ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಕೆಳಹಂತದ ನಾಯಕರು ಹಾಗೂ ಅಸಮಾಧಾನಿತ ಮುಖಂಡರನ್ನು ಸಮಾಧಾನಪಡಿಸುವ ಕಸರತ್ತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದೇ ಮೊದಲ ಬಾರಿಗೆ ಬಹುದೊಡ್ಡ ಪ್ರಮಾಣದಲ್ಲಿ ನಿಗಮ, ಮಂಡಳಿಗಳ ನಾಮನಿರ್ದೇಶನಗಳನ್ನು ರದ್ದುಪಡಿಸಿದೆ.
ಈ ಕುರಿತು ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ 22 ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ 52 ನಿಗಮ, ಮಂಡಳಿ, ಪ್ರಾಧಿಕಾರಗಳೆಲ್ಲದರ ಅಧ್ಯಕ್ಷರು, ಉಪಾಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈಗ ರದ್ದಾಗಿರುವ ನಿಗಮ ಮಂಡಳಿಗಳಲ್ಲಿ ಪ್ರಮುಖವಾಗಿ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅನಂತ ಹೆಗಡೆ ಅಶೀಸರ, ಕರ್ನಾಟಕ ವಿದ್ಯುತ್ ಕಾರ್ಖಾನೆಯ ತಮ್ಮೇಶ್ ಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ನಂದೀಶ್ ಹಂಚೆ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸುನಿಲ್ ಪುರಾಣಿಕ್, ಕೌಶಲ ಅಭಿವೃದ್ಧಿ ನಿಗಮದ ಕೆ. ರತ್ನಪ್ರಭ, ಮದ್ಯಪಾನ ಸಂಯಮ ಮಂಡಳಿಯ ಶ್ರುತಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಂ.ಆರ್. ವೆಂಕಟೇಶ್, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಆರ್. ಪ್ರಮೀಳಾ ನಾಯ್ಡು, ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಹರಿಕೃಷ್ಣ ಬಂಟ್ವಾಳ, ಕರಕುಶಲ ಅಭಿವೃದ್ಧಿ ನಿಗಮದ ಬೇಳೂರು ರಾಘವೇಂದ್ರ ಶೆಟ್ಟಿ ನೇಮಕ ರದ್ದಾಗಿದೆ.
ಸಂಘಟನೆಯ ಹೊಣೆಗಾರಿಕೆ
ಈಗಾಗಲೆ ಒಂದೂವರೆ ವರ್ಷ ಪೂರೈಸಿರುವ ನಿಗಮ ಮಂಡಳಿಗಳ ನೇಮಕವನ್ನು ಪ್ರಮುಖವಾಗಿ ರದ್ದುಪಡಿಸಲಾಗಿದೆ. ಸದ್ಯದಲ್ಲೆ ಚುನಾವಣೆ ಎದುರಾಗಲಿದ್ದು, ಈ ಸಮಯದಲ್ಲಿ ಕಾರ್ಯಕರ್ತರ ಅವಶ್ಯಕತೆ ಹೆಚ್ಚಾಗಿರುತ್ತದೆ. ತಮ್ಮ ಸರ್ಕಾರ ಇದ್ದರೂ ಯಾವುದೇ ಅಧಿಕಾರ ನೀಡಲಿಲ್ಲ ಎಂಬ ಅಸಮಾಧಾನ ಅನೇಕರಲ್ಲಿದೆ. ಹೀಗಾಗಿ ಅಲ್ಪ ಸಮಯಕ್ಕಾದರೂ ನಿಗಮ, ಮಂಡಳಿಗಳ ಹೊಣೆಯನ್ನು ನೀಡಲು ನಿರ್ಧಾರ ಮಾಡಲಾಗಿದೆ. ಜತೆಗೆ, ಈಗಾಗಲೆ ಒಂದೂವರೆ ವರ್ಷ ಅಧಿಕಾರ ಅನುಭವಿಸಿರುವವರನ್ನು ಸಂಘಟನೆಗೆ ಬಳಕೆ ಮಾಡಿಕೊಳ್ಳುವ ಚಿಂತನೆ ಇದೆ.
ಜತೆಗೆ, ಈ ಹಿಂದೆ ಆದ ನೇಮಕದ ಸಂದರ್ಭದಲ್ಲಿ ಪಕ್ಷದ ಸಂಘಟನೆಯ ಅಭಿಪ್ರಾಯವನ್ನು ಪೂರ್ಣವಾಗಿ ಗಣನೆಗೆ ತೆಗೆದುಕೊಂಡಿರಲಿಲ್ಲ ಎಂಬ ಆರೋಪವಿತ್ತು. ಈ ಬಾರಿ ಅಂತಹ ತಪ್ಪು ನಡೆಯದಂತೆ ಸಮತೋಲನ ಕಾಯ್ದುಕೊಳ್ಳಲು ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಳೆಯಿಂದ ಹಾನಿಗೀಡಾದ ಪ್ರದೇಶಗಳ ಪರಿಶೀಲನೆಗೆ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ತೆರಳಿದ್ದಾರೆ. ಇದಕ್ಕೂ ಮುನ್ನ ಸೋಮವಾರವೇ ಸತತ ಮೂರು ಗಂಟೆ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಲಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೂ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೆ ಈ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
ಇದನ್ನೂ ಓದಿ | ಅವಿವೇಕಿ ಶಿಕ್ಷಣ ಸಚಿವ ರಾಜೀನಾಮೆ ನೀಡಲಿ: ಬಿ.ಸಿ. ನಾಗೇಶ್ ವಿರುದ್ಧ ಸಿದ್ದರಾಮಯ್ಯ ಆಕ್ರೋಶ