Site icon Vistara News

Snake News : ಮತ್ತೆ ಮಂಚಕ್ಕೆ ಬಂದ ಬುಸ್‌ ಬುಸ್‌ ನಾಗಪ್ಪ; ಯುವಕನ ಪಕ್ಕ ತಣ್ಣಗೆ ಮಲಗಿದ್ದ!

Snake in bed at Mysore

ಮೈಸೂರು: ಮೈಸೂರಿನಲ್ಲಿ ಹಾವುಗಳ ಉಪಟಳ ವಿಪರೀತವಾಗಿ (Snake news) ಹೆಚ್ಚಾಗಿದೆ. ಮೊನ್ನೆಯಷ್ಟೇ ಹಾಸಿಗೆಯೊಂದರಲ್ಲಿ ಕಂಡುಬಂದಿದ್ದ ಬುಸ್‌ ಬುಸ್‌ ನಾಗಪ್ಪನಿಗೆ (Snake Cobra) ಈಗ ಹಾಸಿಗೆಯೇ ಸುಖಕರ ಅನಿಸಿದೆಯೋ ಏನೋ.. ಇನ್ನೊಂದು ಮನೆಯಲ್ಲಿ ಹಾಸಿಗೆಯಲ್ಲಿ ಬೆಚ್ಚಗೆ ಹೋಗಿ (Snake found in Bed) ಮಲಗಿದೆ!

ಹೌದು ಮೈಸೂರಿನ (Mysore news) ಹೆಬ್ಬಾಳ ಎರಡನೇ ಹಂತದಲ್ಲಿರುವ ಚೆನ್ನಮ್ಮ ವೃತ್ತದ ಮನೆಯೊಂದರಲ್ಲಿ ಭೀಮನ ಅಮಾವಾಸ್ಯೆ ದಿನ ಹಾಸಿಗೆಯಲ್ಲಿ ಹಾವು ಪ್ರತ್ಯಕ್ಷವಾಗಿದೆ. ನಿಜವೆಂದರೆ, ಈ ಮನೆಯ ಹುಡುಗ ಪ್ರಜ್ವಲ್‌ ಸುಮ್ಮನೆ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದ. ಹಾಗೆಯೇ ಸಣ್ಣಗೆ ಜೊಂಪು ಆವರಿಸಿತ್ತು.

ಹೊದಿಕೆಯೊಳಗೆ ಹಾವು ಮತ್ತು ಒಳಚಿತ್ರದಲ್ಲಿ ಪ್ರಜ್ವಲ್‌

ಆಗ ಅವನಿಗೆ ಯಾವುದೋ ಗೊರಕೆ ಸದ್ದು ಕೇಳಿದ ಹಾಗಾಯಿತು. ಎಚ್ಚರವಾಗಿ ಯಾರಪ್ಪಾ ಇದು ಗೊರಕೆ ಹೊಡೆಯೋರು ಎಂದು ನೋಡಿದರೆ ಪಕ್ಕದಲ್ಲೇ ಹಾವು ಬುಸುಗುಡುತ್ತಿತ್ತು. ಇಷ್ಟು ಹೊತ್ತು ನಾನು ಹಾವಿನ ಜತೆಗಾ ಎಂದು ಯೋಚಿಸುತ್ತಲೇ ಅವನ ಎದೆ ಧಸಕ್ಕೆಂದಿತು. ಕೂಡಲೇ ಹೊರಗೋಡಿ ಬಂದು ಎಲ್ಲರಿಗೂ ಹೇಳಿದ.

ಮೈಸೂರಿನಲ್ಲಿ ಎಲ್ಲೇ ಹಾವು ಕಂಡರೂ ಮೊದಲ ಕರೆ ಹೋಗುವುದೇ ಸ್ನೇಕ್‌ ಶ್ಯಾಮ್‌ಗೆ. ಕರೆ ಸ್ವೀಕರಿಸುತ್ತಿದ್ದಂತೆಯೇ ಗಡ್ಡದಾರಿ ಸ್ನೇಕ್‌ ಶ್ಯಾಮ್‌ ಆ ಮನೆಗೆ ಬಂದರು. ಹೆದರಿ ನಡುಗುತ್ತಿದ್ದ ಮನೆ ಮಂದಿಗೆ ಧೈರ್ಯ ಹೇಳಿ ಒಳಗೆ ಹೋದರು.

ಆಗಲೂ ನಾಗರಾಜ ಅಲ್ಲೇ ಹಾಸಿಗೆ ಮೇಲೆ ಬೆಚ್ಚಗೆ ಮಲಗಿದ್ದ. ಇವರನ್ನು ನೋಡುತ್ತಲೇ ಯಾಕೋ ಬಟ್ಟೆಯ ಒಳಗೆ ತೂರಿಕೊಳ್ಳಲು ನೋಡಿದ. ಏನೋ ಕಂದ, ಯಾಕೋ ಕಂದ.. ಇಲ್ಲಿಗೆಲ್ಲ ಬರ್ತೀಯಾ? ಪ್ರಜ್ವಲ್‌ ನಿಂಗೆ ಪರಿಚಯನಾ ಅಂತೆಲ್ಲ ಮಗುವಿನ ಜತೆ ಮಾತನಾಡುವಂತೆ ಮಾಡನಾಡಿ ಹಾವನ್ನು ಹಿಡಿದು ಹೊರಗೆ ತಂದರು. ಬಲಿಷ್ಠವಾಗಿದ್ದ, ಉದ್ದನೆಯ ದೊಡ್ಡ ಹಾವು ಅದು. ಅದನ್ನು ಒಂದು ನೀರಿನ ಕ್ಯಾನ್‌ನಲ್ಲಿ ತುಂಬಿದರು.

ಹಾವು ಹಿಡಿದ ಸ್ನೇಕ್‌ ಶ್ಯಾಮ್‌

ಭೀಮನ ಅಮಾವಾಸ್ಯೆಯ ದಿನವೇ ಹಾವು ಬಂದಿದ್ದು ಒಳ್ಳೆಯದು ಅಂತ ಪಾಸಿಟೀವ್‌ ಆಗಿಯೂ ಯೋಚಿಸಿದ ಕೆಲವರು ಪೂಜೆಯನ್ನೂ ಮಾಡಿದರು. ಸ್ನೇಕ್‌ ಶ್ಯಾಂ ಕೂಡಾ ಶುಭಾಶಯ ಕೋರಿದರು. ಜತೆಗೆ ಭೀಮನ ಅಮಾವಾಸ್ಯೆ ದಿನವಾದರೂ ಗಂಡಸರಿಗೆ ಬೈಬೇಡಿ ಎಂದು ಮಹಿಳೆಯರಿಗೆ ತಮಾಷೆಯಾಗಿ ಹೇಳಿದರು.

ಇದರ ಜತೆಗೆ ಹಾವುಗಳ ಕುರಿತಂತೆ ಕೆಲವು ಸಲಹೆಗಳನ್ನು ನೀಡಿದರು.

ಮಳೆ ಬರುತ್ತಿದ್ದಂತೆಯೇ ಹಾವುಗಳು ಹೊರಬರುತ್ತವೆ. ಅವಕಾಶ ಸಿಕ್ಕಲ್ಲೆಲ್ಲ ತೂರಿಕೊಳ್ಳುತ್ತವೆ. ಹೀಗಾಗಿ ಕೆಲವು ಸೂಚನಗಳನ್ನು ಪಾಲಿಸಿ ಎಂದರು.

  1. ಮಳೆಗಾಲದಲ್ಲಿ ಬಾಗಿಲು ತೆರೆದು ಇಡಬೇಡಿ. ಹೊರಗಡೆ ಅಡ್ಡಾಡುವ ಹಾವುಗಳು ಮನೆಯೊಳಗೆ ಬಂದು ಎಲ್ಲೆಂದರಲ್ಲಿ ಅಡಗಿಕೊಳ್ಳುವ ಅಪಾಯವಿರುತ್ತದೆ.
  2. ಮನೆಯ ಹೊರಗಡೆ ಶೂ, ಚಪ್ಪಲಿಗಳನ್ನು ಇಡಬೇಡಿ. ಹಾವುಗಳು ಅದರೊಳಗಡೆ ರಕ್ಷಣೆ ಪಡೆಯಬಹುದು. ನೀವು ಕಾಲು ಹಾಕಿದಾಗ ಕಚ್ಚಬಹುದು.
  3. ಮಕ್ಕಳು ಸೇರಿದಂತೆ ಯಾರೇ ಶೂ ಹಾಕುವ ಮೊದಲು, ಅದನ್ನು ಒಮ್ಮೆ ತೆಗೆದು ಝಾಡಿಸಿ
  4. ಹಾವುಗಳು ಟಾಯ್ಲೆಟ್‌ ಮೂಲಕವೂ ಬರಬಹುದು. ಹೀಗಾಗಿ ಬಳಸುವ ಮುನ್ನ ಒಮ್ಮೆ ಫ್ಲಶ್‌ ಮಾಡಿ, ಟಾಯ್ಲೆಟ್‌ ಒಳಗಡೆ ಎಚ್ಚರಿಕೆಯಿಂದ ಕಾಲಿಡಿ
ಮೈಸೂರಿನಲ್ಲಿ ಇತ್ತೀಚೆಗೆ ಹಾಸಿಗೆ ಮೇಲೆ ಕಂಡುಬಂದಿದ್ದ ಹಾವು.

ಇಷ್ಟೆಲ್ಲ ಸಲಹೆಗಳನ್ನು ನೀಡಿದ ಅವರು ಇತ್ತೀಚೆಗೆ ಮೈಸೂರಿನಲ್ಲಿ ಎಲ್ಲೆಂದರಲ್ಲಿ ಹಾವುಗಳು ಕಂಡುಬರುತ್ತಿರುವುದು, ಒಂದು ಕಡೆ ಹಾಸಿಗೆಯಲ್ಲೇ ಹಾವು ಕಾಣಿಸಿಕೊಂಡಿದ್ದನ್ನು ನೆನಪಿಸಿದರು.

ಗದ್ದೆ ಪಕ್ಕದ ಹಾಸುಮಂಚದಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆಬಿಚ್ಚಿದ ಹಾವು

ಕಲಬುರಗಿ: ಜಮೀನು ಕೆಲಸ ಮಾಡಿದ್ದ ಮಹಿಳೆಯೊಬ್ಬರು ಆಯಾಸವಾಗಿದ್ದರಿಂದ ಅಲ್ಲೇ ನಿರ್ಮಿಸಿಕೊಂಡಿದ್ದ ಬೆತ್ತದ ಮಂಚವೊಂದರ ಮೇಲೆ ಹಾಯಾಗಿ ಮಲಗಿದ್ದಾರೆ. ಆಕೆಗೆ ಒಳ್ಳೇ ನಿದ್ದೆ ಕೂಡ ಹತ್ತಿದೆ. ಇದೇ ಸಮಯದಲ್ಲಿ ಮೈಮೇಲೆ ಏನೋ ಹರಿದಾಡಿದಂತಾಗಿದೆ, ಬುಸ್‌ ಬುಸ್‌ ಎಂದಿದೆ. ಏಳಲು ಭಯವಾಗಿದೆ. ಇದೇ ವೇಳೆ ದೂರದಲ್ಲಿದ್ದವರು “ಏಳಬೇಡ.. ಏಳಬೇಡ…” ಎಂದು ಕೂಗಿಕೊಂಡಿದ್ದಾರೆ. ಕಾರಣ, ಮೈಮೇಲೆ ಹಾವು (Snake News) ಇತ್ತು.

ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಇಂತಹ ವಿಚಿತ್ರ ಸನ್ನಿವೇಶವೊಂದು ಘಟಿಸಿದೆ. ಭಾಗಮ್ಮ ಬಡದಾಳ್ ಎಂಬುವರ ಮೈಮೇಲೆ ಹಾವು ಕುಳಿತಿತ್ತು. ಮೈಮೇಲೆ ಹಾವು ಬಂದು ಹೆಡೆ ಎತ್ತಿ ನಿಂತಿರುವುದನ್ನು ತಿಳಿದು ಮಹಿಳೆ ಭಯಗೊಂಡಿದ್ದಾರೆ. ಆದರೆ, ಸುಮ್ಮನೆ ಇರದೆ ವಿಧಿ ಇರಲಿಲ್ಲ. ಎದೆಬಡಿತ ಹೆಚ್ಚಾಗಿದೆ, ಭಯದಲ್ಲಿ ಮೈ ಪೂರಾ ತಣ್ಣಗಾಗಿದೆ. ಕೈ-ಕಾಲು ಅಲ್ಲಾಡಿಸುವ ಹಾಗಿಲ್ಲ, ಎದ್ದು ಓಡುವಂತೆಯೂ ಇಲ್ಲ. ಸ್ವಲ್ಪ ಯಾಮಾರಿದರೂ ಹಾವು ಕಚ್ಚಿಬಿಡುತ್ತದೆ. ಹೀಗಾಗಿ ಮಹಿಳೆ ಸಮಯಪ್ರಜ್ಞೆಯಿಂದ ಸ್ವಲ್ಪವೂ ಕದಲಲಿಲ್ಲ. ಆದರೂ ದಿಕ್ಕು ತೋಚದೆ ಕೊನೆಗೆ ಕೈ ಮುಗಿದು ದೇವರ ಮೊರೆ ಇಟ್ಟಿದ್ದಾರೆ.

“ಕಾಪಾಡು ಶ್ರೀಶೈಲ ಮಲ್ಲಯ್ಯ” ಎಂದು ಮಲಗಿದಲ್ಲಿಂದಲೇ ದೇವರಿಗೆ ಭಾಗಮ್ಮ ಪ್ರಾರ್ಥನೆ ಮಾಡಿದ್ದಾರೆ. ಈ ಮೂಲಕ ಜೀವ ಕೈಯಲ್ಲಿ ಹಿಡಿದು ಕೆಲಕಾಲ ಮಲಗಿದಲ್ಲೇ ಉಸಿರು ಬಿಗಿಹಿಡಿದು ಕಾದಿದ್ದಾರೆ. ಸ್ವಲ್ಪ ಸಮಯದಲ್ಲಿ ಹಾವು ಅವರ ಮೈಮೇಲಿಂದ ಇಳಿದು ಹೋಗಿದೆ. ಈ ಸಂದರ್ಭದಲ್ಲಿ ಸಮೀಪದಲ್ಲಿದ್ದವರು ದೃಷ್ಯಗಳನ್ನು ವಿಡಿಯೊ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‌

Exit mobile version