ಬೆಂಗಳೂರು: ಸಾಲಗಾರರ ಹಿಂಸೆ ತಾಳಲಾರದೆ ಜಿಮ್ ಮಾಲೀಕ ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಪ್ರಕರಣ ಇಲ್ಲಿನ ಅಬ್ಬಿಗೆರೆ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಜಿಮ್ ನಡೆಸುತ್ತಿದ್ದ ಮನೋಹರ್ (31) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಇವರು ಅಬ್ಬಿಗೆರೆಯ ತಮ್ಮ ನಿವಾಸದಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಮನೋಹರ್ ಸೆಲ್ಫಿ ವಿಡಿಯೊ ಮಾಡಿದ್ದಾರೆ.
ಹರೀಶ್, ಮಂಜುನಾಥ್ ಪ್ರಸಾದ್, ರಾಜು ಎಂಬುವರ ಬಳಿ ಕೈ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಕೋವಿಡ್ ಕಾರಣಗಳಿಂದ ಮನೋಹರ್ ಆರ್ಥಿಕ ನಷ್ಟ ಅನುಭವಿಸಿದ್ದರು. ಹೀಗಿದ್ದರೂ ಸಮಯಕ್ಕೆ ಸರಿಯಾಗಿ ತಾನು ಬಡ್ಡಿ ಕಟ್ಟುತ್ತಿದ್ದೆ. ಆದರೆ, ಸಾಲ ಕೊಟ್ಟವರು ಮನೆ ಹಾಗೂ ಜಿಮ್ ಕೇಂದ್ರದ ಮುಂದೆ ಬಂದು ಗಲಾಟೆ ಮಾಡುತ್ತಿದ್ದರು ಎಂದು ಮನೋಹರ್ ಸಾವಿಗೂ ಮುಂಚೆ ಆರೋಪಿಸಿದ್ದಾರೆ.
ಬಡ್ಡಿ ಜತೆಗೆ ಅಸಲನ್ನೂ ಹಿಂದಿರುಗಿಸುವಂತೆ ಸಾಲಗಾರರಿಂದ ತೀವ್ರ ಒತ್ತಡ ಬರುತ್ತಿದೆ. ಇದರಿಂದ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಮನೋಹರ್ ಆರೋಪಿಸಿದ್ದಾರೆನ್ನಲಾಗಿದೆ. ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | Suicide Report | ಕಳೆದ ವರ್ಷ ದೇಶಾದ್ಯಂತ 1.64 ಲಕ್ಷ ಜನ ಆತ್ಮಹತ್ಯೆ, ಕರ್ನಾಟಕದಲ್ಲಿ ಎಷ್ಟು?