಹಂತದಲ್ಲಿ ಸಂಪುಟ ಸೇರಲಿದ್ದಾರೆ.

ಎಂ.ಬಿ ಪಾಟೀಲ್ (ಲಿಂಗಾಯತ)
ಡಾ. ಜಿ ಪರಮೇಶ್ವರ್ (ದಲಿತ ಬಲ)
ಪ್ರಿಯಾಂಕಾ ಖರ್ಗೆ (ದಲಿತ ಬಲ)
ಕೆ.ಎಚ್ ಮುನಿಯಪ್ಪ (ದಲಿತ ಎಡ)
ಕೆ.ಜೆ ಜಾರ್ಜ್ (ಕ್ರಿಶ್ಚಿಯನ್)
ಸತೀಶ್ ಜಾರಕಿಹೊಳಿ (ಎಸ್‌ಟಿ- ವಾಲ್ಮೀಕಿ)
ಜಮೀರ್ ಅಹಮದ್ ಖಾನ್ (ಮುಸ್ಲಿಂ)
ರಾಮಲಿಂಗಾ ರೆಡ್ಡಿ (ರೆಡ್ಡಿ ಸಮುದಾಯ)

ಇವರು ಪ್ರಸಕ್ತ ಸಂಪುಟ ಸೇರಲಿರುವ ಶಾಸಕರು. ಆದರೆ, ಇವರಿಗೆ ಸಚಿವ ಖಾತೆ ಕೊಡುವ ವಿಚಾರದಲ್ಲೂ ಇನ್ನೂ ಗೊಂದಲವಿದೆ. ಹೀಗಾಗಿ ಇನ್ನೊಂದು ಸುತ್ತಿನ ಚರ್ಚೆ ಮತ್ತು ಸಚಿವರ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಇಬ್ಬರೂ ದಿಲ್ಲಿಗೆ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.

ಮುಗಿಯದ ಪಟ್ಟಿ ಜಟಾಪಟಿ

ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ನಿವಾಸದಲ್ಲಿ ರಾತ್ರಿ ಎರಡು ಗಂಟೆಯವರೆಗೂ ಪಟ್ಟಿ ಜಟಾಪಟಿ ಮುಂದುವರಿದಿತ್ತು. ಇಬ್ಬರೂ ತಮ್ಮ ಪಟ್ಟು ಬಿಡದ ಹಿನ್ನೆಲೆಯಲ್ಲಿ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಬೇಕಾಯಿತು. ಇಷ್ಟಾದರೂ ಪರಿಸ್ಥಿತಿ ಬದಲಾಗದೆ ಇದ್ದಾಗ ಅಂತಿಮವಾಗಿ ಮೊದಲ ಹಂತದಲ್ಲಿ ಕೇವಲ ಎಂಟು ಮಂದಿ ಸಚಿವರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಯಿತು.

ಬೆಳಗ್ಗೆ ಆಗಮಿಸಿದ ನಾಯಕರು

ಇದಾದ ಬಳಿಕವೇ ಸಿದ್ದರಾಮಯ್ಯ ಅವರು ದಿಲ್ಲಿಯಿಂದ ಹೊರಟು ಬೆಳಗ್ಗೆ 6.00 ಗಂಟೆಗೆ ಬೆಂಗಳೂರು ತಲುಪಿದ್ದಾರೆ. 6.30ರ ಹೊತ್ತಿಗೆ ಮನೆ ತಲುಪಿರುವ ಅವರು ಬಳಿಕ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಳಗ್ಗೆ 11 ಗಂಟೆಯ ಬಳಿಕವಷ್ಟೇ ಅವರು ಮನೆಯಿಂದ ಹೊರಬರುವ ಸಾಧ್ಯತೆ ಇದೆ. ಈ ನಡುವೆ, ಬೆಳಗ್ಗೆ 9 ಗಂಟೆಯ ಹೊತ್ತಿಗೆ ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್‌ ಅವರು ಕೂಡಾ ವಿಶ್ರಾಂತಿ ಪಡೆಯುತ್ತಿದ್ದಾರೆ.

ಗ್ಯಾರಂಟಿ ಭಾಗ್ಯಗಳ ಘೋಷಣೆಯಾಗಬೇಕು

ಈ ನಡುವೆ, ಪದಗ್ರಹಣ ಸಮಾರಂಭದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮೂರನೇ ಮಹಡಿಗೆ ತೆರಳಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ನಂತರ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಲಿದ್ದು, ಅದರಲ್ಲಿ ಕಾಂಗ್ರೆಸ್‌ ಘೋಷಿಸಿದ ಐದು ಗ್ಯಾರಂಟಿ ಭಾಗ್ಯಗಳನ್ನು ಸಿದ್ದರಾಮಯ್ಯ ಪ್ರಕಟಿಸುವ ನಿರೀಕ್ಷೆ ಇದೆ.

ಇದೆಲ್ಲ ಆದ ನಂತರವಷ್ಟೇ ಅವರು ದಿಲ್ಲಿಗೆ ತೆರಳುವ ಸಾಧ್ಯತೆ. ಶನಿವಾರದ ಚಟುವಟಿಕೆಗಳು ವಿಳಂಬವಾದರೆ ಭಾನುವಾರ ದಿಲ್ಲಿಗೆ ತೆರಳಬಹುದು. ಅಂತೂ ಸಂಪುಟವನ್ನು ತ್ವರಿತ ಗತಿಯಲ್ಲಿ ವಿಸ್ತರಿಸಬೇಕು ಎಂದು ಹೈಕಮಾಂಡ್‌ ಸೂಚನೆ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಪದಗ್ರಹಣಕ್ಕೆ ಶ್ರೀರಾಮ ಪಟ್ಟಾಭಿಷೇಕದ ಟಚ್;‌ ಕಂಠೀರವದಲ್ಲಿ ರಾಮನ ಮೂರ್ತಿ

Exit mobile version