ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪುಕ್ಕಲುತನ, ಭಯ ಕಾಡುತ್ತಿದೆ. ಅವರನ್ನು ನೋಡಿದರೆ ನಗು ಬರುತ್ತದೆ. ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇರುವ ಸಿದ್ದರಾಮಯ್ಯ ಅವರು 18 ವರ್ಷವೂ ತುಂಬದ ಮೊಮ್ಮಗನ ಜತೆ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 17 ವರ್ಷದ ಮೊಮ್ಮಗ ಹಾಗೂ ಕುಟುಂಬದವರನ್ನು ಕರೆದುಕೊಂಡು ಪೂಜೆ, ಪುನಸ್ಕಾರ ಮಾಡುತ್ತಾ ಸೆಂಟಿಮೆಂಟಲ್ ಮಾತುಗಳನ್ನು ಆಡಿ ಮತ ಕೇಳುತ್ತಿದ್ದಾರೆ. ಭಯ ಮತ್ತು ಪುಕ್ಕಲುತನಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಮೊಮ್ಮಗನನ್ನು ಉತ್ತರಾಧಿಕಾರಿ ಅಂತ ಸಂದೇಶ ನೀಡುತ್ತಿರುವ ನಿಮಗೆ ನಿಮಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್‌ಗೆ ಹೋದ ಮೇಲೆ ನಿಮ್ಮಲ್ಲಿರುವ ನೈತಿಕತೆ, ಸಿದ್ಧಾಂತ ಸತ್ತು ಹೋಯಿತಾ? ನಾವು ಕಂಡ ಸಿದ್ದರಾಮಯ್ಯ ಅಂದರೆ ಜನರಿಗೆ ವೇದವನ್ನು ಬೋಧನೆ ಮಾಡುತ್ತಿದ್ದವರು. ಆ ಸಿದ್ದರಾಮಯ್ಯ ಈಗ ಎಲ್ಲಿ ಹೋದರು? ಕಾಂಗ್ರೆಸ್‌ಗೆ ಹೋದ ಮೇಲೆ ನಿಮ್ಮ ಸಿದ್ಧಾಂತ, ನೈತಿಕತೆಯನ್ನು ಆ ಪಕ್ಷಕ್ಕೆ ಅಡವಿಟ್ಟರಾ? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಗಳಗಳನೆ ಅತ್ತ ಅಭ್ಯರ್ಥಿ, ಕುದುರೆ ಏರಿ ಬಂದು ನಾಮಪತ್ರ ಸಲ್ಲಿಕೆ; ಇವು ದಿನದ ಇಂಟರೆಸ್ಟಿಂಗ್ ಘಟನೆಗಳು
ಮೊಮ್ಮಗನನ್ನು ಕರೆದುಕೊಂಡು ಹೋಗಿ ಮತ ಕೇಳುವುದನ್ನು ನೋಡಿದರೆ ಸೋಲು ನಿಶ್ಚಿತ. ನೀವು ಸಿಎಂ ಆಗಿದ್ದಾಗಲೇ ಒಂದು ಲಕ್ಷ ಮತದಲ್ಲಿ ವರುಣದಲ್ಲಿ ಗೆಲ್ಲೋಕೆ ಆಗಲಿಲ್ಲ. ಆಗ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಿರಿ. ನಾವು ಪ್ರಬಲ ಅಭ್ಯರ್ಥಿಯನ್ನು ಹಾಕುತ್ತಿದ್ದ ಹಾಗೆ, ಮೊಮ್ಮಗ, ಕುಟುಂಬ ಆದಿಯಾಗಿ ಎಲ್ಲರನ್ನೂ ಪ್ರಚಾರಕ್ಕೆ ಕರೆಸಿಕೊಳ್ಳುತ್ತಿದ್ದೀರಾ? ಕರ್ನಾಟಕದ ಇತಿಹಾಸದಲ್ಲಿಯೇ ಯಾರಾದರೂ ಒಂದು ಲಕ್ಷ ಮತದಲ್ಲಿ ಗೆದ್ದಿದ್ದರೆ ಹೇಳಲಿ ನೋಡೋಣ. ಮುಖ್ಯಮಂತ್ರಿ ಆಗಿದ್ದಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಅಂತರದಿಂದ ಸೋಲು ಕಂಡಿದ್ದೀರಿ. ಮೇ 13ಕ್ಕೆ ಚಾಮುಂಡೇಶ್ವರಿ ತಾಯಿ ತೀರ್ಪು ಕೊಡುತ್ತಾಳೆ. ಅಲ್ಲಿ ತನಕವಾದರೂ ಬಡಾಯಿ ಕೊಚ್ಚಿಕೊಳ್ಳದೆ ಇರಿ ಎಂದು ಪ್ರತಾಪ್ ಸಿಂಹ ಹೇಳಿದರು.
ಚಾಮರಾಜನಗರದಿಂದಲೇ ಮೋದಿ ಪ್ರಚಾರ ಆರಂಭ!
ಚಾಮರಾಜನಗರದಿಂದಲೇ ಮೋದಿ ಪ್ರಚಾರ ಆರಂಭವಾಗಲಿದೆ. ಅಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ನಡೆಸಲಾಗುತ್ತದೆ. ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಕಾರ್ಯಕ್ರಮ ರೂಪುರೇಷೆ, ದಿನಾಂಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀಘ್ರವೇ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಮೈಸೂರು, ಚಾಮರಾಜನಗರದ 15 ಕ್ಷೇತ್ರಗಳಲ್ಲಿ 10 ಕ್ಷೇತ್ರವನ್ನು ಗೆಲ್ಲುತ್ತೇವೆ. ಇದಕ್ಕೆ ಬೇಕಾದ ಎಲ್ಲ ತಯಾರಿಗಳು ಆಗುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದರು.
ಇದನ್ನೂ ಓದಿ: Karnataka Election 2023: ಲಿಂಗಾಯತರನ್ನು ಸಿಎಂ ಮಾಡುತ್ತೇವೆಂದು ಕಾಂಗ್ರೆಸ್ ಘೋಷಿಸಲಿ: ವಿ. ಸೋಮಣ್ಣ ಸವಾಲು
ವರುಣ ಅಖಾಡಕ್ಕೆ ನಾಳೆಯಿಂದ ವಿಜಯೇಂದ್ರ ಎಂಟ್ರಿ
ವರುಣ ಚುನಾವಣಾ ಅಖಾಡಕ್ಕೆ ಶುಕ್ರವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಂಟ್ರಿ ನೀಡಲಿದ್ದಾರೆ. ವರುಣ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆದಿರುವ ಅವರು, ಚರ್ಚೆ ನಡೆಸಲಿದ್ದಾರೆ. ಬಳಿಕ ಕೆ.ಆರ್. ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಮೈಸೂರು, ಚಾಮರಾಜನಗರ ಭಾಗದಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.