Site icon Vistara News

ಚಾಮರಾಜಪೇಟೆ ಮೈದಾನ | ಯಥಾಸ್ಥಿತಿ ಕಾಪಾಡಲು ಸುಪ್ರೀಂ ಆದೇಶ, ಗಣೇಶೋತ್ಸವಕ್ಕೆ ಅವಕಾಶ ಇಲ್ಲ

ನವ ದೆಹಲಿ: ಬೆಂಗಳೂರಿನ ಚಾಮರಾಜಪೇಟೆಯ ಮೈದಾನದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶದಂತೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಅಂದರೆ ಈ ವಿವಾದಿತ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಇಲ್ಲ.

ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದ ಮುಂದೆ ನಡೆದ ಮಹತ್ವದ ವಿಚಾರಣೆಯ ಬಳಿಕ ಈ ಆದೇಶ ಹೊರಬಿದ್ದಿದೆ. ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಮೈದಾನದಲ್ಲಿ ವರ್ಷಕ್ಕೆರಡು ಬಾರಿ ಮುಸ್ಲಿಮರ ನಮಾಜ್‌ಗೆ ಮಾತ್ರ ಅವಕಾಶ ನೀಡಿತ್ತು. ಉಳಿದಂತೆ ಮೈದಾನವನ್ನು ಕೇವಲ ಆಟದ ಮೈದಾನವಾಗಿ ಮಾತ್ರ ಬಳಸಿಕೊಳ್ಳಬಹುದು ಎಂದಿತ್ತು. ಅದೇ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಗಣೇಶೋತ್ಸವಕ್ಕೆ ಅವಕಾಶ ನೀಡಬಹುದು ಎಂದಿದ್ದ ದ್ವಿಸದಸ್ಯ ಪೀಠದ ಆದೇಶವನ್ನು ತಳ್ಳಿಹಾಕಿದೆ. ಇದು ವಕ್ಫ್‌ ಮಂಡಳಿಗೆ ಸಿಕ್ಕಿದ ಜಯ ಎಂದು ಪರಿಗಣಿಸಲಾಗಿದೆ. ಅದಕ್ಕಿಂತ ಮೊದಲು ದ್ವಿಸದಸ್ಯ ಪೀಠದ ಮುಂದೆ ವಿಚಾರಣೆ ನಡೆದು ಬಳಿಕ ತಿಸದಸ್ಯ ಪೀಠಕ್ಕೆ ವರ್ಗಾವಣೆಯಾಗಿತ್ತು.

ದ್ವಿಸದಸ್ಯ ಪೀಠದ ಮುಂದೆ ಏನೇನಾಗಿತ್ತು?
ಚಾಮರಾಜಪೇಟೆ ಮೈದಾನದಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮ (ಇಲ್ಲಿ ಗಣೇಶೋತ್ಸವ)ಕ್ಕೆ ಅನುಮತಿ ನೀಡುವ ವಿವೇಚನಾಧಿಕಾರವನ್ನು ಹೈಕೋರ್ಟ್‌ನ ದ್ವಿಪಕ್ಷೀಯ ಪೀಠ ಸರಕಾರಕ್ಕೆ ನೀಡಿದ್ದನ್ನು ಪ್ರಶ್ನಿಸಿ ವಕ್ಫ್‌ ಮಂಡಳಿ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿತ್ತು.
ಮಂಗಳವಾರ ಈ ಅರ್ಜಿಯ ವಿಚಾರಣೆ ಆರಂಭಗೊಂಡ ವಕ್ಫ್‌ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ಮತ್ತು ಸರಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು. ವಕ್ಫ್‌ ಪರ ವಕೀಲರು ಇದು ವಕ್ಫ್‌ ಮಂಡಳಿಗೆ ಸೇರಿದ ಆಸ್ತಿ. ಇದರಲ್ಲಿ ಅನ್ಯ ಧರ್ಮದ ಕಾರ್ಯಕ್ರಮಕ್ಕೆ ಅವಕಾಶ ನೀಡುವುದು ನಮಗೆ ಹಿತವೆನಿಸುವುದಿಲ್ಲ ಎಂದು ಹೇಳಿದರು. ತುಷಾರ್‌ ಮೆಹ್ತಾ ಅವರು ಇದು ಸರಕಾರಕ್ಕೆ ಸೇರಿದ ಜಮೀನು. ಹೀಗಾಗಿ ಅದರ ಬಳಕೆಯ ಅಧಿಕಾರ ಸರಕಾರಕ್ಕೆ ಇರುತ್ತದೆ ಎಂದು ವಾದಿಸಿದರು.
ಈ ನಡುವೆ ವಿವಾದ ನಡೆದು ಬಂದ ದಾರಿಯ ಬಗ್ಗೆಯೂ ಚರ್ಚೆಯಾಯಿತು. ಕಳೆದ ಹಲವು ವರ್ಷಗಳಿಂದ ಇಲ್ಲದ ವಿವಾದ ಈಗ ಒಮ್ಮೆಲೇ ಎದ್ದುಬಂದಿರುವುದೇಕೆ ಎಂದು ಪ್ರಶ್ನಿಸಿದ ಒಬ್ಬ ನ್ಯಾಯಾಧೀಶರು ಇದರ ಹಿಂದಿನ ಕಾರಣಗಳನ್ನು ಕೆದಕಿದರು. ಆದರೆ, ಮತ್ತೊಬ್ಬ ನ್ಯಾಯಮೂರ್ತಿಗಳು ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ಸರಕಾರದ ವಿವೇಚನೆಗೆ ಬಿಟ್ಟಿರುವುದರಿಂದ ಅದನ್ನೇ ಮುಂದುವರಿಸುವುದು ಒಳಿತು ಎಂದು ಅಭಿಪ್ರಾಯಪಟ್ಟರು.
ದ್ವಿಸದಸ್ಯ ಪೀಠದ ಇಬ್ಬರು ನ್ಯಾಯಮೂರ್ತಿಗಳ ನಡುವೆ ಅಭಿಪ್ರಾಯಬೇಧ ಬಂದಿರುವುದರಿಂದ ಈ ಬಗ್ಗೆ ತ್ರಿಸದಸ್ಯ ಪೀಠವನ್ನು ರಚಿಸುವುದು ಒಳಿತು ಎಂದು ಅಭಿಪ್ರಾಯಪಡಲಾಯಿತು.

ಬುಧವಾರವೇ ಗಣೇಶೋತ್ಸವ ಇರುವುದರಿಂದ ವಿಷಯದ ತೀರ್ಮಾನ ಮಂಗಳವಾರವೇ (ಇಂದೇ) ಆಗಬೇಕು ಎಂಬ ನೆಲೆಯಲ್ಲಿ ತಕ್ಷಣವೇ ತ್ರಿಸದಸ್ಯ ಪೀಠವನ್ನು ರೂಪಿಸಲಾಯಿತು. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಎ.ಎಸ್‌. ಓಕಾ ಮತ್ತು ಎಂ.ಎಂ. ಸುಂದರೇಶ್‌ ಅವರ ಪೀಠದಲ್ಲಿ ವಿಚಾರಣೆಗೆ ನಿರ್ಧರಿಸಲಾಯಿತು. ಕೆಲವೇ ನಿಮಿಷಗಳ ಮಧ್ಯಂತರದಲ್ಲಿ ತ್ರಿಸದಸ್ಯ ಪೀಠ ವಿಚಾರಣೆ ಆರಂಭಿಸಿತು.

ತ್ರಿಸದಸ್ಯ ವಿಭಾಗೀಯ ಪೀಠದಲ್ಲಿರುವ ನ್ಯಾಯಮೂರ್ತಿಗಳು

ವಾದ ವಿವಾದದ ಸಾರವೇನು?
ಮೈಸೂರು ಸಂಸ್ಥಾನವಿದ್ದಾಗಲೇ ವಕ್ಫ್​ಬೋರ್ಡ್​ಗೆ ಜಾಗ ಮಂಜೂರಾಗಿದೆ. ಅಂದಿನಿಂದಲೂ ವಿವಾದಿತ ಜಾಗದಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದಾರೆ. ಹೀಗಾಗಿ ಮೈದಾನದ ಸ್ವರೂಪವನ್ನು ಬದಲಿಸುವಂತಿಲ್ಲ ಎಂದು ವಕ್ಫ್‌ ಬೋರ್ಡ್‌ ಪರ ವಕೀಲರಾದ ಕಪಿಲ್ ಸಿಬಲ್ ಹೇಳಿದರು.

ಆಗ ಪೀಠ ಒಂದು ಪ್ರಶ್ನೆಯನ್ನು ಎತ್ತಿತ್ತು. ʻʻ200 ವರ್ಷಗಳಿಂದಲೂ ಮೈದಾನ ನಮಾಜ್​ಗೆ ಬಳಕೆ ಆಗುತ್ತಿತ್ತು ಎನ್ನುತ್ತೀರಿ. ಹಾಗಿದ್ದರೆ ಈಗ ಬೇರೆ ಧರ್ಮದ ಆಚರಣೆಗೆ ಮುಂದಾಗಿರುವುದು ಯಾಕೆ? ಈ ಹಿಂದೆ ಬೇರೆ ಧರ್ಮದ ಆಚರಣೆ ನಡೆಯುತ್ತಿತ್ತಾ ಎಂದು ಪೀಠ ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ವಕೀಲ ಕಪಿಲ್‌ ಸಿಬಲ್‌, ʻʻವಿವಾದಿತ ಭೂಮಿಯಲ್ಲಿ ರಂಜಾನ್, ಬಕ್ರೀದ್​ ನಮಾಜ್​ ನಡೆಯುತ್ತಿತ್ತು. ಆರು ತಿಂಗಳ ಹಿಂದಿನವರೆಗೂ ವಿವಾದಿತ ಜಾಗದ ಮಾಲೀಕತ್ವ ಪ್ರಶ್ನೆ ಎದ್ದಿರಲಿಲ್ಲʼʼ ಎಂದರು.
ಚಾಮರಾಜ ಪೇಟೆ ಮೈದಾನದ ಬಗ್ಗೆ ತ್ರಿಸದಸ್ಯ ಪೀಠಕ್ಕೆ ವಿವರ ನೀಡಿದ ಕಪಿಲ್‌ ಸಿಬಾಲ್‌ ಅವರು, ಸರ್ವೆ ನಂಬರ್‌ 40ರಲ್ಲಿರುವ ಜಾಗವನ್ನು ಕೇವಲ ನಮಾಜ್​ಗೆ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂದರು.

ವಕ್ಫ್‌ ಮಂಡಳಿ ಪರ ಕಪಿಲ್‌ ಸಿಬಾಲ್‌ ವಾದವೇನು?
ಇಲ್ಲಿವರೆಗೂ ಯಾಕೆ ಪ್ರಶ್ನಿಸಿಲ್ಲ?
1965ರಲ್ಲೇ ಇದನ್ನು ಈದ್ಗಾ ಜಮೀನು ಎಂದು ಘೋಷಿಸಲಾಗಿದೆ. 1972ರಲ್ಲಿ ಮೈದಾನದ ಮಾಲೀಕತ್ವ ವಿವಾದ ಇತ್ಯರ್ಥವಾಗಿದೆ. ಇಷ್ಟೆಲ್ಲ ಆದರೂ ರಾಜ್ಯ ಸರಕಾರ ಈ ಬಗ್ಗೆ ಯಾಕೆ ಪ್ರಶ್ನೆ ಮಾಡಿಲ್ಲ. ಈಗ ಏಕಾಏಕಿಯಾಗಿ ಮೈದಾನದ ಮಾಲೀಕತ್ವವನ್ನು ಪ್ರಶ್ನೆ ಮಾಡುತ್ತಿರುವುದು ಯಾಕೆ ಎಂದು ವಕ್ಫ್‌ ಮಂಡಳಿ ಪರ ವಕೀಲರು ಪ್ರಶ್ನಿಸಿದರು.
ಆಗ ʻʻಇದು ಸರ್ಕಾರದ ಆಸ್ತಿʼ ಎಂದು ಸಾಲಿಸಿಟರ್​ ಜನರಲ್ ತುಷಾರ್‌ ಮೆಹ್ತಾ ಹೇಳಿದರು. ಅಲ್ಲ ಇದು ವಕ್ಫ್‌ ಬೋರ್ಡ್‌ ಆಸ್ತಿ ಎಂದು ವಾದಿಸಿದರು ಕಪಿಲ್‌ ಸಿಬಲ್‌.

ಜಮೀನು ನಮ್ಮ ಸ್ವಾಧೀನದಲ್ಲಿದೆ..
ಚಾಮರಾಜಪೇಟೆ ಮೈದಾನ ಜಮೀನು ನಮ್ಮ ಸ್ವಾಧೀನದಲ್ಲಿದೆ. ಹೀಗಿರುವಾಗ ಈದ್ಗಾ ಮೈದಾನದ ಮಾಲೀಕತ್ವದ ಪ್ರಶ್ನೆ ಹೇಗೆ ಉದ್ಭವಿಸುತ್ತದೆ? ಈ ವಿಚಾರದಲ್ಲಿ ಬಿಬಿಎಂಪಿ ಜಂಟಿ ಆಯುಕ್ತರಿಗೆ ಮಧ್ಯ ಪ್ರವೇಶಿಸಲು ಅಧಿಕಾರ ಎಲ್ಲಿದೆ? ಒಂದೊಮ್ಮೆ ಜಮೀನು ವಿವಾದವಿದ್ದರೆ ಇತ್ಯರ್ಥ ಆಗಬೇಕಾಗಿರುವುದು ನ್ಯಾಯಾಲಯದಲ್ಲಿ. ಆದರೆ, ಬಿಬಿಎಂಪಿ ಅಧಿಕಾರಿಗಳು 2022ರ ಆಗಸ್ಟ್​ 9ರಂದು ಸುಮೋಟೊ ಕೇಸ್​ ದಾಖಲಿಸಿಕೊಂಡರು. ಕೊನೆಗೆ ವಿವಾದಿತ ಭೂಮಿ ಕಂದಾಯ ಇಲಾಖೆಗೆ ಸೇರಿದ್ದು ಎಂದು ಅವರೇ ಆದೇಶ ಮಾಡಿಕೊಂಡರು ಎಂದು ಕಪಿಲ್‌ ಸಿಬಾಲ್‌ ಹೇಳಿದರು.

ಬಿಬಿಎಂಪಿ ಜಾಗ ಎನ್ನಲು ಯಾವುದೇ ಆಧಾರವಿಲ್ಲ
ವಕ್ಫ್‌ ಮಂಡಳಿ ಸ್ವಾಧೀನದಲ್ಲಿರುವ ಜಾಗವನ್ನು ಈಗ ಕಂದಾಯ ಇಲಾಖೆ ಆಸ್ತಿ ಎನ್ನಲಾಗುತ್ತಿದೆ. ನಾವು ಯಾವುದನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ.. ಇದು ವಕ್ಫ್‌ ಬೋರ್ಡ್‌ ಆಸ್ತಿಯೇ ಎಂದು ಕಪಿಲ್‌ ಸಿಬಲ್‌ ಹೇಳಿದರು.
ನಿಜವೆಂದರೆ ಮಾಲೀಕತ್ವ ಸಾಬೀತು ಪಡಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ವಿವಾದಿತ ಜಾಗವನ್ನ ತನ್ನದು ಅಂತ ಬಿಬಿಎಂಪಿ ಹೇಳಲು ಸಾಧ್ಯವಿಲ್ಲ. ಅದನ್ನು ಸಾಧಿಸಲು ಅದರ ಬಳಿ ಯಾವುದೇ ದಾಖಲೆಗಳಿಲ್ಲ ಎಂದ ಕಪಿಲ್‌ ಸಿಬಲ್‌ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವಾಗಲೇ ಕಂದಾಯ ಸಚಿವರಾಗಿರುವ ಆರ್‌. ಅಶೋಕ್‌ ಅವರು ಇದು ಕಂದಾಯ ಭೂಮಿ ಎಂದು ಘೋಷಿಸಿದ್ದನ್ನು ಪ್ರಶ್ನಿಸಿದರು.

==============================

೨೦೦೬ರಲ್ಲಿ ಗಣೇಶೋತ್ಸವ, ಶಿವರಾತ್ರಿ ನಡೆದಿತ್ತು ಎಂದು ಸರಕಾರಿ ವಕೀಲರು
ಬೆಂಗಳೂರಿನ ವಿವಾದಿತ ಚಾಮರಾಜ ಪೇಟೆ ಮೈದಾನದಲ್ಲಿ ೨೦೦ ವರ್ಷಗಳಿಂದ ವರ್ಷಕ್ಕೆರಡು ಬಾರಿ ನಮಾಜ್‌ ಬಿಟ್ಟರೆ ಬೇರೆ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆದಿರಲಿಲ್ಲ ಎಂಬ ವಾದವನ್ನು ಸರ್ಕಾರದ ಪರ ವಕೀಲ ಮುಕುಲ್‌ ರೋಹಟ್ಗಿ ಅಲ್ಲಗಳೆದಿದ್ದಾರೆ.

ʻʻ2006ರಲ್ಲಿ ವಿವಾದಿತ ಜಾಗದಲ್ಲಿ ಹಬ್ಬ ಆಚರಣೆಗೆ ಅವಕಾಶ ನೀಡಲಾಗಿದೆ. ಗಣೇಶೋತ್ಸವ, ಶಿವರಾತ್ರಿ ಆಚರಣೆಗೆ ಅವಕಾಶ ನೀಡಲಾಗಿದೆʼʼ ಎಂದು ಅವರು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರು ವ ವಿಚಾರಣೆ ವೇಳೆ ತ್ರಿಸದಸ್ಯ ವಿಭಾಗೀಯ ಪೀಠದ ಮುಂದೆ ಹೇಳಿದರು.

ʻʻಇದೀಗ ಯಾರು ಹಿಂದೂ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅರ್ಜಿ ಸಲ್ಲಿಸಿದ್ದಾರೋ ಅವರೇ ಅಂದು ಅವಕಾಶ ನೀಡಿದ್ದರು. ಧಾರ್ಮಿಕ ಆಚರಣೆಗೆ ವಕ್ಫ್​ಬೋರ್ಡ್​ ಅನುಮತಿ ನೀಡಿತ್ತುʼʼ ಎಂದು ರೋಹಟ್ಗಿ ವಾದಿಸಿದರು.

ʻʻ200 ವರ್ಷಗಳ ಹಿಂದೆ ವಿವಾದಿತ ಜಾಗ ಮಕ್ಕಳ ಆಟದ ಮೈದಾನವಾಗಿತ್ತುʼʼ ಎಂದು ಹೇಳಿದ ಮುಕುಲ್‌ ರೋಹಟ್ಗಿ ಅವರು, 22 ವರ್ಷಗಳ ಹಿಂದೆ ಖಾತೆ ಮಾಡಿಕೊಡುವಂತೆ ವಕ್ಫ್​ಬೋರ್ಡ್​ ಕಂದಾಯ ಇಲಾಖೆಗೆ ಮನವಿ ಮಾಡಿಕೊಂಡಿತ್ತು ಎಂದು ನೆನಪಿಸಿದರು.

ʻʻಇಲ್ಲಿ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿದೆ. ಈ ಹಿಂದೆ ಸುಪ್ರೀಂಕೋರ್ಟ್ ಇದಕ್ಕೆ​ ಅನುಮತಿ ನೀಡಿತ್ತುʼʼ ಎಂದ ರೋಹಟ್ಗಿ, ಮಾಲೀಕನಿಲ್ಲದ ಆಸ್ತಿಗೆ ಸರ್ಕಾರವೇ ಮಾಲೀಕ ಎನ್ನುವುದು ಸಾಮಾನ್ಯ ತಿಳುವಳಿಕೆʼʼ ಎಂದು ವಾದಿಸಿದರು.

ʻʻವಿವಾದಿತ ಜಾಗದಲ್ಲಿ ಪಾಲಿಕೆ ಶಾಲೆ ನಿರ್ಮಾಣದ ಅರ್ಜಿ ಸುಪ್ರೀಂನಲ್ಲಿದೆʼʼ ಎಂದು ರೋಹಟ್ಗಿ ಹೇಳಿದಾಗ ಕಪಿಲ್‌ ಸಿಬಾಲ್‌ ಮಧ್ಯ ಪ್ರವೇಶ ಮಾಡಿದರು. ಇದರಿಂದ ಕೆರಳಿದ ಮುಕುಲ್‌ ಅವರು, ʻʻನಿಮ್ಮ ವಾದ ಮಂಡಿಸಿದ್ದೀರಿ.. ನನ್ನ ವಾದ ಮಂಡನೆಗೆ ಅವಕಾಶ ಕೊಡಿʼʼ ಎಂದು ಹೇಳಿದರು.

ʻʻವಕ್ಫ್‌ ಮಂಡಳಿಯೇ ಮಾಲೀಕರಾಗಿದ್ದು ನಿಜವಾದರೆ, ಸ್ವಾತಂತ್ರ್ಯೋತ್ಸವಕ್ಕೆ ಅವಕಾಶ ನೀಡಿದ್ದೇಕೆ? ನಿಮ್ಮದೇ ಆಸ್ತಿ ಅಂದ್ರೆ ಇದನ್ನು ಸಾರ್ವಜನಿಕ ಮೈದಾನ ಎಂದು ಕರೆಯೋದ್ಯಾಕೆ?ʼʼ ಎಂದು ಖಾರವಾಗಿ ಪ್ರಶ್ನಿಸಿದರು ರೋಹಟ್ಗಿ.

ವಾದ ವಿವಾದ ಮುಂದುವರಿಯುತ್ತಿದೆ. ಇದು ವಕ್ಫ್‌ ಮಂಡಳಿ ಆಸ್ತಿ, ಇದುವರೆಗೆ ಇಲ್ಲಿ ಕೇವಲ ಮುಸ್ಲಿಂ ಧಾರ್ಮಿಕ ಪ್ರಾರ್ಥನೆಗೆ ಮಾತ್ರ ಅವಕಾಶವಿತ್ತು ಎನ್ನುವ ವಾದವನ್ನು ರೋಹಟ್ಗಿ ಸ್ಪಷ್ಟ ಮಾತುಗಳಲ್ಲಿ ತಳ್ಳಿಹಾಕಿದರು.

Exit mobile version