ಮಂಡ್ಯ: ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ (Srirangapatna mosque issue) ಮೂಲತಃ ಆಂಜನೇಯ ಸ್ವಾಮಿ ದೇವಸ್ಥಾನ. ಹೀಗಾಗಿ ಅದನ್ನು ಹಿಂದುಗಳ ವಶಕ್ಕೆ ಒಪ್ಪಿಸಲು ಆದೇಶಿಸಬೇಕು ಎಂದು ಕೋರಿ ರಾಜ್ಯ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಲಾಗಿದೆ.
ಬೆಂಗಳೂರಿನ ವಕೀಲ ರವಿಶಂಕರ್ ಎಸ್.ಎಸ್ ಮೂಲಕ ಸಲ್ಲಿಸಲಾಗಿರುವ ಈ ಪಿಐಎಲ್ ಅನ್ನು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಈ ಮಸೀದಿಯ ಮೂಲಕ್ಕೆ ಸಂಬಂಧಿಸಿ ಬಜರಂಗ ಸೇನೆ ಅಗತ್ಯ ಮಾಹಿತಿ ಸಂಗ್ರಹಿಸಿದೆ. ಆಂಜನೇಯ ಸ್ವಾಮಿ ಪರವಾಗಿ ೧೦೮ ಭಕ್ತರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಭಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಹೇಳಿದ್ದಾರೆ. ಮಸೀದಿಯನ್ನು ತೆರವುಗೊಳಿಸಿ ಹಿಂದುಗಳ ವಶಕ್ಕೆ ನೀಡುವಂತೆ ಪಿಐಎಲ್‌ನಲ್ಲಿ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ಹಿಂದೆ ಮೂಡಲ ಬಾಗಿಲ ಆಂಜನೇಯ ದೇವಾಲಯವಾಗಿದ್ದು, ಹೀಗಾಗಿ ಅದನ್ನು ಹಿಂದುಗಳ ವಶಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕಳೆದ ಜೂನ್ ತಿಂಗಳಿನಲ್ಲಿ ಹಿಂದು ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು. ಆದರೆ, ಆಗ ಸರಕಾರ ಸೂಕ್ತವಾಗಿ ಪ್ರತಿಸ್ಪಂದಿಸಿರಲಿಲ್ಲ. ಇದೀಗ ಕೋರ್ಟ್ ಕಟಕಟೆ ಏರುವ ಮೂಲಕ ಈ ವಿವಾದವನ್ನು ವಾರಾಣಸಿಯ ಜ್ಞಾನವಾಪಿ ವಿವಾದದ ಮಟ್ಟಕ್ಕೆ ಏರಿಸಲು ಪ್ರಯತ್ನ ನಡೆದಿದೆ.
ಮಸೀದಿಯು ಈ ಹಿಂದೆ ಹನುಮ ದೇವಾಲಯ ಆಗಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಮೈಸೂರು ಗೆಜೆಟ್ ನಲ್ಲೂ ಉಲ್ಲೇಖವಿದೆ. ಹಲವು ಬ್ರಿಟಿಷ್ ಬರಹಗಾರರು ಕೂಡಾ ಬರೆದಿದ್ದಾರೆ ಎಂದು ಬಜರಂಗ ಸೇನೆ ಹೇಳಿದೆ. ʻʻಮಸೀದಿ ಎನ್ನಲಾಗುತ್ತಿರುವ ಜಾಗದಲ್ಲಿ ಹಿಂದೂ ದೇವಾಲಯದ ಕುರುಹುಗಳಿವೆ. ದೇವಾಲಯದ ನಿರ್ಮಾಣದ ಶೈಲಿಯಲ್ಲೇ ಮಸೀದಿ ಇದೆ. ಅಲ್ಲಿರುವ ಕಲ್ಯಾಣಿ ಸೇರಿದಂತೆ ಹಲವು ದಾಖಲೆಗಳ ಆಧಾರದ ಮೇಲೆ ಪಿಐಎಲ್ ಸಲ್ಲಿಸಲಾಗಿದೆʼʼ ಎಂದು ಮಂಜುನಾಥ್ ತಿಳಿಸಿದರು.
ನವೆಂಬರ್ ೨೦ರಂದು ಹರಕೆ
ಈ ನಡುವೆ, ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಕೇಸನ್ನು ಗೆಲ್ಲಿಸಿ ಕೊಡುವಂತೆ ಹನುಮ ಭಕ್ತರು ಹರಕೆ ಹೊರುವ ಕಾರ್ಯಕ್ರಮ ಭಾನುವಾರ (ನ. ೨೦) ನಡೆಯಲಿದೆ. ಮಂಡ್ಯದಿಂದ ಬೈಕ್ ಮೂಲಕ ತೆರಳುವ ಸುಮಾರು ೧೫೦ಕ್ಕೂ ಅಧಿಕ ಭಕ್ತರು ಶ್ರೀರಂಗಪಟ್ಟಣದ ಮೂಡಲ ಬಾಗೀಲ ಆಂಜನೇಯಸ್ವಾಮಿ ಮುಂದೆ ಪಿಐಎಲ್ ಅರ್ಜಿ ಇಟ್ಟು ಪೂಜೆ ಸಲ್ಲಿಸುವ ಮೂಲಕ ಅರ್ಜಿ ಹರಕೆ ಸಲ್ಲಿಸಲಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.
ಆರು ಜನರನ್ನು ಪ್ರತಿವಾದಿಯಾಗಿಸಿ ಪಿ ಐಎಲ್ ಸಲ್ಲಿಕೆ
ಭಾರತೀಯ ಪುರಾತತ್ವಾ ಇಲಾಖೆಯ ಪ್ರಾದೇಶಿಕ ಆಯಕ್ತರು, ಮಂಡ್ಯ ಜಿಲ್ಲಾಧಿಕಾರಿ, ಮುಜರಾಯಿ ಇಲಾಖೆಯ ಆಯುಕ್ತರು, ರಾಜ್ಯ ವಕ್ಫ್ ಬೋರ್ಡ್ ಆಡಳಿತಾಧಿಕಾರಿಗಳು , ರಾಜ್ಯ ಧಾರ್ಮಿಕ ಪರಿಷತ್ ನ ಆಯುಕ್ತರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ ಪಿಐಎಲ್ ಸಲ್ಲಿಕೆಯಾಗಿದೆ.
ಇದನ್ನೂ ಓದಿ | ಜಾಮಿಯಾ ಮಸೀದಿ ವಿವಾದಕ್ಕೆ ಬಿಗ್ ಟ್ವಿಸ್ಟ್, ಆಂಜನೇಯ ದೇಗುಲ ಸತ್ಯಕ್ಕೆ ಸಿಕ್ಕಿತು ಸಾಕ್ಷ್ಯ