ಬೆಂಗಳೂರು: ನವ ದೆಹಲಿಯಲ್ಲಿ ಎರಡು ದಿನ ರಾಹುಲ್ ಗಾಂಧಿ ಅವರೊಂದಿಗೆ ಚುನಾವಣಾ ಕಾರ್ಯತಂತ್ರ, ಪ್ರಚಾರ ಹಾಗೂ ಸಿದ್ಧತೆ ಸಭೆ ನಡೆಸಿ ಬಂದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇದೀಗ ಬಿಜೆಪಿ ಸರ್ಕಾರದ ಸಚಿವರಿಗೆ ಓಪನ್ ಆಫರ್ ನೀಡಿದ್ದಾರೆ.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿರುವುದು ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ನವ ದೆಹಲಿಯಿಂದ ವಾಪಸಾದ ಸಿದ್ದರಾಮಯ್ಯ ಗುರುವಾರ 8 ಸರಣಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಮೊದಲನೆಯದಾಗಿ ʻಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಪಕ್ಷದ ಗುರಿ. 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ನಮ್ಮ ಸಮೀಕ್ಷೆಯೂ ನಿರೀಕ್ಷೆಯಂತೆಯೇ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯವರು ಏನೇ ಹೇಳಲಿ, ಸ್ಪಷ್ಟಬಹುಮತದ ಮೂಲಕ ನಾವು ಗೆಲ್ಲುವುದು ಖಚಿತʼ ಎಂದಿದ್ದಾರೆ.
ಎರಡನೇ ಟ್ವೀಟ್‌ನಲ್ಲಿ, ಉದಯಪುರದ ದುರ್ಘಟನೆ ಕುರಿತು ಮತ್ತೊಮ್ಮೆ ಖಂಡನೆ ವ್ಯಕ್ತಪಡಿಸಿದ್ದಾರೆ. ಮೂರನೇ ಟ್ವೀಟ್‌ನಲ್ಲಿ ತಮ್ಮ ಹುಟ್ಟಹಬ್ಬದ ಕಾರ್ಯಕ್ರಮದ ಕುರಿತು ಸ್ಪಷ್ಟನೆ, ನಾಲ್ಕನೇ ಟ್ವೀಟ್‌ನಲ್ಲಿ ತಮ್ಮನ್ನು ತಾವು ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಬಿಂಬಿಸಿಕೊಂಡಿದ್ದಾರೆ, ಆರನೇ ಟ್ವೀಟ್‌ನಿಂದ ಮುಂದಿನ ವಿಧಾನಸಭೆ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ | ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ಮುಂದುವರಿಕೆ: ಬೆಂಗಳೂರಲ್ಲೇ ಎಂದ ಪುತ್ರ
ʻರಾಜ್ಯದ ಒಂದೊಂದು ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ 10-12 ಗೆಲ್ಲುವ ಅಭ್ಯರ್ಥಿಗಳಿದ್ದಾರೆ. ಇದೇ ಸಮಸ್ಯೆಯಾಗಿದೆ. ಈ ಸಮಸ್ಯೆ ಬಿಜೆಪಿಗೆ ಇಲ್ಲ. ಅದು ನಮ್ಮಂತೆ ಇಡೀ ರಾಜ್ಯದಲ್ಲಿ ನೆಲೆ ಇರುವ ಪಕ್ಷ ಅಲ್ಲ. ಇದಕ್ಕಾಗಿ ನಮ್ಮಲ್ಲಿ ಗೆದ್ದವರನ್ನು ಆಪರೇಷನ್ ಕಮಲ ಮಾಡಿ ಬಿಜೆಪಿಯವರು ಹೊತ್ತುಕೊಂಡು ಹೋಗುತ್ತಾರೆ.ʼ
ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಖಂಡಿತ ಇದೆ. ಉದಾಹರಣೆಗೆ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ವಿಶ್ವನಾಥ್ ಈಗ ಪರಿಷತ್ ಸದಸ್ಯರಾಗಿದ್ದಾರೆ. ಕೆ.ಆರ್ ನಗರದಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಯಾರಿದ್ದಾರೆ? ಇಡೀ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಹಲವು ನಾಯಕರು ನನ್ನ ಸಂಪರ್ಕದಲ್ಲಿರುವುದು ನಿಜ. ಚುನಾವಣೆಗೆ 9 ತಿಂಗಳು ಇದೆ, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತದಲ್ಲಿ ನಂಬಿಕೆ ಇಟ್ಟು, ಪಕ್ಷದ ನಾಯಕತ್ವ ಒಪ್ಪಿಕೊಂಡು, ಪಕ್ಷಕ್ಕೆ ನಿಷ್ಠಾವಂತರಾಗಿ ಇರುವವರಿಗೆ ಟಿಕೇಟ್ ನೀಡುತ್ತೇವೆ ಎಂದಿದ್ದಾರೆ.
ಕೊನೆಯ ಟ್ವೀಟ್‌ನಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ʻಬಿಜೆಪಿಯಲ್ಲಿರುವವರೆಲ್ಲರೂ ಆರ್.ಎಸ್.ಎಸ್ ಮೂಲದವರಲ್ಲ. ಉದಾಹರಣೆಗೆ ಸಚಿವ ಎಸ್.ಟಿ.ಸೋಮಶೇಖರ್ ಆರ್.ಎಸ್.ಎಸ್‌ನವರಲ್ಲ. ಹೀಗೆ ಬಹಳ ಮಂದಿ ಇದ್ದಾರೆ. ಇದರ ಅರ್ಥ ಸೋಮಶೇಖರ್ ಮರಳಿ ಬರುತ್ತಾರೆ ಎಂದಲ್ಲ. ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಸ್ವಾಗತʼ ಎಂದು ಪರೋಕ್ಷವಾಗಿ ಎಸ್.ಟಿ. ಸೋಮಶೇಖರ್ ಮತ್ತಿತರರಿಗೆ ಆಹ್ವಾನ ನೀಡಿದ್ದಾರೆ.
ನವ ದೆಹಲಿಯಲ್ಲಿ ನಡೆದ ಚುನಾವಣೆ ತಯಾರಿ ಸಭೆಯಲ್ಲಿ ಈ ವಿಚಾರಗಳ ಚರ್ಚೆ ನಡೆದಿರುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆಗೂ ಮುನ್ನ ವಿವಿಧ ಪಕ್ಷಗಳಿಂದ ಆಗಮಿಸುವವರನ್ನು ಸ್ವಾಗತಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಆಲೋಚನೆ ಮಾಡಲಾಗಿದೆ. ಅದರಲ್ಲೂ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಬಹಳಷ್ಟು ಜನರು ಸಿದ್ದರಾಮಯ್ಯ ಆಪ್ತರೇ ಆಗಿದ್ದರು. ಅವರಲ್ಲಿ ಎಸ್.ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಭೈರತಿ ಬಸವರಾಜ ಮುಂತಾದವರಿದ್ದರು.
ಇದೀಗ ಟ್ವಿಟರ್ ಮೂಲಕ ಸಿದ್ದರಾಮಯ್ಯ ತಮ್ಮೆಲ್ಲ ಆಪ್ತರು ಮತ್ತೆ ಕಾಂಗ್ರೆಸ್‌ಗೆ ವಾಪಸಾಗಲು ಆಹ್ವಾನ ನೀಡುತ್ತಿದ್ದಾರೆಯೇ? ಈ ಮೂಲಕ ತಮ್ಮ ಆಪ್ತರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಲಾಬಿ ನಡೆಸಿದ್ದಾರೆಯೇ ಎಂಬ ಚರ್ಚೆಗಳು ಕಾಂಗ್ರೆಸ್‌ನಲ್ಲಿ ನಡೆದಿವೆ.