Site icon Vistara News

Suraj Revanna Case: ಸಾಕ್ಷಿ ನೀಡಲು ಠಾಣೆಗೆ ಬಂದು ಪೊಲೀಸ್‌ ಬಲೆಗೆ ಬಿದ್ದ ಸೂರಜ್‌ ರೇವಣ್ಣ

Suraj Revanna Case

Suraj Revanna Case

ಹಾಸನ: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಕುಟುಂಬಕ್ಕೆ ಮತ್ತೊಂದು ಮುಜುಗರ ಎದುರಾಗಿದೆ. ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಬಂಧನವಾಗಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಅವರ ಸಹೋದರ, ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಸೂರಜ್‌ ರೇವಣ್ಣ (Suraj Revanna Case)ನ ಬಂಧನವಾಗಿದೆ. ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ (Unnatural sexual abuse)ದ ಆರೋಪದ ಮೇಲೆ ಹಾಸನದಲ್ಲಿ ಸೂರಜ್‌ನನ್ನು ಬಂಧಿಸಲಾಗಿದೆ. ಸಾಕ್ಷಿ ನೀಡಲು ಠಾಣೆಗೆ ಬಂದ ಅವರು ತಾವಾಗಿಯೇ ಪೊಲೀಸ್‌ ಬಲೆಗೆ ಬಿದ್ದಿದ್ದಾರೆ.

ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಸೂರಜ್‌ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪಿಸಿ ಎಫ್‌ಐಆರ್‌ ದಾಖಲಿಸಿದ್ದರು. ಇತ್ತ ಸಂತ್ರಸ್ತ ದೂರು ದಾಖಲಿಸುತ್ತಿದ್ದಂತೆ ಆತನ ವಿರುದ್ಧವೇ ಸೂರಜ್‌ ಆಪ್ತರು ದೂರು ನೀಡಿದ್ದರು. ಸುಳ್ಳು ಆರೋಪ ಮಾಡಿ ಐದು ಕೋಟಿ ರೂ. ಹಣಕ್ಕಾಗಿ ಸಂತ್ರಸ್ತ ಪೀಡಿಸಿದ್ದಾನೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಐದು ಕೋಟಿ ರೂ. ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಸಾಕ್ಷಿ ನೀಡಲು ಸೂರಜ್ ಪೊಲೀಸ್‌ ಠಾಣೆಗೆ ಆಗಮಿಸಿದ್ದರು. ಆಡಿಯೊ ರೆಕಾರ್ಡ್, ಫೋಟೊ ಹಾಗೂ ಇತರ ದಾಖಲೆ ನೀಡುವ ಸಲುವಾಗಿ ಸೂರಜ್ ಬಂದಿದ್ದರು. ಬಂಧನ ಸಾಧ್ಯತೆಯ ನಿರೀಕ್ಷೆ ಮಾಡದೆ ಬಂದ ಸೂರಜ್ ರೇವಣ್ಣ ಇದೀಗ ಅರೆಸ್ಟ್‌ ಆಗಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಂಜಾನೆ 4 ಗಂಟೆವರೆಗೂ ವಿಚಾರಣೆ

ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಬ್ಲ್ಯಾಕ್‌ಮೇಲ್‌ ವಿಚಾರಕ್ಕೆ ಸಂಬಂಧಿಸಿ ಶನಿವಾರ ಸಂಜೆಯಿಂದ ಭಾನುವಾರ ಮುಂಜಾನೆ 4 ಗಂಟೆವರೆಗೂ ವಿಚಾರಣೆ ನಡೆಸಿದ ಬಳಿಕ ಸೂರಜ್‌ನನ್ನು ಬಂಧಿಸಲಾಗಿದೆ.

ಜನಪ್ರತಿನಿಧಿ ಕೋರ್ಟ್‌ಗೆ ವರ್ಗಾವಣೆ ಸಾಧ್ಯತೆ

ಸೂರಜ್‌ ರೇವಣ್ಣ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506 ಅಡಿ ಕೇಸ್ ದಾಖಲಾಗಿದ್ದು, ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ವರ್ಗಾವಣೆ ಸಾಧ್ಯತೆ ಇದೆ. ಸೂರಜ್ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಜನಪ್ರತಿನಿಧಿ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಕೂಡ ವರ್ಗಾವಣೆಯಾಗಲಿದೆ. ಒಂದುವೇಳೆ ಪ್ರಕರಣ ವರ್ಗಾವಣೆಯಾದರೆ ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಕೇಸ್ ವರ್ಗಾವಣೆ ಬಗ್ಗೆ ಪೊಲೀಸರು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Suraj Revanna Case: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಸೂರಜ್‌ ರೇವಣ್ಣ ಅರೆಸ್ಟ್‌

ಕಾನೂನು ತನಿಖೆ ಸುಳಿಗೆ ಸಿಲುಕಿದ ರೇವಣ್ಣ ಕುಟುಂಬ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಹಿರಿಯ ಮಗ ರೇವಣ್ಣ ಕುಟುಂಬಕ್ಕೆ ಇದೀಗ ಭಾರಿ ಸಂಕಷ್ಟ ಎದುರಾಗಿದೆ. ಅತ್ಯಾಚಾರ ಕೇಸ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್ ಬಂಧನವಾಗಿದೆ. ಸಂತ್ರಸ್ತೆ ಅಪಹರಣ ಕೇಸ್‌ನಲ್ಲಿ ಬಂಧನಕ್ಕೊಳಗಾಗಿ ಹತ್ತು ದಿನ ಜೈಲು ಅನುಭವಿಸಿ ರೇವಣ್ಣ ಹೊರಬಂದಿದ್ದಾರೆ. ಇದೇ ಸಂತ್ರಸ್ತೆ ಅಪಹರಣ ಕೇಸ್ ನಲ್ಲಿ ಜಾಮೀನು ಅರ್ಜಿ ವಜಾ ಆಗಿ ಭವಾನಿ ರೇವಣ್ಣ ಬಂಧನ ಭೀತಿ ಎದುರಿಸಿದ್ದರು. ಇದೀಗ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಸೂರಜ್ ಕೂಡ ಅರೆಸ್ಟ್ ಆಗಿದ್ದಾರೆ. ಒಟ್ಟಿನಲ್ಲಿ ಸಾಲು ಸಾಲು ಸಂಕಷ್ಟ ಜೆಡಿಎಸ್‌ ನಾಯಕ ರೇವಣ್ಣ ಅವರನ್ನು ಹೈರಾಣ ಮಾಡಿದೆ.

Exit mobile version