ಮೈಸೂರು: ರಾಜ್ಯ ವಿಧಾನಸಭಾ ಚುನಾವಣಾ (Karnataka Election 2023) ಕಣ ರಂಗೇರುತ್ತಿದೆ. ಎಲ್ಲೆಡೆ ಅಬ್ಬರದ ಪ್ರಚಾರ ಆರಂಭಗೊಂಡಿದೆ. ಇನ್ನೊಂದೆಡೆ ಕುಟುಂಬ ರಾಜಕಾರಣದ ಕೂಗುಗಳೂ ಕೇಳಿ ಬರುತ್ತಿವೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಕುಟುಂಬದವರಿಗೆ ಮಣೆ ಹಾಕಲಾಗಿದೆ. ಈ ನಡುವೆ ಕೆಲವು ಘಟಾನುಘಟಿ ನಾಯಕರು ತಮ್ಮ ವಂಶದ ಕುಡಿಗಳನ್ನು ಮುಂದಿನ ಚುನಾವಣೆ ಲೆಕ್ಕದಲ್ಲಿ ತಯಾರು ಮಾಡುತ್ತಿದ್ದಾರೆ. ಇದೀಗ ವರುಣ ರಾಜಕಾರಣಕ್ಕೆ ಮರಿ ಟಗರು ಎಂಟ್ರಿ ಕೊಟ್ಟಿದೆ. ಅಂದರೆ, ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ಮಗ ಧವನ್ ರಾಕೇಶ್ ತಮ್ಮ ತಾತನ ಪರ ಪ್ರಚಾರಕ್ಕೆ ಮುಂದಾಗುತ್ತಿದ್ದಾರೆ.
ತಾತ ಸಿದ್ದರಾಮಯ್ಯ ಪರ ಅಖಾಡಕ್ಕೆ ಇಳಿಯುವ ಸಂಬಂಧ ಧವನ್ ರಾಕೇಶ್ ನಿರ್ಧಾರ ಮಾಡಿದ್ದಾರೆ. ಇದೇ ವೇಳೆ ಅವರು ಮೈಸೂರಿನ ಏರ್‌ಪೋರ್ಟ್‌ನಲ್ಲಿ ತಾತ ಸಿದ್ದರಾಮಯ್ಯ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಮೊಮ್ಮಗನ ರಾಜಕೀಯ ಆಸಕ್ತಿ ಸಿದ್ದರಾಮಯ್ಯ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಅಪ್ಪನ ರಕ್ತ ಅಲ್ವಾ ಅಂದ ಸಿದ್ದರಾಮಯ್ಯ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಮೊಮ್ಮಗ ರಾಜಕೀಯ ಆಸಕ್ತಿ ತೋರಿಸುವುದು ಸಹಜವಾಗಿಯೇ ಖುಷಿ ಆಗುತ್ತದೆ. ಇಡೀ ಚಾಮುಂಡೇಶ್ವರಿ, ವರುಣ ಕ್ಷೇತ್ರವನ್ನು ಅವರಪ್ಪ ರಾಕೇಶ್ ನಿರ್ವಹಿಸುತ್ತಿದ್ದ. ರಾಕೇಶ್ ಇಡೀ ಜಿಲ್ಲೆಯನ್ನು ನೋಡಿಕೊಳ್ಳುತ್ತಿದ್ದ. ಅಪ್ಪನ ರಕ್ತ ಅಲ್ವಾ? ಮೊಮ್ಮಗನಿಗೂ ರಾಜಕೀಯದ ಆಸಕ್ತಿ ಬಂದಿದೆ. ಅವನಾಗಿಯೇ ಇಷ್ಟಪಟ್ಟು ನನ್ನೊಂದಿಗೆ ಮೈಸೂರಿಗೆ ಬಂದಿದ್ದಾನೆ ಎಂದು ಹೇಳಿದರು.
ವರುಣಕ್ಕೆ ಪ್ರಚಾರಕ್ಕೆ ಹೋಗು ಅಂತ ನಾನು ಅವನಿಗೆ ಹೇಳುವುದಿಲ್ಲ. ನಮ್ಮ ಮನೆಯ ಯಾರನ್ನೂ ನಾನು ಪ್ರಚಾರಕ್ಕೆ ಕರೆಯಲ್ಲ. ಅವರಾಗಿಯೇ ಬಂದು ಮಾಡಿದರೆ ಮಾಡಲಿ ಎಂದು ಸಿದ್ದರಾಮಯ್ಯ ಹೇಳುವ ಮೂಲಕ ಮೊಮ್ಮಗನ ರಾಜಕೀಯ ಎಂಟ್ರಿ ಬಗ್ಗೆ ಸುಳಿವು ಕೊಟ್ಟರು.
ಧವನ್ ಈಗೇನು ಮಾಡುತ್ತಿದ್ದಾರೆ?
ರಾಕೇಶ್ ಅವರ ಮಗ ಧವನ್ ರಾಕೇಶ್ ಅವರಿಗೆ ಈಗ 17 ವರ್ಷ. ಅವರು ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಓದಿನ ಕಡೆ ಹಾಗೂ ಕುಟುಂಬಕ್ಕಷ್ಟೇ ಸೀಮಿತವಾಗಿದ್ದ ಧವನ್ ಈಗ ಚುನಾವಣೆ ಸಮಯದಲ್ಲಿ ಏಕಾಏಕಿ ಸಿದ್ದರಾಮಯ್ಯ ಅವರ ಜತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆ ಸಂದರ್ಭದಲ್ಲಿ ಪರಿಪೂರ್ಣವಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮುನ್ಸೂಚನೆಯನ್ನು ನೀಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ: Karnataka Election 2023: ತೇರದಾಳದಿಂದ ಪಕ್ಷೇತರವಾಗಿ ಸ್ವಾಮೀಜಿ ಕಣಕ್ಕೆ; ಬಿಜೆಪಿಗೆ ನೇಕಾರರ ಪ್ರತಿ ದಾಳ
ಅಲ್ಲದೆ, ರಾಕೇಶ್ ಸಿದ್ದರಾಮಯ್ಯ ಅವರು ವರುಣ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಸಿದ್ದರಾಮಯ್ಯ ರಾಜ್ಯದ ಹಲವು ಕಡೆ ಸಂಚಾರ ಮಾಡುತ್ತಿದ್ದರೂ ಸಹ ಯಾವುದೇ ಲೋಪವಾಗದಂತೆ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ನಿರ್ವಹಣೆ ಮಾಡುತ್ತಿದ್ದರು. ಅವರ ಅಕಾಲಿಕ ನಿಧನ ಸಿದ್ದರಾಮಯ್ಯ ಅವರಿಗೆ ಭಾರಿ ಆಘಾತವನ್ನೇ ತಂದಿತ್ತು. ಈಗ ಅವರ ಪುತ್ರ ಆಸಕ್ತಿ ತೋರುತ್ತಿರುವುದು ಸಿದ್ದರಾಮಯ್ಯ ಅವರ ಖುಷಿಗೆ ಕಾರಣವಾಗಿದೆ ಎನ್ನಲಾಗಿದೆ. ಅದಕ್ಕಾಗಿಯೇ ಅವರು, “ಅಪ್ಪನ ರಕ್ತ ಎಲ್ಲಿ ಹೋಗುತ್ತದೆ..” ಎಂದು ಸಂತಸದಿಂದಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.