ನವ ದೆಹಲಿ: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ(Hijab Row)ದ ಆದೇಶವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸತತವಾಗಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತನ್ನ ತೀರ್ಪನ್ನು ಕಾಯ್ದಿಟ್ಟಿದೆ. ಪದವಿ ಪೂರ್ವ ಕಾಲೇಜ್‌ಗಳು, ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮುಸ್ಲಿಮ್ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.
ಬಳಿಕ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ನ್ಯಾಯಾಲಯವು ಸತತವಾಗಿ ವಿಚಾರಣೆ ನಡೆಸಿ, ಇದೀಗ ತೀರ್ಪನ್ನು ಕಾಯ್ದಿಟ್ಟಿದೆ. ಜಸ್ಟೀಸ್ ಹೇಮಂತ್ ಗುಪ್ತಾ ಮತ್ತು ಸುಧಾಂಶ ಧುಲಿಯಾ ಅವರಿದ್ದ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿದೆ. ಕರ್ನಾಟಕ ಸರ್ಕಾರವು ಫೆಬ್ರವರಿ 5ರಂದು ಆದೇಶ ಹೊರಡಿಸಿ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿತ್ತು.
ಬುಧವಾರ ಏನೆಲ್ಲ ವಿಚಾರಣೆ ನಡೆಯಿತು?
ಶೈಕ್ಷಣಿಕ ಸಂಸ್ಥೆಗಳಲ್ಲಿ ಬಾಲಕಿಯರಿಗೆ ಹಿಜಾಬ್ ಧರಿಸುವುದನ್ನು ಸಕಾರಾತ್ಮಕ ದೃಷ್ಟಿಯಿಂದಲೂ ನೋಡಬಹುದು. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಭಾರತದ ವೈವಿಧ್ಯತೆಯನ್ನು ಪರಿಚಯಿಸಲು ಹಿಜಾಬ್ ಧರಿಸುವುದನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಒಂದೇ ತೆರನಾದ ಸಮವಸ್ತ್ರ ಧರಿಸುವುದು ಅತ್ಯಗತ್ಯ ಎಂಬುದು ಕರ್ನಾಟಕ ಸರ್ಕಾರದ ಈವರೆಗಿನ ವಾದದ ತಿರುಳು. ಆದರೆ, ಮಕ್ಕಳು ಸಾಂಸ್ಕೃತಿಕವಾಗಿ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಲು ಕ್ಲಾಸ್‌ರೂಮ್‌ನಲ್ಲಿ ವೈವಿಧ್ಯತೆಯನ್ನು ಪರಿಚಯಿಸುವುದರ ಬಗ್ಗೆ ನಿರ್ಲಕ್ಷ್ಯ ವಹಿಸುವಂತೆಯೂ ಇಲ್ಲ ಎಂದು ಜಸ್ಟೀಸ್ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಹೇಳಿದೆ.
ವೈವಿಧ್ಯತೆಯನ್ನು ಶೋಧಿಸುವ ಅವಕಾಶವನ್ನಾಗಿ ಯಾಕೆ ಬಳಸಿಕೊಳ್ಳಬಾರದು. ಎಲ್ಲ ಸಂಸ್ಕೃತಿ, ಧರ್ಮಗಳ ವಿದ್ಯಾರ್ಥಿಗಳನ್ನು ನಾವು ಹೊಂದಿದ್ದೇವೆ. ದೇಶದ ವೈವಿಧ್ಯತೆಯನ್ನೇ ನೋಡಿ ಮತ್ತು ಅದರ ಬಗ್ಗೆ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬಹುದಲ್ಲ ಎಂದು ಪೀಠ ಹೇಳಿತು.
ತರಗತಿಯಲ್ಲಿ ಮಾತ್ರವೇ ಹಿಜಾಬ್ ನಿಷೇಧ
ತರಗತಿಗಳಲ್ಲಿ ಮಾತ್ರವೇ ಹಿಜಾಬ್ ನಿಷೇಧಿಸ ಲಾಗಿದೆ ಹೊರತು ಕ್ಯಾಂಪಸ್, ಶಾಲಾ ವಾಹನಗಳಲ್ಲಾಗಲೀ ಅಲ್ಲ ಎಂದು ಕರ್ನಾಟಕದ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಅವರು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ಪರವಾಗಿ ತಮ್ಮ ವಾದವನ್ನು ಮಂಡಿಸಿದರು.
ಅಭಿವ್ಯಕ್ತಿಯ ಹಕ್ಕಿನ ಭಾಗವಾಗಿ ವೇಷ ತೊಡುಗೆಯ ಹಕ್ಕು ಸುಲಭವಾಗಿ ದೊರೆಯುವುದಿಲ್ಲ. ನಾವೇನೂ ಶಾಲೆಯ ಆವರಣದಲ್ಲಾಗಲೀ, ಶಾಲಾ ಹೊರಗಡೆಯಾಗಲೀ, ಶಾಲಾ ವಾಹನಗಳಲ್ಲಾಗಲೀ ಹಿಜಾಬ್ ನಿಷೇಧವನ್ನು ಮಾಡಿಲ್ಲ. ಈ ನಿಷೇಧ ತರಗತಿಗಳಿಗೆ ಮಾತ್ರವೇ ಸೀಮಿತವಾಗಿದೆ ಎಂದು ನಾವದಗಿ ಅವರು ಜಸ್ಟೀಸ್ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠದ ಮುಂದೆ ತಮ್ಮ ವಾದವನ್ನು ಮಂಡಿಸಿದರು.
ಪಿಎಫ್ಐ ಕೈವಾಡ ಮಾಹಿತಿ ಕೊಡಿ: ಸುಪ್ರೀಂ
ಭುಗಿಲೆದ್ದ ಹಿಜಾಬ್ ವಿವಾದದ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಕೈವಾಡ ಇದೆ ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಬೆನ್ನಲ್ಲೇ, “ಪಿಎಫ್‌ಐ ಕುಮ್ಮಕ್ಕಿನ ಕುರಿತು ಹೆಚ್ಚಿನ ಮಾಹಿತಿ ನೀಡಿ” ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಅದು ಉಡುಪಿ ಇರಬಹುದು, ಕುಂದಾಪುರ ಇರಬಹುದು. ಅಲ್ಲೆಲ್ಲ, ಹಿಜಾಬ್ ವಿವಾದವು ಅತಿರೇಕಕ್ಕೇರಲು, ವಿದ್ಯಾರ್ಥಿಗಳು ಕಾಲೇಜು ಪ್ರವೇಶಿಸದೆ ಗೇಟ್‌ಗಳ ಮುಂದೆಯೇ ನಿಲ್ಲುವುದರ ಹಿಂದೆ ಸಂಘಟನೆಗಳ ಕೈವಾಡವಿದೆ” ಎಂದು ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿದರು.
ವಾದ ಆಲಿಸಿದ ನ್ಯಾಯಪೀಠವು, “ಹಿಜಾಬ್ ವಿವಾದದ ಹಿಂದೆ ಪಿಎಫ್‌ಐ ಕೈವಾಡವೇ ಇದೆ ಎಂದರೆ, ಸಲ್ಲಿಸಲಾದ ಜಾರ್ಜ್‌ಶೀಟ್‌ಗಳ ಪ್ರತಿಗಳನ್ನು ನ್ಯಾಯಾಲಯಕ್ಕೆ ಒದಗಿಸಿ” ಎಂದಿತು. ಆಗ ನಾವದಗಿ ಅವರು, “ಸಂಜೆ ವೇಳೆಗೆ ಎರಡೂ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗುವುದು” ಎಂದು ತಿಳಿಸಿದರು. ಹಿಜಾಬ್ ವಿವಾದದ ಹಿಂದೆ ಪಿಎಫ್‌ಐನಂತಹ ಮೂಲಭೂತವಾದಿ ಸಂಘಟನೆಯ ಕೈವಾಡವಿದೆ ಎಂದು ಮಂಗಳವಾರವೇ ರಾಜ್ಯ ಸರ್ಕಾರ ಸುಪ್ರೀಂ ಕೋಟ್‌ಗೆ ತಿಳಿಸಿತ್ತು.
ಇದನ್ನೂ ಓದಿ | Hijab Row | ಮಕ್ಕಳಲ್ಲಿ ಹಿಜಾಬ್ ವೈವಿಧ್ಯತೆಯನ್ನು ಉತ್ತೇಜಿಸಬಹುದಲ್ಲ: ಸುಪ್ರೀಂ ಕೋರ್ಟ್ ಅಭಿಪ್ರಾಯ