ಗದಗ: ಲೋಕಾಯುಕ್ತ ನಿಶಕ್ತಗೊಳಿಸಲು ಎಸಿಬಿ ಸೃಷ್ಟಿಸಿದ್ದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಮೇಲಿನ ಭ್ರಷ್ಟಾಚಾರ ಆರೋಪ ರಕ್ಷಿಸಿಕೊಳ್ಳಲು ಎಸಿಬಿ ರಚನೆ ಮಾಡಿದ್ದಾರೆ. ಹಾಸಿಗೆ, ದಿಂಬು ಖರೀದಿಯಲ್ಲೂ ಶೇಕಡಾ 100ರಷ್ಟು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಆರೋಪಿಸಿದರು.
ಗದಗ ಜಿಲ್ಲೆಯ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಭಾನುವಾರ ಜಿಲ್ಲೆಯ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ಮೇಲೆ 40% ಭ್ರಷ್ಟಾಚಾರ ಆರೋಪ ಮಾಡಿರುವ ಕಾಂಗ್ರೆಸ್ ಪಕ್ಷ ಹಾಗೂ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಬಿ.ಸಿ.ಪಾಟೀಲ ಕಿಡಿಕಾರಿ, ಭ್ರಷ್ಟಾಚಾರಕ್ಕೆ ಬೂಸ್ಟ್ ನೀಡಿದ್ದೇ ಸಿದ್ದರಾಮಯ್ಯ ಎಂದು ನೇರ ಆರೋಪ ಮಾಡಿದ್ದಾರೆ.
‘ಕೆಂಪಣ್ಣ’ ಅವನೊಬ್ಬ ಹುಚ್ಚ:ಬಿ.ಸಿ.ಪಾಟೀಲ
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವನೊಬ್ಬ ಹುಚ್ಚ. ಸಾಕ್ಷ್ಯಾಧಾರ ಇಲ್ಲದೆ ಕಳೆದೊಂದು ವರ್ಷದಿಂದ ಆರೋಪಿಸುತ್ತಾ ಬಂದಿದ್ದಾರೆ. ಇದನ್ನು ಹುಚ್ಚುತನವಲ್ಲದೆ ಬೇರೇನು ಹೇಳಬೇಕು? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ | BJP ಜನಸ್ಪಂದನ | ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಸಿಎಂ ಕಚೇರಿಯಲ್ಲಿ ನೌಕರಿ ನೀಡುವುದಾಗಿ ಬೊಮ್ಮಾಯಿ ಘೋಷಣೆ
ಕಾಂಗ್ರೆಸ್‌ನಲ್ಲಿ ಉತ್ಸವಗಳೇ ನಡೆಯುತ್ತಿವೆ
ದಲಿತೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ, “ಕಾಂಗ್ರೆಸ್‌ನಲ್ಲಿ ಉತ್ಸವಗಳೇ ನಡೆಯುತ್ತಿವೆ. ಸಿದ್ದರಾಮೋತ್ಸವ, ಡಿಕೆಶಿ ಉತ್ಸವ, ಜಮೀರ್ ಉತ್ಸವ, ಜಿ.ಪರಮೇಶ್ವರ ಉತ್ಸವಗಳೇ ನಡೆಯೋದು. ನಮ್ಮದು ಜನಸ್ಪಂದನ ಕಾರ್ಯಕ್ರಮ ಎಂದು ಹೇಳಿದರು.
ಎಚ್.ಕೆ. ಪಾಟಿಲ್ ವಿರುದ್ಧ ಅಸಮಧಾನ
ತಾಲೂಕಿನ ಕುರ್ತುಕೋಟಿ ಗ್ರಾಮದ ಬೆಳೆ ಹಾನಿ ಪ್ರದೇಶಕ್ಕೆ ಬಿ.ಸಿ. ಪಾಟೀಲ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಸ್ಥಳೀಯ ಶಾಸಕ ಎಚ್.ಕೆ. ಪಾಟೀಲ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಜರುಗಿದೆ. ಎಚ್.ಕೆ. ಪಾಟೀಲರು ಕಾಂಗ್ರೆಸ್ ಕಾರ್ಯಕರ್ತರ ಹೊಲಗಳಿಗಷ್ಟೇ ಭೇಟಿ ನೀಡುತ್ತಾರೆ. ‘ಬಿ’ ಕೆಟಗಿರಿ ಪರಿಗಣಿಸಿ ಮಳೆಯಿಂದ ಹಾಳಾದ ಜಮೀನುಗಳನ್ನು ‘ಬಿ’ ಕೆಟಗರಿ ಎಂದು ಪರಿಗಣಿಸಿ. ‘ಸಿ’ ಕೆಟಗರಿಯಲ್ಲಿ ಕೇವಲ 50 ಸಾವಿರ ರೂ. ಪರಿಹಾರ ಮಾತ್ರ ಸಿಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು.
ನಾನೇ ಪೊಲೀಸ್ ಗಿರಿ ಮಾಡ್ಬೇಕಾ?
ನೆರೆ ಪ್ರದೇಶಗಳ ಭೇಟಿ ವೇಳೆ ಸ್ಥಳದಲ್ಲಿ ಕಾರುಗಳೇ ತುಂಬಿದ್ದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗಿತ್ತು. ಆಗ ಬಿ.ಸಿ.ಪಾಟೀಲ್, “ನಾನೇ ಪೊಲೀಸ್ ಗಿರಿ ಮಾಡಬೇಕು” ಎನ್ನುತ್ತಾ ಕಾರ್‌ನಿಂದ ಕೆಳಗಿಳಿದ ಸಚಿವರು, ಕಾರ್ಯಕರ್ತರ ಕಾರುಗಳನ್ನು ಸ್ಥಳದಿಂದ ಮುಂದಕ್ಕೆ ಹೋಗುವಂತೆ ನೋಡಿಕೊಂಡರು.
ಘೇರಾವ್ ಹಾಕಿ ಊರಿಗೆ ಕರೆದೊಯ್ದರು
ಗದಗ ಸಮೀಪದ ಕುರ್ತಕೋಟಿ ಗ್ರಾಮದ ವೀಕ್ಷಣೆ ಮಾಡಿ ತೆರಳುತ್ತಿದ್ದ ಸಚಿವ ಬಿ.ಸಿ. ಪಾಟೀಲ ಅವರ ಕಾರಿಗೆ ಅಂತೂರು-ಬೆಂತೂರು ಗ್ರಾಮಸ್ಥರು ಘೇರಾವ್ ಹಾಕಿ ತಮ್ಮೂರಿಗೆ ಕರೆದುಕೊಂಡು ಹೋದ ಪ್ರಸಂಗ ಜರುಗಿತು. ಸಚಿವ ಪಾಟೀಲ ಕಾರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಮಧ್ಯದಲ್ಲೇ ಮರಳಿದರೆ ಹೇಗೆ? ನಮ್ಮೂರಿಗೂ ಬನ್ನಿ ಎಂದು ಪಟ್ಟುಹಿಡಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಗ್ರಾಮಕ್ಕೆ ಸಚಿವರು ತೆರಳಿದರು.
ಇದನ್ನೂ ಓದಿ | BJP ಜನಸ್ಪಂದನ | ವಲಸಿಗ ಶಾಸಕರನ್ನು ವೀರರು ಎಂದ ಸಿಎಂ ಬೊಮ್ಮಾಯಿ