Site icon Vistara News

ರಾಜ್ಯಾದ್ಯಂತ ಹಲವೆಡೆ ಪೊಲೀಸ್‌ ದಾಳಿ, 40ಕ್ಕೂ ಹೆಚ್ಚು PFI ಮುಖಂಡರು ವಶಕ್ಕೆ

PFI

ಬೆಂಗಳೂರು: ಮಂಗಳವಾರ ಮುಂಜಾನೆ ಬೀದರ್‌ನಿಂದ ಚಾಮರಾಜನಗರದವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಮಿಂಚಿನ ದಾಳಿ ನಡೆಸಿರುವ ಪೊಲೀಸರು, ನಲವತ್ತಕ್ಕೂ ಅಧಿಕ PFI ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ, ಉಡುಪಿ, ರಾಮನಗರ, ಮಂಗಳೂರು, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಚಾಮರಾಜನಗರ, ವಿಜಯಪುರ, ಚಿತ್ರದುರ್ಗದಲ್ಲಿ ದಾಳಿಗಳನ್ನು ನಡೆಸಲಾಗಿದ್ದು, ಹಲವಾರು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಾರ್ಗದರ್ಶನ ಹಾಗೂ ಆಯಾ ಜಿಲ್ಲೆ ಎಸ್‌ಪಿಗಳು, ಕಮಿಷನರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಕಾರ್ಯಾಚರಣೆ ನಡೆದಿದೆ. ಬೆಳಗ್ಗಿನ ಜಾವದಿಂದ ಹಲವಾರು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ನಡೆದ ಎನ್‌ಐಎ ದಾಳಿ, ಹಲವು ಪಿಎಫ್‌ಐ ಮುಖಂಡರ ಬಂಧನ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿರುವ ಮಾಹಿತಿ, ವಿಧ್ವಂಸಕ ಕೃತ್ಯಗಳಿಗೆ ಹಣಕಾಸು ಒಗ್ಗೂಡಿಸುವ ಪ್ರಯತ್ನ ಸೇರಿದಂತೆ ಹಲವಾರು ವಿಚಾರಗಳಲ್ಲಿ ವಶಕ್ಕೆ ಪಡೆದವರನ್ನು ಪ್ರಶ್ನಿಸಲಾಗುತ್ತಿದೆ.

ಶಿವಮೊಗ್ಗ: ಶಿವಮೊಗ್ಗ, ಭದ್ರಾವತಿಯಲ್ಲಿ ಪೊಲೀಸರಿಂದ ದಾಳಿ ನಡೆದಿದ್ದು, ಭದ್ರಾವತಿಯಲ್ಲಿ ಇಬ್ಬರು ಪಿಎಫ್ಐ, ಒಬ್ಬ ಎಸ್‌ಡಿಪಿಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ: ಉಡುಪಿ ಹೂಡೆ, ಕುಂದಾಪುರ, ಗಂಗೊಳ್ಳಿಯಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಹೂಡೆ PFI ಮುಖಂಡ ಇಲ್ಯಾಸ್ ಹೂಡೆ, ಕುಂದಾಪುರದ ಆಶಿಕ್ ಕೋಟೇಶ್ವರ, ಗಂಗೊಳ್ಳಿಯ ರಜಾಬ್‌, ಬೈಂದೂರಿನ ಕಲಿಲ್ ಸೈಯದ್‌ರನ್ನು ವಶಕ್ಕೆ ಪಡೆದಿದ್ದಾರೆ.

ವಿಜಯಪುರ: ವಿಜಯಪುರದ ಜೆ.ಎಂ ರಸ್ತೆಯಲ್ಲಿರುವ ಜಿಲ್ಲಾ PFI ಅಧ್ಯಕ್ಷ ಆಶ್ಫಾಕ್ ಜಮಖಂಡಿ ನಿವಾಸಕ್ಕೆ ದಾಳಿ ಮಾಡಿ ಆತನನ್ನು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಬಾಗಲಕೋಟೆ: ಬಾಗಲಕೋಟೆಯಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಸೇರಿ ಒಟ್ಟು 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಮಖಂಡಿಯಲ್ಲಿ 4, ಮಹಾಲಿಂಗಪುರದಲ್ಲಿ ಒಬ್ಬ, ಇಳಕಲ್‌ನಲ್ಲಿ ಒಬ್ಬ, ಬನಹಟ್ಟಿಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಇವರಲ್ಲಿ ಕೆಲವರನ್ನು ಶಾಂತಿಭಂಗ ಮಾಡಿದ ಆರೋಪದ ಮೇಲೆಯೂ ಬಂಧಿಸಲಾಗಿದೆ.

ಜಮಖಂಡಿಯ ಪಿಎಫ್ಐ ಜಿಲ್ಲಾ ಅಧ್ಯಕ್ಷ ಅಜ್ಗರ್ ಅಲಿ, ಇರ್ಫಾನ್ ಮಳಲಿ, ಮಹಮ್ಮದ್ ಗೌಸ್, ರಾಜೇಸಾಬ್ ತಾಳಿಕೋಟಿ, ಇಳಕಲ್‌ನ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಮುರ್ತೂಜ್, ಮಹಾಲಿಂಗಪುರದ ಉಮರ್ ಫಾರೂಕ್, ಮೂಸಾ ಅಹ್ಮದ್ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ. ಬಾಗಲಕೋಟೆ ಎಸ್‌ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಜಮಖಂಡಿ, ಇಳಕಲ್, ಬನಹಟ್ಟಿ, ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಚಾಮರಾಜನಗರ: ಚಾಮರಾಜನಗರದಲ್ಲಿ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಪಿಎಫ್‌ಐ ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬ್‌ರನ್ನು ಬೆಳಗ್ಗೆ 4 ಗಂಟೆಗೆ ಚಾಮರಾಜನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗದ ಪಿಎಫ್ಐ ಮುಖಂಡ, ಚಿಕ್ಕಪೇಟೆ ನಿವಾಸಿ ಅಫನ್ ಆಲಿಯನ್ನು ಕೋಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಎಸ್ಪಿ ಕೆ.ಪರಶುರಾಮ್, ಡಿವೈಎಸ್ಪಿ ಅನಿಲ್ ಸಮ್ಮುಖದಲ್ಲಿ ವಿಚಾರಣೆ‌ ನಡೆಯುತ್ತಿದೆ.

Exit mobile version