ಮೈಸೂರು: ಬಿಜೆಪಿಯ ಹಿರಿಯ (BJP leader) ನಾಯಕ, ದಲಿತ ಮುಖಂಡ, ಚಾಮರಾಜನಗರ ಸಂಸದ (Chamarajanagar MP) ಶ್ರೀನಿವಾಸ ಪ್ರಸಾದ್ ಅವರ ಪಾರ್ಥಿವ ಶರೀರದ (Srinivasa Prasada Passes Away) ಅಂತಿಮ ದರ್ಶನಕ್ಕೆ ಇಂದು ಮಧ್ಯಾಹ್ನ 1.00 ಗಂಟೆಯಿಂದ ಅಶೋಕಪುರಂನಲ್ಲಿರುವ ಎಂಟಿಎಂ ಶಾಲೆಯಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಸಿಎಂ, ಡಿಸಿಎಂ ಸೇರಿದಂತೆ ಹಲವು ಗಣ್ಯರು ಪ್ರಸಾದ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ನಾಳೆ ಅಂತ್ಯಕ್ರಿಯೆ
ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ಮನೆಗೆ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ತರಲಾಗಿದ್ದು, ಅಲ್ಲಿಂದ ಎಂಟಿಎಂ ಶಾಲೆಗೆ ತರಲಾಗುತ್ತಿದೆ. 1 ಗಂಟೆ ತನಕ ಮನೆಯಲ್ಲಿ ಶ್ರೀನಿವಾಸ ಪ್ರಸಾದ್ ದರ್ಶನಕ್ಕೆ ಅವಕಾಶ. 1 ಗಂಟೆಯ ನಂತರ ಅಶೋಕ ಪುರಂ ನ ಎಂ.ಟಿ.ಎಂ ಶಾಲೆಯಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ. ನಾಳೆ ಅಶೋಕಪುರಂನಲ್ಲಿ ಮೆರವಣಿಗೆ ನಡೆಯಲಿದೆ. ಸಿಲ್ಕ್ ಫ್ಯಾಕ್ಟರಿ ಬಳಿ ಅಂಬೇಡ್ಕರ್ ಎಜುಕೇಶಲ್ ಅಂಡ್ ಕಲ್ಚರಲ್ ಟ್ರಸ್ಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅವರು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು. ಹಾಗಾಗಿ ಬೌದ್ಧ ಧರ್ಮದ ಪ್ರಕಾರ ಅಂತಿಮ ವಿಧಿ ವಿಧಾನ ನಡೆಯಲಿವೆ ಎಂದು ಶ್ರೀನಿವಾಸ್ ಪ್ರಸಾದ್ ಮಗಳು ಪ್ರತಿಮಾ ಪ್ರಸಾದ್ ಹೇಳಿದ್ದಾರೆ.
ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀನಿವಾಸ ಪ್ರಸಾದ್, ಮೊನ್ನೆ ತುಸು ಚೇತರಿಕೆ ಅನುಭವಿಸಿದ್ದರು. ಆಗಮಿಸಿದ ಎಲ್ಲರ ಜೊತೆ ಚೆನ್ನಾಗಿಯೇ ಮಾತನಾಡಿದ್ದ ಅವರಿಗೆ ನಿನ್ನೆಯಿಂದ ಮಾತನಾಡಲು ಸಾಧ್ಯ ಆಗಿರಲಿಲ್ಲ. ಈ ವೇಳೆ ಬರೆದು ಸೂಚಿಸಲು ಕುಟುಂಬಸ್ಥರು ಪೆನ್ನು ಪೇಪರ್ ಕೊಟ್ಟಿದ್ದರು. ಆಗ ಪೇಪರ್‌ನಲ್ಲಿ ʼcoffeeʼ ಅಂತ ಬರೆದಿದ್ದ ಸಂಸದ ಶ್ರೀನಿವಾಸ್ ಪ್ರಸಾದ್, ಕಾಫಿ ತರಿಸಿಕೊಂಡು ಎರಡು ಗುಟುಕು ಕಾಫಿ ಕುಡಿದಿದ್ದರು ಎಂದು ತಿಳಿದುಬಂದಿದೆ.
ದಮನಿತರ ದನಿ: ಸಿಎಂ ಸಿದ್ದರಾಮಯ್ಯ
“ದಲಿತ ದಮನಿತರ ಪರವಾದ ದಿಟ್ಟ ದನಿ ಮಾಜಿ ಸಚಿವ ಮತ್ತು ಹಿರಿಯ ಮುತ್ಸದ್ದಿ ನಾಯಕ ಶ್ರೀನಿವಾಸ ಪ್ರಸಾದ್ ಅವರ ಸಾವು ನನ್ನನ್ನು ಆಘಾತಕ್ಕೀಡುಮಾಡಿದೆ. ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಅವರ ಅಗಲಿಕೆ ರಾಜ್ಯದ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ. ದೀರ್ಘಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ ನೇತಾರರಾಗಿ ಕೆಲಸ ಮಾಡಿದ್ದ ಶ್ರೀನಿವಾಸ ಪ್ರಸಾದ್ ಸಚಿವರಾಗಿ ಮತ್ತು ಲೋಕಸಭಾ ಸದಸ್ಯರಾಗಿ ದೀರ್ಘ ಕಾಲ ಜನ ಸೇವೆ ಮಾಡಿದ್ದಾರೆ. ಅವರೊಬ್ಬ ಪ್ರಗತಿಪರ ಚಿಂತನೆಯ ರಾಜಕೀಯ ನಾಯಕ. ಹಳೆಮೈಸೂರು ಭಾಗದಲ್ಲಿ ಬಹಳಷ್ಟು ಕಾಲ ನಾವು ಬೇರೆಬೇರೆ ಪಕ್ಷಗಳಲ್ಲಿ ಕೆಲಸ ಮಾಡಿದ್ದರೂ ಪರಸ್ಪರ ಗೌರವಪೂರ್ಣ ಸಂಬಂಧವನ್ನು ಉಳಿಸಿಕೊಂಡಿದ್ದೆವು. ಇತ್ತೀಚೆಗಷ್ಟೇ ನಾನು ಭೇಟಿಯಾಗಿದ್ದ ಸಂದರ್ಭದಲ್ಲಿ ನಾವು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡೆವು. ಆಗ ಗೆಲುವಾಗಿದ್ದ ಪ್ರಸಾದ್ ಇಷ್ಟು ಶೀಘ್ರ ನಮ್ಮನ್ನು ಅಗಲಿ ಹೋಗುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರವಾದ ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ದಲಿತ ದಮನಿತರ ಪರವಾದ ದಿಟ್ಟ ದನಿ ಮಾಜಿ ಸಚಿವ ಮತ್ತು ಹಿರಿಯ ಮುತ್ಸದ್ದಿ ನಾಯಕ ಶ್ರೀನಿವಾಸಪ್ರಸಾದ್ ಅವರ ಸಾವು ನನ್ನನ್ನು ಆಘಾತಕ್ಕೀಡುಮಾಡಿದೆ. ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಅವರ ಅಗಲಿಕೆ ರಾಜ್ಯದ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ.
— Siddaramaiah (@siddaramaiah) April 29, 2024
ದೀರ್ಘಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ… pic.twitter.com/E0M7JWez3h
ರಾಜ್ಯದ ಪರ ದನಿ: ಡಿಕೆ ಶಿವಕುಮಾರ್
“ಶೋಷಿತರ ಪರ ಗಟ್ಟಿ ದನಿಯಾಗಿದ್ದ, ಮಾರ್ಗದರ್ಶಕರು, ಹಿತೈಷಿಗಳು ಆಗಿದ್ದ ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆ ಸುದ್ದಿ ಕೇಳಿ ನೋವಾಗಿದೆ. ಇವರ ನಿಧನದಿಂದ ಮೌಲ್ಯಧಾರಿತ ರಾಜಕಾರಣದ ಕೊಂಡಿ ಮರೆಯಾದಂತಾಗಿದೆ. ಶ್ರೀನಿವಾಸ್ ಪ್ರಸಾದ್ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾಗಿದ್ದಾಗ ಕರ್ನಾಟಕ ರಾಜ್ಯದ ಬೇಡಿಕೆಗಳಿಗೆ ದನಿಯಾಗಿದ್ದರು. ಕಿರಿಯ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು, ಮಾದರಿಯಾಗಿದ್ದರು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಶೋಷಿತರ ಪರ ದನಿ ಎತ್ತುತ್ತಿದ್ದರು. ವಿಧಾನಸಭೆ ಹಾಗೂ ಸಂಸತ್ ಪ್ರತಿನಿಧಿಸಿದ್ದರು. ಕೆಲ ಕಾಲ ಇವರು ಹಾಗೂ ನಾನು ಸಂಪುಟ ಸಹೋದ್ಯೋಗಿಗಳಾಗಿದ್ದೆವು. ಈ ವೇಳೆ ಅವರ ರಾಜಕೀಯ ಜಾಣ್ಮೆಯನ್ನು ಹತ್ತಿರದಿಂದ ಕಂಡಿದ್ದೇನೆ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ವರ್ಗ, ಅಭಿಮಾನಿಗಳಿಗೆ ಭಗವಂತನು ಕರುಣಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಷ್ಟ್ರದ ಗಮನ ಸೆಳೆದ ನಾಯಕ: ಬಿಎಸ್‌ವೈ
“15 ದಿನಗಳ ಹಿಂದಷ್ಟೆ ಅವರನ್ನು ನಾನು ಭೇಟಿ ಮಾಡಿದ್ದೆ. ರಾಜ್ಯಾದ್ಯಂತ ಪ್ರವಾಕ್ಕೆ ಬರಬೇಕು ಎಂದು ಹೇಳಿದ್ದೆ. ಅವರೊಂದಿಗೆ ಮಾತುಕತೆಯನ್ನೂ ಸಹ ನಡೆಸಿದ್ದೆ. ಅಷ್ಟರೊಳಗೆ ಅವರು ಅಕಾಲಿಕವಾಗಿ ಸಾವನ್ನಪ್ಪಿರೋದು ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ. ಅವರ ಕುಟುಂಬದವರಿಗೆ ನೋವು ಸಹಿಸುವ ಶಕ್ತಿ ನೀಡಲಿ. ಶ್ರೀನಿವಾಸ್ ಪ್ರಸಾದ್ ಕೇವಲ ದಲಿತ ನಾಯಕ ಅಲ್ಲ ಅವರು ರಾಷ್ಟ್ರದ ಗಮನ ಸೆಳೆದ ನಾಯಕ. ಪ್ರತಿ ವಿಚಾರದ ಬಗ್ಗೆಯೂ ಬಹಳ ಆಳವಾದ ಜ್ಞಾನ ಹೊಂದಿದ್ದರು” ಎಂದು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ನೆನೆದಿದ್ದಾರೆ.
ಅಪರೂಪದ ಜನನಾಯಕ: ಎಚ್‌ಡಿಕೆ
“ಸರಳತೆ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವರು ಆಗಿದ್ದ ಶ್ರೀ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನ ನನಗೆ ನೋವುಂಟು ಮಾಡಿದೆ. ತಮ್ಮ ಜೀವಿತಾವಧಿಯಲ್ಲಿ 14 ಚುನಾವಣೆಗಳನ್ನು ಎದುರಿಸಿದ್ದ ಅವರ ರಾಜಕೀಯ ಜೀವನ ಮಾದರಿಯ ಹಾದಿ. ಆರು ಅವಧಿಗೆ ಸಂಸದರಾಗಿ, ಎರಡು ಅವಧಿಗೆ ಶಾಸಕರಾಗಿ ಅನನ್ಯ ಸೇವೆ ಸಲ್ಲಿಸಿರುವ ಶ್ರೀ ಪ್ರಸಾದ್ ಅವರು; 27 ವರ್ಷಗಳ ಸುದೀರ್ಘ ಸಂಸತ್ ಸದಸ್ಯರಾಗಿ 7 ಪ್ರಧಾನಿಗಳನ್ನು ಕಂಡಿದ್ದರು. ಅವರು ಅಪರೂಪದಲ್ಲಿ ಅಪರೂಪದ ಜನನಾಯಕರಾಗಿದ್ದರು. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬದ್ಧತೆಗೆ ಸಾಕ್ಷಿ: ವಿಜಯೇಂದ್ರ
“ಕೇಂದ್ರದ ಮಾಜಿ ಸಚಿವರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು, ಹಿರಿಯ ಮುತ್ಸದ್ದಿಗಳಾದ ವಿ. ಶ್ರೀನಿವಾಸ್ ಪ್ರಸಾದ್ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ಅತೀವ ದುಃಖ ತರಿಸಿದೆ. ಅವರ ಅಗಲಿಕೆಯಿಂದ ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಮುಳುಗಿದಂತಾಗಿದೆ. ಅವರ ರಾಜಕೀಯ ಜೀವನದ ಕಡೇ ದಿನಗಳಲ್ಲಿ ಬಿಜೆಪಿಯನ್ನು ಆಯ್ದುಕೊಂಡು ಸಂಸದರಾಗಿ ಪಕ್ಷದ ತತ್ವ, ಸಿದ್ದಾಂತ ಹಾಗೂ ರಾಷ್ಟ್ರೀಯವಾದದ ಸತ್ವವನ್ನು ಜನರಿಗೆ ತಿಳಿಸುವಲ್ಲಿ ನಾಯಕತ್ವ ವಹಿಸಿದ್ದು ಬಿಜೆಪಿಯ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನ ಮೌಲ್ಯವನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ಸಾಕ್ಷೀಕರಿಸಿತ್ತು. ಪ್ರಸ್ತುತ ಕಾಲಮಾನದಲ್ಲಿ ಮಾನ್ಯ ಪ್ರಸಾದರ ಅನುಪಸ್ಥಿತಿ ರಾಷ್ಟ್ರರಾಜಕಾರಣದಲ್ಲೂ ಕೊರತೆ ಸೃಷ್ಟಿಸಿದಂತಾಗಿದೆ. ಅವರ ಅಗಲಿಕೆಯ ನೋವನ್ನು ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
“ಮಾನ್ಯ ಶ್ರೀನಿವಾಸ್ ಪ್ರಸಾದ್ ಅವರು ರಾಜ್ಯದ ಹಿತ ಕಾಯುವಲ್ಲಿ ಯಶಸ್ವಿ ಆಗಿದ್ದಾರೆ. ವಿಶೇಷವಾಗಿ ದಲಿತ ಸಮುದಾಯದಿಂದ ಬಂದು ದಲಿತರ ದನಿಯಾಗಿ ಕೆಲಸ ಮಾಡಿದ್ದಾರೆ. ಕಂದಾಯ ಸಚಿವ ಆಗಿಯೂ ಸಾಕಷ್ಟು ಕೆಲಸ ಮಾಡಿದ್ದರು. ನನಗೆ ಬಹಳಷ್ಟು ನೋವಾಗಿದೆ. ಅವರ ಕುಟುಂಬ ವರ್ಗಕ್ಕೆ ನಷ್ಟ ಭರಿಸುವ ಶಕ್ತಿ ದೊರೆಯಲಿ” ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಸಾಹಿತಿ ದೇವನೂರು ಮಹಾದೇವ, ಶಾಸಕ ಜಿಟಿ ದೇವೇಗೌಡ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮುಂತಾದವರು ಮೃತರ ನಿವಾಸಕ್ಕೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಸೂಚಿಸಿದ್ದಾರೆ. “ಶ್ರೀನಿವಾಸ ಪ್ರಸಾದ್ ಶೋಷಿತ ವರ್ಗದ ಧ್ವನಿಯಾಗಿ ಶಕ್ತಿ ತುಂಬಿದ್ದರು. ಮಂತ್ರಿಯಾಗಿ ಅನೇಕ ಒಳ್ಳೆಯ ಕಾರ್ಯಕ್ರಮ ಕೊಟ್ಟವರು” ಎಂದು ಜಿಟಿ ದೇವೇಗೌಡ ನುಡಿದರು.
ಇದನ್ನೂ ಓದಿ: Srinivas Prasad: ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ