ಬೆಂಗಳೂರು: ಸರ್ಕಾರ ಈಗಾಗಲೇ ಕ್ರೀಡಾಪಟುಗಳಿಗೆ ಶೇ.2 ಮೀಸಲಾತಿಯನ್ನು (Sports Quota) ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಮೀಸಲಿಟ್ಟಿದ್ದು, ಇತರೆ ಇಲಾಖೆಗಳಿಗೂ ವಿಸ್ತರಣೆ ಮಾಡುವ ಕಡತವನ್ನು ಅನುಮೋದಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬರ್ಮಿಂಗ್ಹಮ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳಿಗೆ ಹಾಗೂ ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ ಆಯ್ಕೆಯಾಗಿರವ 75 ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರೀಡಾಪಟುಗಳ ಜೀವನಕ್ಕೆ ಭದ್ರತೆ ಬೇಕು ಎನ್ನುವುದನ್ನು ಸರ್ಕಾರ ಮನಗಂಡಿದೆ. ಮನಸ್ಸಿನಲ್ಲಿ ಕ್ರೀಡೆಯನ್ನು ತಮಗಾಗಿ ಹಾಗೂ ದೇಶಕ್ಕಾಗಿ ಪದಕ ಗೆಲ್ಲಲು ಆಡುತ್ತಿದ್ದೇನೆ ಎನ್ನುವುದನ್ನು ಮಾತ್ರ ಕ್ರೀಡಾಪಟುಗಳು ಮರೆಯಬಾರದು. ನೌಕರಿಗಾಗಿ ಕ್ರೀಡೆಯನ್ನು ಆಡುವುದಲ್ಲ. ದೇಶಕ್ಕಾಗಿ ಆಡಿ, ಪದಕವನ್ನು ಗೆಲ್ಲಬೇಕು. ಪ್ರಧಾನ ಮಂತ್ರಿಗಳು ಖೇಲೋ ಇಂಡಿಯಾ ಎಂದಿದ್ದಾರೆ. ಮೊದಲು ಆಟವಾಡುವುದನ್ನು ಕಲಿಯಿರಿ, ಆಮೇಲೆ ಜೀತೋ ಇಂಡಿಯಾ ಎಂದರು. ಇದನ್ನು ನೆನಪಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬಾಸ್ಕೆಟ್ ಬಾಲ್ ರಾಜ್ಯದ ಕ್ರೀಡೆ
ಕ್ರೀಡಾ ದತ್ತು ಯೋಜನೆ ಜಾರಿಯಲ್ಲಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ. ಕ್ರೀಡಾಂಗಣಗಳ ಅಭಿವೃದ್ಧಿಯನ್ನೂ ಮಾಡಲಾಗುತ್ತಿದೆ. ಬಾಸ್ಕೆಟ್ ಬಾಲ್ ರಾಜ್ಯದ ಕ್ರೀಡೆ ಎಂದು ಅಳವಡಿಸಿಕೊಳ್ಳುತ್ತಿದ್ದೇವೆ. ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಎರಡು ತಿಂಗಳೊಳಗೆ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗುತ್ತದೆ. ನಮ್ಮ ಸರ್ಕಾರ ಕ್ರೀಡೆ ಹಾಗೂ ಕ್ರೀಡಾಪಟುಗಳ ಕಲ್ಯಾಣಕ್ಕೆ ಆದ್ಯತೆಯನ್ನು ನೀಡಿದೆ. ಯಾವುದನ್ನೂ ಚಿಂತೆ ಮಾಡದೆ ಧೈರ್ಯವಾಗಿ ಆಡಿ ಬನ್ನಿ. ಸರ್ಕಾರ ನಿಮ್ಮ ಜತೆ ಇದೆ. ಎಲ್ಲ ದೃಷ್ಟಿಯಿಂದ ನಿಮ್ಮ ಸುರಕ್ಷತೆಯನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕ್ರೀಡಾಪಟುಗಳ ಮೇಲೆ ಸಂಪೂರ್ಣ ವಿಶ್ವಾಸ
ರಾಜ್ಯದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಹಲವಾರು ಕ್ರೀಡಾಪಟುಗಳಿದ್ದಾರೆ, ಒಲಿಂಪಿಯನ್ಸ್ ಇದ್ದಾರೆ, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್‌ನಲ್ಲಿದ್ದಾರೆ, ಈಜುಗಾರರಿದ್ದಾರೆ, ಬಾಸ್ಕೆಟ್ ಬಾಲ್, ಹಾಕಿ ಮುಂತಾದ ಎಲ್ಲಾ ಕ್ರೀಡೆಗಳಲ್ಲಿದ್ದಾರೆ. ಅವರೆಲ್ಲರ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿ, ನಿಮ್ಮ ಸಾಧನೆಗೂ ಸ್ಫೂರ್ತಿ. ಪದಕ ಪಡೆದಿರುವವರು ಇತರರಿಗೆ ಪದಕ ಗೆಲ್ಲಲು ಸ್ಫೂರ್ತಿಯಾಗಬೇಕು. ಯಾರು ಭಾಗವಹಿಸಿದ್ದಾರೆಯೋ ಅವರು ತರಬೇತಿ ಪಡೆಯುತ್ತಿರುವವರಿಗೆ ಸ್ಫೂರ್ತಿಯಾಗಬೇಕೆಂಬ ಉದ್ದೇಶ ಈ ಸಂದರ್ಭದಲ್ಲಿ ಕ್ರೀಡಾಪಟುಗಳನ್ನು ಕರೆಸಿ ಬೆಂಬಲಿಸುತ್ತಿದ್ದೇವೆ.
ನಮ್ಮ ರಾಜ್ಯದ ಕ್ರೀಡಾಪಟುಗಳ ಮೇಲೆ ದೃಢ ವಿಶ್ವಾಸ ಹಾಗೂ ಅವರ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಅದಕ್ಕೆ ಸ್ವಲ್ಪ ಪ್ರೋತ್ಸಾಹ ನೀಡಿದರೆ ಫಲಿತಾಂಶ ಬರುವ ವಿಶ್ವಾಸದೊಂದಿಗೆ 75 ಜನರ ಕ್ರೀಡಾ ದತ್ತು ಯೋಜನೆಯನ್ನು ರೂಪಿಸಲಾಯಿತು. ಸರ್ಕಾರ ಏನು ಮಾಡಬೇಕೆಂದು ಹೇಳುವ ಮುನ್ನ ನೀವೇನು ಮಾಡಬೇಕೆಂದು ಮೊದಲು ತೀರ್ಮಾನ ಮಾಡಿ. ಸರ್ಕಾರ ನಮಗಿಷ್ಟು ಸೌಲಭ್ಯಗಳನ್ನು ಕೊಟ್ಟಿದೆ. ಇದಕ್ಕೂ ಮುನ್ನ ಯಾವುದೇ ಯೋಜನೆಯೂ ಇರಲಿಲ್ಲ. ನೀವು ಸಾಧನೆಯನ್ನು ಮಾಡಬೇಕೆಂದು ನಾವು ನಿಮ್ಮ ಪ್ರತಿಭೆಯನ್ನು ಗುರುತಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ, ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | ಯಲಹಂಕದಲ್ಲಿ ಕ್ರೀಡಾ ವಿಶ್ವವಿದ್ಯಾಲಯ: ಕ್ರೀಡಾ ಸಚಿವ ನಾರಾಯಣಗೌಡ