Site icon Vistara News

Terror activity | ಉನ್ನತ ಶಿಕ್ಷಣ ಪಡೆದವರೇ ಯಾಕೆ ಉಗ್ರ ಸಂಘಟನೆಗಳ ಬಲೆಗೆ ಬೀಳುತ್ತಾರೆ? ಇಲ್ಲಿದೆ ಸ್ಪಷ್ಟ ಕಾರಣ

terror youth

ಬೆಂಗಳೂರು: ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ ಆರೋಪದಲ್ಲಿ ಸಿಕ್ಕಿಬಿದ್ದಿರುವ ಮೂವರು ಯುವಕರು ಸೇರಿದಂತೆ ದೇಶಾದ್ಯಂತ ಭಯೋತ್ಪಾದನಾ ಜಾಲದಲ್ಲಿ ಸಿಲುಕುವ ಯುವಜನರಲ್ಲಿ ಹೆಚ್ಚಿನವರು ಉನ್ನತ ವ್ಯಾಸಂಗ ಮಾಡಿದವರು, ಅದರಲ್ಲೂ ತಾಂತ್ರಿಕ ಶಿಕ್ಷಣ ಪಡೆದವರೇ ಆಗಿರುವುದು ವಿಶೇಷ.

ಹಾಗಿದ್ದರೆ ವಿದ್ಯಾವಂತ ಯುವಕರು ಯಾಕೆ ಇಂಥ ದುಷ್ಟ ಕೂಟವನ್ನು ಸೇರಿಕೊಳ್ಳುತ್ತಾರೆ. ಅಷ್ಟೆಲ್ಲ ಒಳ್ಳೆಯ ಶಿಕ್ಷಣ ಪಡೆದವರು ಯಾಕೆ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎಲ್ಲರಿಗೂ ಎದುರಾಗುತ್ತದೆ. ರಾಜ್ಯದಲ್ಲಿ ನಡೆದ ಉಗ್ರರನ್ನು ಪತ್ತೆ ಹಚ್ಚುವ, ನಿಗ್ರಹಿಸುವ ಕಾರ್ಯಾಚರಣೆಗಳು ಹಾಗೂ ಬಂಧಿತರನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಹಲವು ವಿಚಾರಗಳು ಬಯಲಿಗೆ ಬಂದಿವೆ.

ಕಲಿಕೆಯ ಸಂದರ್ಭದಲ್ಲೇ ಕಣ್ಣು!
ಸಾಮಾಜಿಕ ಮುಖವಾಡ ತೊಟ್ಟ ಕೆಲವೊಂದು ಉಗ್ರ ಸಂಘಟನೆಗಳು ಯುವ ಸಮುದಾಯ ಇಲ್ಲವೇ ಮಕ್ಕಳ ಹಂತದಲ್ಲೇ ವಿದ್ಯಾಭ್ಯಾಸ ಕೊಡಿಸುವ, ಉನ್ನತ ಶಿಕ್ಷಣ ಕೊಡಿಸುವ ನೆಪದಲ್ಲಿ ಅವರ ವಿಶ್ವಾಸವನ್ನು ಗಳಿಸಿಕೊಂಡು ಬಳಿಕ ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತವೆ ಎನ್ನುವುದು ಈಗ ಬಯಲಾಗಿರುವ ಪ್ರಮುಖ ಅಂಶಗಳಲ್ಲಿ ಒಂದು.
ಉನ್ನತ ವಿದ್ಯಾಭ್ಯಾಸಕ್ಕೆ ಕಷ್ಟ ಇರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಎಜುಕೇಷನಲ್‌ ಫಂಡಿಂಗ್‌ ಮಾಡುವುದು ಇವುಗಳ ಗೇಮ್‌ ಪ್ಲ್ಯಾನ್‌. ನಂತರ ಅವರನ್ನು ತಮ್ಮ ವಿಶ್ವಾಸದಲ್ಲೇ ಉಳಿಸಿಕೊಳ್ಳಲಾಗುತ್ತದೆ.

ಟೆಕ್ನಿಕಲ್‌ ವಿದ್ಯಾರ್ಥಿಗಳ ಮೇಲೆ ಕಣ್ಣು
ಉಗ್ರರ ತಂಡದೊಂದಿಗೆ ಸಹಕರಿಸುವ ಹೆಚ್ಚಿನ ಯುವಜನರು ವಿಜ್ಞಾನ, ಎಂಜಿನಿಯರಿಂಗ್‌ ಇಲ್ಲವೇ ತಾಂತ್ರಿಕ ಶಿಕ್ಷಣದಲ್ಲಿ ಪರಿಣತಿಯನ್ನು ಹೊಂದಿದವರೇ ಆಗಿರುತ್ತಾರೆ. ಎಂ.ಎಸ್‌, ಎಂಜಿನಿಯರಿಂಗ್‌, ಎಂಟೆಕ್‌ ಮಾಡಿದವರನ್ನೇ ಹೆಚ್ಚಾಗಿ ಟಾರ್ಗೆಟ್‌ ಮಾಡಿಟ್ಟುಕೊಳ್ಳಲಾಗುತ್ತದೆ. ಅವರನ್ನು ಯಾರದೋ ಮೂಲಕ ತಮ್ಮ ಗುಂಪಿಗೆ ಸಹಾಯಕ್ಕೆ ಕರೆಸಿಕೊಳ್ಳಲಾಗುತ್ತದೆ. ಧರ್ಮದ ಆಧಾರದಲ್ಲಿ, ಸಂಘಟನೆಗಳ ರೂಪದಲ್ಲಿ ಅವರಿಂದ ಸಹಾಯ ಪಡೆದುಕೊಳ್ಳಲಾಗುತ್ತದೆ. ಮುಂದೆ ಅವರನ್ನು ದುಷ್ಕೃತ್ಯಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

ಟೆಕ್ನಿಕಲ್‌ ವ್ಯಕ್ತಿಗಳು ಯಾಕೆ ಬೇಕು?
ತಾಂತ್ರಿಕವಾಗಿ ಉನ್ನತ ಅಧ್ಯಯನ ಮಾಡಿರುವ ವ್ಯಕ್ತಿಗಳು ಸೇರಿಕೊಂಡರೆ, ಅವರ ನೆರವು ಸಿಕ್ಕರೆ ಉಗ್ರರಿಗೆ ಹೆಚ್ಚು ಬಲ ಸಿಕ್ಕಂತೆ. ಸಾಮಾನ್ಯವಾಗಿ ಕಾಲಾಳುಗಳಂತೆ ಕೆಲಸ ಮಾಡಲು ಸಾಕಷ್ಟು ಜನ ಸಿಗುತ್ತಾರೆ. ಅವರಿಗೆ ಹಣ ಕೊಟ್ಟರೆ ಸಾಕಾಗುತ್ತದೆ. ಆದರೆ, ತಾಂತ್ರಿಕ ಪರಿಣತರು ಸಿಕ್ಕರೆ ಆಧುನಿಕ ಮತ್ತು ಸುಧಾರಿತ ಮಾದರಿಯಲ್ಲಿ ಕಾರ್ಯಾಚರಣೆ ಮಾಡಲು ಅವಕಾಶ ದೊರೆಯುತ್ತದೆ. ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುವುದು, ಸ್ಫೋಟಕಗಳು ಹಾಗೂ ಆಧುನಿಕ ಶಸ್ತ್ರಾಸ್ತ್ರಗಳ ಅಧ್ಯಯನಕ್ಕೆ ತಾಂತ್ರಿಕ ಪರಿಣತರಿದ್ದರೆ ತುಂಬಾ ಒಳ್ಳೆಯದು.
ಅದರಲ್ಲೂ ಮುಖ್ಯವಾಗಿ ಬಾಂಬ್‌ ಮೊದಲಾದ ಸ್ಫೋಟಕಗಳ ತಯಾರಿ, ಅವುಗಳ ಪರೀಕ್ಷೆಗೆಗೆ ಉನ್ನತ ಶಿಕ್ಷಣ ಪಡೆದವರೇ ಬೇಕಾಗುತ್ತದೆ. ಅಥವಾ ಅವರು ಸಿಕ್ಕರೆ ತುಂಬ ಅನುಕೂಲವಾಗುತ್ತದೆ. ಹೀಗಾಗಿ ತಾಂತ್ರಿಕ ಶಿಕ್ಷಣ ಪಡೆದವರನ್ನು ಉಗ್ರ ಜಾಲಕ್ಕೆ ಸೇರಿಸಿಕೊಳ್ಳಲು ದೊಡ್ಡ ಮಟ್ಟದ ಕಾರ್ಯಾಚರಣೆಯೇ ನಡೆಯುತ್ತದೆ.

ಹ್ಯಾಕರ್ಸ್‌ ಬೇಕು, ಎಕ್ಸ್‌ಪರ್ಟ್ಸ್‌ ಬೇಕು
ಈಗಿನ ಹೊಸ ಜಮಾನದಲ್ಲಿ ಸಾಮಾಜಿಕ ಜಾಲತಾಣಗಳಿರಬಹುದು, ಉನ್ನತ ವ್ಯವಸ್ಥೆಗಳಿರಬಹುದು, ಗೌಪ್ಯ ಕಾರ್ಯಾಚರಣೆಗಳು ಇರಬಹುದು. ಎಲ್ಲವನ್ನೂ ಹ್ಯಾಕ್‌ ಮಾಡಬಲ್ಲ, ಅದರಲ್ಲಿರುವ ಒಳಸುಳಿಗಳನ್ನು ತಿಳಿಯಬಲ್ಲ ಮಾತ್ರವಲ್ಲ, ಕೆಲವೊಮ್ಮೆ ಯಾರಿಗೂ ಗೊತ್ತಾಗದಂತೆ ಸಂವಹನ ನಡೆಸುವುದಕ್ಕೆ ಶಿಕ್ಷಿತ, ಅದರಲ್ಲೂ ತಾಂತ್ರಿಕ ಪರಿಣಿತ ಯುವಕರು ಬೇಕಾಗುತ್ತದೆ. ಉಗ್ರ ಜಾಲ ಈ ರೀತಿ ವ್ಯವಹರಿಸಬಲ್ಲವರನ್ನೇ ಹೆಚ್ಚು ಬಯಸುತ್ತದೆ, ಸೆಳೆಯುತ್ತದೆ.

ಉನ್ನತ ನಾಯಕರನ್ನಾಗಿ ಮಾಡುವ ಭರವಸೆ
ಹೀಗೆ ಉನ್ನತ ಶಿಕ್ಷಣ ಪಡೆದವರನ್ನು ಸೆಳೆಯಲು ಕೂಡಾ ಸಂಘಟನೆಗಳು ಸಾಕಷ್ಟು ತಂತ್ರಗಳನ್ನು ಬಳಸುತ್ತವೆ. ಅವರಿಗೆ ಧರ್ಮದ ವಿಚಾರವನ್ನು ತುಂಬುವುದು, ಧರ್ಮ ರಕ್ಷಣೆಯ ಅವಶ್ಯಕತೆಯನ್ನು, ಅದಕ್ಕೆ ಯುವಕರ ಅವಶ್ಯಕತೆಯನ್ನು ಮನಗಾಣಿಸುವುದು ಈ ತಂತ್ರದ ಭಾಗವಾಗಿದೆ. ಕೆಲವರನ್ನು ಮುಂದಿನ ದಿನದಲ್ಲಿ ಉನ್ನತ ಅಧಿಕಾರ, ಉನ್ನತ ನಾಯಕತ್ವದ ಭರವಸೆಗಳನ್ನು ನೀಡಲಾಗುತ್ತದೆ. ಕೆಲವರನ್ನು ಸ್ಥಳೀಯ ಮಟ್ಟಕ್ಕೆ, ಕೆಲವರನ್ನು ರಾಜ್ಯ,ದೇಶದ ಮಟ್ಟದ ನಾಯಕರನ್ನಾಗಿ ಬೆಳೆಸುವ ಭರವಸೆಯನ್ನು ನೀಡಲಾಗುತ್ತದೆ.

ವಯೋಸಹಜವಾದ ಆಕರ್ಷಣೆಗಳು
ಪ್ರತಿಯೊಬ್ಬ ಯುವಕರಿಗೂ ಸಮಾಜಸೇವೆ, ಧರ್ಮ ಸೇವೆಯ ಕನಸು ಇರುತ್ತದೆ. ದುಷ್ಟ ಶಕ್ತಿಗಳು ಅವರ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳುತ್ತವೆ. ದೇಶ ಸೇವೆ ಮಾಡಲು, ಜನರ ಸೇವೆ ಮಾಡಲು ಇದಕ್ಕಿಂತ ಒಳ್ಳೆಯ ಅವಕಾಶಗಳಿಲ್ಲ ಎಂದು ನಂಬಿಸುತ್ತವೆ. ಆರಂಭದಲ್ಲಿ ಒಳ್ಳೆಯ ಕೆಲಸಗಳಿಗೇ ಅವರನ್ನು ಬಳಸಿಕೊಂಡು ಬಳಿಕ ನಿಗೂಢ ಮತ್ತು ಅನ್ಯ ಕಾರ್ಯಗಳಿಗೆ ಬಳಕೆ ಮಾಡುತ್ತವೆ.

ಇದನ್ನೂ ಓದಿ | NIA Raid | ಎನ್‌ಐಎ ಬಂಧಿಸಿರುವ ಬೆಂಗಳೂರಿನ ಏಳು ಪಿಎಫ್‌ಐ ಮುಖಂಡರ ಸಂಪೂರ್ಣ ಕ್ರೈಂ ಹಿಸ್ಟರಿ ಇಲ್ಲಿದೆ!

Exit mobile version