Site icon Vistara News

ಕೊಡಗಿನ 50 ಕಡೆ ಪೆಟ್ರೋಲ್ ಬಾಂಬ್‌ ಹಾಕಲು ಸ್ಕೆಚ್;‌ ಆಡಿಯೊದಲ್ಲಿ ಡಿಕೆಶಿ, ಸಿದ್ದು ಹೆಸರು ಉಲ್ಲೇಖ, ಇಬ್ಬರ ಸೆರೆ

ಪೆಟ್ರೋಲ್ ಬಾಂಬ್‌
http://vistaranews.com/wp-content/uploads/2022/10/madikeri.mp3

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 50 ಸ್ಥಳಗಳಲ್ಲಿ ಪೆಟ್ರೋಲ್ ಬಾಂಬ್‌ ಹಾಕಲು ಸಂಚು ಹೂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 6 ತಿಂಗಳ ಹಿಂದೆ ಮಾತನಾಡಿರುವ ಆಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆ ಸದಸ್ಯ ಮುಸ್ತಫಾ, ಬೆಟ್ಟಗೇರಿ ಅಬ್ದುಲ್ಲಾ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ ಮಲಯಾಳಂ ಭಾಷೆಯಲ್ಲಿ ಪೆಟ್ರೋಲ್‌ ಬಾಂಬ್‌ ಹಾಕುವ ಬಗ್ಗೆ ಆರೋಪಿಗಳಿಬ್ಬರೂ 3 ನಿಮಿಷದ ಕಾಲ ಮಾತನಾಡಿರುವ ಆಡಿಯೋ ವೈರಲ್‌ ಆಗಿದೆ. ಇವರ ಸಂಭಾಷಣೆಯಲ್ಲಿ ಕೊಡಗಿನ 50ಕ್ಕೂ ಅಧಿಕ ಸ್ಥಳಗಳಲ್ಲಿ ಪೆಟ್ರೋಲ್‌ ಬಾಂಬ್‌ ಹಾಕುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.‌

ಇದನ್ನೂ ಓದಿ | Road Accident | ಸ್ಕೂಟರ್‌ಗೆ ಕೆಎಸ್‌ಆರ್‌ಟಿಸಿ ಡಿಕ್ಕಿ; ಸ್ಥಳದಲ್ಲೇ ಸವಾರ ಸಾವು, ಮತ್ತೊಬ್ಬ ಗಂಭೀರ

ಆರೋಪಿ ಬೆಟ್ಟಗೇರಿ ಅಬ್ದುಲ್ಲಾ

ಆರೋಪಿಗಳಲ್ಲಿ ಒಬ್ಬರಿಗೆ ಫೋನ್‌ ಕಾಲ್‌ ಬಂದಾಗ ಕಟ್‌ ಮಾಡುವ ಬದಲು ರಿಸೀವ್‌ ಮಾಡಿದ್ದಾರೆ. ಇದರ ಪರಿವೆಯೇ ಇಲ್ಲದೆ ಆರೋಪಿಗಳು ಮಾತುಕತೆ ಮುಂದುವರಿಸಿದ್ದು, “ಹಿಂದೂಗಳು ಜಾಸ್ತಿ ಸೇರುವ ಜಾಗದಲ್ಲಿ ಪೆಟ್ರೋಲ್ ಬಾಂಬ್ ಹಾಕಬೇಕು. ಹಿಂದು ನಾಯಿಗಳನ್ನು‌ ನಾವು ಸುಮ್ಮನೆ ಬಿಡಬಾರದು, ಪೆಟ್ರೋಲ್ ಬಾಂಬ್ ಹಾಕಿ ಹಿಂದುಗಳನ್ನು ಕೊಲ್ಲಬೇಕು. ಆ ಮೂಲಕ ಇಡೀ ಮಡಿಕೇರಿ ನಗರ ಹೊತ್ತಿ ಉರಿಯುವಂತೆ ಮಾಡಬೇಕು. ನಾವು ಸತ್ತರೂ ಪರವಾಗಿಲ್ಲ ಹಿಂದೂಗಳನ್ನ ಬಿಡಬಾರದು. ಎಷ್ಟೇ ಹಣ ಖರ್ಚಾದರೂ ತೊಂದರೆ ಇಲ್ಲ, ನಾವೆಲ್ಲ ಸೇರಿ ಅದಕ್ಕೆ ಬೇಕಾಗುವ ಹಣ ಹೊಂದಿಸಬೇಕು” ಎಂದು ಮಲಯಾಳಂನಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆತಂಕ ವ್ಯಕ್ತಪಡಿಸಿದ ಶಾಸಕ ಕೆ‌.ಜಿ.ಬೋಪಯ್ಯ
ಪೆಟ್ರೋಲ್ ಬಾಂಬ್‌ ಹಾಕುವ ಕುರಿತ ಆಡಿಯೊ ವೈರಲ್‌ ಪ್ರಕರಣದ ಬಗ್ಗೆ ವಿರಾಜಪೇಟೆ ಶಾಸಕ ಕೆ‌.ಜಿ.ಬೋಪಯ್ಯ ಆತಂಕ‌ ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರ ಬಂದ ಮೇಲೆ ಕೆಲವರು ದುಷ್ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಚಾರವಂತೂ ತುಂಬ ಗಂಭೀರವಾದುದು, ಸಂಭಾಷಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.‌ಶಿವಕುಮಾರ್ ಹೆಸರುಗಳನ್ನು ಉಲ್ಲೇಖಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಪಕ್ಷ ಯಾವುದಿದ್ದರೂ ಸಂಭಾಷಣೆ ನಡೆಸಿರುವವರು ಪಿಎಫ್‌ಐ ಜತೆಗೆ ಸಂಪರ್ಕ ಇರುವವರು. ಅವರು ಎಲ್ಲಿ ಟ್ರೈನಿಂಗ್‌ಗೆ ಹೋಗಿದ್ದರೋ ಗೊತ್ತಿಲ್ಲ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿದ್ದೇನೆ‌. ಪೊಲೀಸರು ಎನ್‌ಐಎಗೂ ಮಾಹಿತಿ ನೀಡಿದ್ದಾರೆ, ಎನ್‌ಐಎಯಿಂದಲೇ‌ ಈ ಬಗ್ಗೆ ತನಿಖೆ ಆಗಬೇಕು‌ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ ಪ್ರಕರಣ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಅ.17ರಂದು ಕಾವೇರಿ ತೀರ್ಥೋದ್ಭವ ಇದೆ. ಆ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಜನರೂ‌ ಸೇರುತ್ತಾರೆ.
ಪೊಲೀಸರು ಈ ಬಗ್ಗೆ ವಿಶೇಷ ಗಮನ ಹರಿಸಬೇಕು. ದುಷ್ಕರ್ಮಿಗಳು ಏನು ಬೇಕಾದರೂ ಮಾಡುತ್ತಾರೆ. ಆಡಿಯೊದಲ್ಲಿ ಒಬ್ಬ ಮಡಿಕೇರಿ ನಗರಸಭೆಯ ಜೆಡಿಎಸ್ ಸದಸ್ಯ ಆಗಿದ್ದಾನೆ. ನಗರದ ಜನರಿಂದಲೇ ಮತ ಪಡೆದು ಆಯ್ಕೆಯಾದ ವ್ಯಕ್ತಿ ನಗರಕ್ಕೆ ಬಾಂಬ್ ಹಾಕಬೇಕು ಎನ್ನುತ್ತಾನೆ. ಇದರಿಂದಲೇ ಇವರ ವಿಕೃತ ಮನಸ್ಸು ಎಂತಹದ್ದು ಎಂಬುವುದು ನಮಗೆ ಅರ್ಥವಾಗುತ್ತದೆ ಎಂದು ಕಿಡಿ ಕಾರಿದ್ದಾರೆ.

ಇವರಿಗೆ ದೇಶ ಮುಖ್ಯ ಅಲ್ಲ ಬದಲಾಗಿ‌ ಇಸ್ಲಾಂ ಹೆಸರಿನಲ್ಲಿ ಹಿಂದೂಗಳನ್ನು ನಾಶ ಮಾಡುವುದು ಮುಖ್ಯ, ಇವರ ಮೂಲ, ಇದರ ಹಿಂದೆ ಇರುವವರ ಬಗ್ಗೆ ಸಂಪೂರ್ಣ ತನಿಖೆ‌ ಆಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | ಬೈಕ್-ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರ ದುರ್ಮರಣ

Exit mobile version