Site icon Vistara News

BJP ರಾಜ್ಯ ಕಾರ್ಯಕಾರಿಣಿಗೆ ಸಂತೋಷ್‌ ಆತ್ಮಹತ್ಯೆ ನೆರಳು: ಒಂದೇ ದಿನವಿರುವಂತೆ ಮಾಜಿಯಾಗುವ ಈಶ್ವರಪ್ಪ

santosh santosh

ಹೊಸಪೇಟೆ: ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಶನಿವಾರ ಹಾಗೂ ಭಾನುವಾರ ನಡೆಯುವ ರಾಜ್ಯ ಬಿಜೆಪಿ (BJP) ಕಾರ್ಯಕಾರಿಣಿ ಮಹತ್ವ ಪಡೆದಿದೆ. ಆದರೆ ಮೂರು ದಿನದ ಹಿಂದಷ್ಟೆ ಘಟಿಸಿದ ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ (Santosh Suicide Case) ಕರಿನೆರಳು ಕಾರ್ಯಕಾರಿಣಿಯನ್ನು ಬಾಧಿಸುವ ಸಾಧ್ಯತೆಯಿದೆ.

ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ದೇಗುಲದ ಬಯಲು ಸ್ಥಳದಲ್ಲಿ ಹಂಪಿ ಸ್ಮಾರಕಗಳ ಶೈಲಿಯಲ್ಲಿ ಬಯಲು ಜಾಗದಲ್ಲಿ ಹವಾನಿಯಂತ್ರಿತ ಜರ್ಮನ್ ಟೆಂಟ್ ನಿರ್ಮಿಸಲಾಗಿದೆ. ವೈಭವೋಪೇತ ಹಂಪಿ ಸಾಮ್ರಾಜ್ಯವನ್ನು ನೆನಪಿಸುವಂತೆ ಸಾಲುಕಂಬಗಳು, ಮುಖ್ಯ ಮಂಟಪ ನಿರ್ಮಿಸಲಾಗಿದೆ. ಮುಖ್ಯ ವೇದಿಕೆಗೆ ಅಂಜನಾದೇವಿ ಮಹಾದ್ವಾರ ಮತ್ತು ಮಹರ್ಷಿ ಮಾತಂಗಮುನಿ ಸಭಾ ಮಂಟಪ ಎಂದು ಹೆಸರಿಡಲಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಪ್ರಭಾರಿ ಅರುಣ್ ಸಿಂಗ್, ರಾಜ್ಯ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್, ರಾಷ್ಟ್ರೀಯ ಮುಖಂಡರಾದ ಡಿ.ಕೆ. ಅರುಣಾ, ಸಿ.ಟಿ.ರವಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ, ಭಗವಂತ್ ಖೂಬಾ ಅವರು ಭಾಗವಹಿಸಲಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸುವ ಸಾಧ್ಯತೆಯೂ ಇದೆ. ಕಾರ್ಯಕಾರಿಣಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರತಿನಿಧಿಗಳು, ವಿಶೇಷ ಆಹ್ವಾನಿತರು ಸೇರಿ ಸುಮಾರು 650 ಜನ ಭಾಗವಹಿಸಲಿದ್ದಾರೆ.

ಸಂತೋಷ್‌ ಆತ್ಮಹತ್ಯೆ ಪ್ರಕರಣ

ಕಳೆದ ಕೆಲ ದಿನಗಳವರೆಗೂ ರಾಜ್ಯ ರಾಜಕಾರಣದಲ್ಲಿ ಬಿಜೆಪಿಯದ್ದೇ ಮೇಲುಗೈ ಆಗಿತ್ತು. ಉಡುಪಿಯ ಸರ್ಕಾರಿ ಕಾಲೇಜಿನ ಆರು ವಿದ್ಯಾರ್ಥಿನಿಯರಿಂದ ಆರಂಭವಾದ ಹಿಜಾಬ್‌ ಧಾರಣೆ ವಿಚಾರ, ವಿವಾದವಾಗಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿತು. ನ್ಯಾಯಾಲಯ ಸೇರಿ ಎಲ್ಲ ಹಂತದಲ್ಲೂ ಬಿಜೆಪಿಯದ್ದೇ ಮೇಲುಗೈ ಆಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಇಕ್ಕಟ್ಟಿಗೆ ಸಿಲುಕಿದವು. ಹಿಜಾಬ್‌ಗೆ ಬೆಂಬಲ ನೀಡಿದರೆ ನ್ಯಾಯಾಲಯಕಕೆ ವಿರುದ್ಧ, ಹಿಜಾಬ್‌ ವಿರೋಧಿಸಿದರೆ ಮುಸ್ಲಿಮರ ಧ್ವೇಷ ಎಂಬ ಆತಂಕವಿತ್ತು. ನಂತರದಲ್ಲಿ ಹಲಾಲ್‌ ಕಟ್‌ ಹಾಗೂ ಝಟ್ಕಾ ಕಟ್‌ ವಿವಾದ ತಲೆಯೆತ್ತಿತು. ಆನಂತರದಲ್ಲಿ ಮಸೀದಿಗಳಲ್ಲಿ ಆಜಾನ್‌ ಕೂಗುವ ವಿವಾದ, ವಕ್ಫ್‌ ಬೋರ್ಡ್‌ ರದ್ದು ಮಾಡುವವರೆಗೂ ಮಾತುಗಳು ವಿವಿಧ ಸಂಘಟನೆಗಳಿಂದ ಕೇಳಿಬಂದವು. ಎಲ್ಲ ಸಂದರ್ಭದಲ್ಲೂ ಬಿಜೆಪಿಯದ್ದೇ ಮೇಲುಗೈ ಆಗಿತ್ತು.

ಆದರೆ ಮಂಗಳವಾರ ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡರು. ಈ ಹಿಂದೆಯೇ ಸುದ್ದಿಗೋಷ್ಠಿ ನಡೆಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ 40% ಲಂಚದ ಆರೋಪ ಮಾಡಿದ್ದ ಸಂತೋಷ್‌ ಈ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಆತ್ಮಹತ್ಯೆ ವಿಚಾರ ಹೊರಬೀಳುತ್ತಿದ್ದಂತೆಯೇ ಪ್ರತಿಪಕ್ಷಗಳಿಗೆ, ಅದರಲ್ಲೂ ಸೊರಗಿದ್ದ ಕಾಂಗ್ರೆಸ್‌ಗೆ ಟಾನಿಕ್‌ ಸಿಕ್ಕಂತಾಗಿದೆ. ಈಗಾಗಲೆ ಎರಡು ದಿನದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ. ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ವಿರುದ್ಧವೇ ಎಫ್‌ಐಆರ್‌ ದಾಖಲಾಗಿದೆ. ಪ್ರತಿಪಕ್ಷಗಳು, ಮಾಧ್ಯಮ ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಈಶ್ವರಪ್ಪ ಶುಕ್ರವಾರ ರಾಜೀನಾಮೆಯನ್ನು ಸಲ್ಲಿಸುವುದಾಗಿ ಗುರುವಾರ ಘೋಷಣೆ ಮಾಡಿದ್ದಾರೆ.

ಹಿಜಾಬ್‌, ಹಲಾಲ್‌ ಮುಂತಾದ ಹಿಂದುಪರ ವಿಚಾರಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೇಳಿಕೆಗಳನ್ನು ನೀಡುತ್ತಿದ್ದವರಲ್ಲಿ ಈಶ್ವರಪ್ಪ ಪ್ರಮುಖರು. ಹಿಜಾಬ್‌ಗೆ ವಿರುದ್ಧವಾಗಿ ಹಿಂದು ಹುಡುಗರಿಗೆ ಕೇಸರಿ ಶಾಲು ನೀಡುವ ಕುರಿತಂತೆಯೇ ಈಶ್ವರಪ್ಪ ವಿವಾದಕ್ಕೀಡಾಗಿದ್ದರು. ಹಿಂದು ಸಂಘಟನೆಗಳ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಅದೇ ಈಶ್ವರಪ್ಪ ಅವರ ವಿಚಾರದಲ್ಲಿ ರಾಜ್ಯ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ.

ಚುನಾವಣೆ ಸಮಯದಲ್ಲಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಬೇಕಿದೆ. ಕೇಂದ್ರದಲ್ಲಿ ನರೇಮದ್ರ ಮೋದಿ ಸರ್ಕಾರದ ಜತೆಗೆ ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಡಬಲ್‌ ಎಂಜಿನ್‌ ಅಭಿವೃದ್ಧಿ ಆಗುತ್ತದೆ ಎಂಬುದು ಬಿಜೆಪಿ ಪ್ರಚಾರದ ಕೇಂದ್ರ ಬಿಂದು. ಇದೀಗ ಒಂದೆಡೆ ಕೋಮು ವಿಚಾರದಲ್ಲಿ ರಾಜ್ಯದ ಉದ್ಯಮ ವಲಯದಲ್ಲಿ ಬಿಜೆಪಿ ಕುರಿತು ನಕಾರಾತ್ಮಕ ಭಾವನೆ ಮೂಡಿದೆ ಎಂಬುದರ ನಡುವೆಯೇ ಭ್ರಷ್ಟಾಚಾರ ವಿಚಾರದಲ್ಲೂ ಮುಖಭಂಗವಾಗಿದೆ. ಇವೆರಡೂ ನಕಾರಾತ್ಮಕತೆಗಳಿಂದ ಹೊರಬಂದು ಚುನಾವಣೆಗೆ ಹೇಗೆ ಮುನ್ನುಗ್ಗಬೇಕು ಎಂಬ ತಂತ್ರವನ್ನು ರೂಪಿಸುವ ಸವಾಲು ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಒದಗಿಬಂದಿದೆ.

ಹೆಚ್ಚಿನ ಓದಿಗಾಗಿ: ರಾಜ್ಯದಲ್ಲೀಗ 150+ ಜಪ: BJP, CONGRESS ನಡುವೆ JDS ನಡೆ ವಿಭಿನ್ನ

ವೇದಿಕೆಗೆ ಹಂಪಿಯ ಟಚ್

ಭಟ್ರಹಳ್ಳಿ ಆಂಜನೇಯ ದೇಗುಲದ ಬಯಲು ಸ್ಥಳದಲ್ಲಿ ಹಂಪಿ ಸ್ಮಾರಕಗಳ ಶೈಲಿಯಲ್ಲಿ ಬಯಲು ಜಾಗದಲ್ಲಿ ಹವಾನಿಯಂತ್ರಿತ ಜರ್ಮನ್ ಟೆಂಟ್ ನಿರ್ಮಿಸಲಾಗಿದೆ. ಟೆಂಟ್ಆ‌ನಲ್ಸಲಿ 750 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕಾರಿಣಿಗಾಗಿ 80 ಅಡಿ ಉದ್ದ ಮತ್ತು 40 ಅಡಿ ಅಗಲದ ವೇದಿಕೆ ನಿರ್ಮಾಣಗೊಂಡಿದೆ. ಹಂಪಿಯ ಶ್ರೀವಿರೂಪಾಕ್ಷೇಶ್ವರ ಗೋಪುರ, ಕಲ್ಲಿನ ತೇರು, ಸಾಸಿವೆಕಾಳು ಗಣಪ, ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಆಂಜನೇಯ, ವಿಜಯ ವಿಠ್ಠಲ ದೇಗುಲದ ಸಪ್ತಸ್ವರ ಹೊರಡಿಸುವ ಕಲ್ಲಿನ ಕಂಬಗಳು, ಉಗ್ರ ನರಸಿಂಹ, ಸಾಲುಮಂಟಪ ಸೇರಿದಂತೆ ನಾನಾ ಸ್ಮಾರಕಗಳ ಮಿಶ್ರಣದೊಂದಿಗೆ ವೇದಿಕೆ ಕಂಗೊಳಿಸುತ್ತಿದೆ‌.

ಹೆಚ್ಚಿನ ಓದಿಗಾಗಿ: ನಿರುದ್ಯೋಗಕ್ಕೆ ರಾಜಕಾರಣಿಗಳೇ ಕಾರಣ: ಡಿ.ಕೆ. ಶಿವಕುಮಾರ್‌ ಪ್ರಶ್ನೆಗೆ Twitterನಲ್ಲಿ ಸ್ವಾರಸ್ಯಕರ ಉತ್ತರಗಳು !

Exit mobile version