Site icon Vistara News

ಅಮಾನತುಗೊಂಡಿದ್ದ ಎಸ್‌ಐ ನಂದೀಶ್‌ ಹೃದಯಾಘಾತದಿಂದ ಸಾವು, ಆಯುಕ್ತರ ಮೇಲೆ ಸಚಿವ ಎಂಟಿಬಿ ನಾಗರಾಜ್ ಗರಂ

nandish

ಕೆ.ಆರ್.ಪುರ: ಇತ್ತೀಚೆಗೆ ಅಮಾನತುಗೊಂಡಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ನಂದೀಶ್ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೆ.ಆರ್.ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ.

ಹುಣಸೂರು ಮೂಲದ ನಂದೀಶ್ ಅವರನ್ನು, ಇತ್ತೀಚೆಗೆ ಒಂದು ಪಬ್ ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು.

ಮೃತ ಸರ್ಕಲ್ ಇನ್ಸ್‌ಪೆಕ್ಟರ್ ನಂದೀಶ್ ಅವರ ಪಾರ್ಥಿವ ಶರೀರವನ್ನು ಕೆ.ಆರ್.ಪುರಂನ ಗರುಡ ಅಪಾರ್ಟ್ಮೆಂಟ್ ಬಳಿ ಇರಿಸಿ ಬಂಧು- ಮಿತ್ರರು ಅಂತಿಮ ದರ್ಶನ ಪಡೆದರು. ದರ್ಶನದ ನಂತರ ಮೃತ ದೇಹವನ್ನು ತವರೂರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಜೆಪಿ ನಗರಕ್ಕೆ ಕೊಂಡೊಯ್ಯಲಾಗುತ್ತಿದ್ದು, ಅಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ಆಯುಕ್ತರೇ ಕಾರಣ: ಸಚಿವ ಎಂಟಿಬಿ ನಾಗರಾಜ್ ಗರಂ

ಬಹಳ ಸಣ್ಣ ವಿಷಯಕ್ಕೆ ನಂದೀಶ್‌ ಅವರನ್ನು ಅಮಾನತು ಮಾಡಲಾಗಿದ್ದು, ಆ ಒತ್ತಡವೇ ಅವರ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಆರೋಪಿಸಿದ್ದು, ಇದಕ್ಕಾಗಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ವಿರುದ್ಧ ಗರಂ ಆಗಿದ್ದಾರೆ. ಪೊಲೀಸರ ಮೇಲೆ ಬಹಳ ಒತ್ತಡಗಳಿವೆ. ದೊಡ್ಡ ಪ್ರಮಾಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುತ್ತಿಲ್ಲ. ಸಣ್ಣ ವಿಷಯಕ್ಕೆ ಅಮಾನತು ಮಾಡಿದ್ದಾರೆ. ತಪ್ಪಾಗಿದ್ದರೆ ಆಯುಕ್ತರು ನೋಟೀಸ್ ನೀಡಬಹುದಿತ್ತು. ಮೃತರ ಕುಟುಂಬಸ್ಥರಿಗೆ ಸರ್ಕಾರ ಏನೇ ಸಹಾಯ ಮಾಡಿದರೂ ಜೀವ ಹಿಂದಿರುಗಿ ಕೊಡಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒತ್ತಡದಿಂದ ಹೃದಯಾಘಾತ

ಕೆಲಸದ ಅತಿಯಾದ ಒತ್ತಡ ಪೊಲೀಸರ ಜೀವ ಕಸಿದುಕೊಳ್ಳುತ್ತಿದೆ. ಸರಿಯಾಗಿ ರಜೆಯನ್ನೂ ಕೊಡಲಾಗುತ್ತಿಲ್ಲ. ಅವರಿಗಾಗಿ ಕೌನ್ಸೆಲಿಂಗ್‌ ಆರಂಭಿಸಬೇಕು ಎಂಧು ನಂದೀಶ್ ಹೃದಯಾಘಾತದ ಹಿನ್ನೆಲೆಯಲ್ಲಿ ಗಿರೀಶ್‌ ಭಾರದ್ವಾಜ್‌ ಎಂಬವರು ಡಿಜಿಪಿ‌ ಪ್ರವೀಣ್ ಸೂದ್ ಅವರಿಗೆ ಟ್ವೀಟ್‌ ಮಾಡಿದ್ದಾರೆ.

ಪೊಲೀಸರಿಗೆ ಒತ್ತಡ ಹೆಚ್ಚಾಗುತ್ತಿದೆ. ಕೆಲ ಪೊಲೀಸರು 24 ಗಂಟೆ ಕೂಡ ಕೆಲಸ ಮಾಡುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ವಿಶ್ರಾಂತಿ ಅಗತ್ಯ. ಅತಿಯಾದ ಒತ್ತಡದಿಂದ ಕೆಲಸ ಮಾಡುವವರಿಗೆ ಆರೋಗ್ಯ ಕೈಕೊಡುತ್ತಿದೆ. ಅತಿಯಾದ ಕೆಲಸದೊತ್ತಡದಿಂದ ಒಮ್ಮೊಮ್ಮೆ ಅವರ ಕುಟುಂಬ, ಮಕ್ಕಳನ್ನೂ ಕೂಡ ನೋಡಲು ಸಾಧ್ಯವಾಗುತ್ತಿಲ್ಲ. ಹಿರಿಯ ಅಧಿಕಾರಿಗಳು ಅವರ ರಜೆಯನ್ನ ಅವರೇ ಡಿಸೈಡ್ ಮಾಡುತ್ತಾರೆ. ಆದರೆ ಕೆಳ ಹಂತದ ಅಧಿಕಾರಿಗಳ ಕಥೆ ಕೇಳುವವರೇ ಇಲ್ಲ. ನಿಮ್ಮ ಇಲಾಖೆಯಲ್ಲೇ ಒಂದು ಕೌನ್ಸೆಲಿಂಗ್ ಶುರು ಮಾಡಿ ಎಂದು ಡಿಜಿಪಿಯವರಿಗೆ ಟ್ವೀಟ್ ಮಾಡಿದ್ದಾರೆ.

Exit mobile version