ಬೆಂಗಳೂರು: ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿರುವ ಶಂಕಿತ ಭಯೋತ್ಪಾದಕರ (Terrorists in Bengaluru) ಮೊಬೈಲ್‌ಗಳಲ್ಲಿ ಕೆಲ ಹಿಂದುತ್ವವಾದಿಗಳ ಹೆಸರು ಮತ್ತು ಫೊಟೋ ಶೇರ್ ಆಗಿದ್ದು, ಇವರ ಹತ್ಯೆ ಸಂಚು ಕೂಡ ನಡೆದಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಜತೆಗೆ, ಪೊಲೀಸರಿಗೆ ಮಾತ್ರ ಲಭ್ಯವಾಗುವ ವೀಶೇಷ ಗುಂಡುಗಳೂ ಕೂಡ ಇವರ ಬಳಿ ಕಂಡುಬಂದಿವೆ. ಈ ಉಗ್ರರು ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ದೊಡ್ಡ ಮಟ್ಟದ ಸ್ಪೋಟಕ್ಕೆ ಸಂಚು ನಡೆಸಿದ್ದರು ಮತ್ತು ಹಿಂದು ನಾಯಕರನ್ನು ಟಾರ್ಗೆಟ್ ಮಾಡಲು ಮುಂದಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಶಂಕಿತ ಉಗ್ರರು ಅರೆಸ್ಟ್ ಪ್ರಕರಣದಲ್ಲಿ ಇಂದಿನಿಂದ ಸಿಸಿಬಿ ಪೊಲೀಸರ ಅಸಲಿ ತನಿಖೆ ಶುರುವಾಗಲಿದೆ. ಈಗಾಗಲೇ ಮೊದಲ ಹಂತದಲ್ಲಿ ಐವರೂ ಶಂಕಿತರನ್ನು ಸಿಸಿಬಿ ತೀವ್ರ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಮುಂದಿನ ಹಂತದಲ್ಲಿ ಶಂಕಿತರ ಬಳಿ ಪತ್ತೆಯಾದ ವೆಪನ್ಸ್ ಬಗ್ಗೆ ಪರಿಶೀಲನೆ ನಡೆಯಲಿದೆ.
ಶಸ್ತ್ರಾಸ್ತ್ರಗಳ ಬಗ್ಗೆ ಕೂಲಂಕಷ ತನಿಖೆ ಆಗಬೇಕಿದೆ. ಶಂಕಿತರ ಬಳಿ ವಿಶೇಷ ಗುಂಡುಗಳು ಪತ್ತೆಯಾಗಿದ್ದು, ಸದ್ಯ ಇದು ಸಿಸಿಬಿ ಪೊಲೀಸರ ನಿದ್ದೆ ಕೆಡಿಸಿದೆ. ಇವರ ಬಳಿ ಹದಿನೈದು ವಿಶೇಷ ಗುಂಡುಗಳು ಪತ್ತೆಯಾಗಿದ್ದು, ಇವುಗಳನ್ನು ಪೊಲೀಸ್ ಆಫೀಸರ್‌ಗಳು ಮತ್ತು ಡಿಫೆನ್ಸ್ ಅಧಿಕಾರಿಗಳಿಗೆ ಮಾತ್ರ ಬಳಸಲು ಪ್ರಾವಿಷನ್ ಇರುತ್ತದೆ. ಸಾಮಾನ್ಯರಿಗೆ ಈ ಗುಂಡುಗಳು ಸಿಕ್ಕುವುದಿಲ್ಲ. ಹಾಗಾದರೆ ಶಂಕಿತರ ಕೈಗೆ ಸ್ಪೆಷಲ್ ಗುಂಡುಗಳು ಹೇಗೆ ಬಂದವು, ಯಾರಿಂದ ಈ ಗುಂಡುಗಳು ಖರೀದಿಯಾಗಿವೆ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.
ಈ ಮಾದರಿಯ ಗುಂಡುಗಳು ಓಪನ್ ಮಾರ್ಕೆಟ್‌ನಲ್ಲಿ ಮಾರಾಟವಾಗುವುದಿಲ್ಲ. ಪೊಲೀಸ್, ಮಿಲಿಟರಿ ಮತ್ತು ವಿದೇಶಿ ಟೆರರ್ ಸಂಘಟನೆಗಳು ಬಳಸುವಂತಹ ಗುಂಡುಗಳು ಇವು. ಇವು 303 ಹೆವೀ ರೈಫಲ್‌ಗಿಂತ ಕೆಳ ಹಂತದ ವೆಪನ್‌ಗೆ ಬಳಸುವ ಗುಂಡುಗಳಾಗಿವೆ. ಗುಂಡನ್ನು ಬ್ಯಾರಲ್ ಮಾದರಿಯ ಪಿಸ್ತೂಲ್‌ಗೆ ಹಾಕಿಕೊಂಡು ಫೈರ್ ಮಾಡಲಾಗುತ್ತದೆ. ಸಾಮಾನ್ಯ ಪಿಸ್ತೂಲಿಗಿಂತ ಇದು ಡೇಂಜರಸ್ ಬುಲೆಟ್ಸ್ ಆಗಿದ್ದು, ಎಲ್ಲಿಂದ ಬಂದಿವೆ ಅನ್ನುವ ವಿಚಾರಣೆಯನ್ನು ಸದ್ಯ ಸಿಸಿಬಿ ನಡೆಸುತ್ತಿದೆ.
ದಾಳಿ ವೇಳೆ 7 ಕಂಟ್ರಿಮೇಡ್ ಪಿಸ್ತೂಲ್‌ಗಳು, 42 ಜೀವಂತ ಗುಂಡುಗಳು, ಸ್ಯಾಟಲೈಟ್ ಪೋನ್ ಪತ್ತೆಯಾಗಿದ್ದವು. ಸದ್ಯ ಕಂಟ್ರಿಮೇಡ್ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ಎಫ್‌ಎಸ್‌ಎಸ್‌ಎಲ್‌ಗೆ ಕಳಿಸಲಾಗುತ್ತಿದೆ. ಪಿಸ್ತೂಲನ್ನು ಈವರೆಗೆ ಬಳಸಲಾಗಿದೆಯೇ, ಆ ಪಿಸ್ತೂಲುಗಳ ಮೂಲಕ ಟ್ರೈನಿಂಗ್ ಪಡೆಯಲಾಗಿದೆಯೇ, ಎನ್ನುವುದರ ಬಗ್ಗೆ ಎಫ್‌ಎಸ್‌ಎಲ್‌ನಿಂದ ರಿಪೋರ್ಟ್ ಕೇಳಲಾಗುತ್ತಿದೆ. ಮದ್ದುಗುಂಡುಗಳು, ಡ್ರ್ಯಾಗರ್, ಸ್ಯಾಟಲೈಟ್ ಮೊಬೈಲ್ ಕೂಡ ಅಲ್ಲಿಗೆ ರವಾನಿಸಿ, ಅವುಗಳ ಬಗ್ಗೆಯೂ ರಿಪೋರ್ಟ್ ಪಡೆಯಲಾಗುತ್ತಿದೆ. ಹತ್ತು ದಿನಗಳಲ್ಲಿ ರಿಪೋರ್ಟ್ ಸಿಸಿಬಿ ಪೊಲೀಸರ ಕೈ ಸೇರಲಿದೆ.
ಹಿಂದೂ ನಾಯಕರ ಹತ್ಯೆ ಸಂಚು?
ಬಂಧಿತರಿಗೆ ಉತ್ತರಪ್ರದೇಶದಿಂದ ವೆಪನ್ ಪೂರೈಕೆ ಆಗಿದೆ ಎನ್ನಲಾಗುತ್ತಿದ್ದು, ಸುಹೈಲ್, ಮುದಾಸಿರ್, ಉಮ್ಮರ್, ತಬ್ರೇಜ್, ಮಹಮ್ಮದ್ ರಬ್ಬಾನಿ ಇವರು ಜುನೈದ್ ಹೇಳಿದಂತೆ ಕೆಲಸ ಮಾಡುತ್ತಿದ್ದರು. ಜುನೈದ್ ನೀಡುವ ಸೂಚನೆ ಪಾಲನೆ ಮಾಡುತ್ತಿದ್ದರು. ಸದ್ಯ ಸಿಸಿಬಿ ಪ್ರಾಥಮಿಕ ತನಿಖೆ ವೇಳೆ ಕಂಡುಬಂದ ವಿಚಾರ ಎಂದರೆ, ಕೇವಲ ಸ್ಥಳಗಳಷ್ಟೇ ಶಂಕಿತರ ಟಾರ್ಗೆಟ್ ಆಗಿರಲಿಲ್ಲ. ಹಿಂದೂ ಮುಖಂಡರನ್ನೂ ಇವರು ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ.
ಹಿಂದೂ ಮುಖಂಡರು, ಹಿಂದುತ್ವ ಫಾಲೋ ಮಾಡುವ ರಾಜಕಾರಣಿಗಳು ಈ ಶಂಕಿತರ ಮುಖ್ಯ ಟಾರ್ಗೆಟ್ ಆಗಿದ್ದರು. ಇದೇ ಕಾರಣಕ್ಕೆ ಕಂಟ್ರಿಮೇಡ್ ಪಿಸ್ತೂಲುಗಳನ್ನು ಉತ್ತರಪ್ರದೇಶದಿಂದ ಜುನೈದ್ ಬೆಂಗಳೂರಿಗೆ ಸಪ್ಲೈ ಮಾಡಿದ್ದ. ಗನ್ ಜೊತೆಗೆ ಅದಕ್ಕೆ ಬೇಕಾದ ಗುಂಡುಗಳೂ ಸಪ್ಲೈ ಆಗಿದ್ದವು. ಆನ್‌ಲೈನ್‌ನಲ್ಲಿ ಯಾವುದೇ ವ್ಯವಹಾರ ಮಾಡದ ಜುನೈದ್, ಸಿಕ್ಕಿರುವ ಗನ್, ಗುಂಡು, ವಾಕಿಟಾಕಿ ಹಾಗೂ ಬೇಕಾದ ಹಣವನ್ನು ತನ್ನ ಹುಡುಗರ ಮೂಲಕವೇ ಪೂರೈಸಿದ್ದ.
ಈತ ವಾಟ್ಸ್ಯಾಪ್ ಮತ್ತು ಇನ್‌ಸ್ಟಾಗ್ರಾಮ್ ಕಾಲ್‌ನಲ್ಲಿ ಮಾತನಾಡುತ್ತಿದ್ದ. ನಿರ್ದಿಷ್ಟ ಜಾಗಕ್ಕೆ ಆರೋಪಿಗಳನ್ನು ಕರೆಸುತ್ತಿದ್ದ. ಅಲ್ಲಿಗೆ ಜುನೈದ್ ಕಳುಹಿಸಿದ ಹುಡುಗರು ವಸ್ತುಗಳನ್ನ ತಂದು ಆರೋಪಿಗಳಿಗೆ ಕೊಟ್ಟು ಹೋಗುತ್ತಿದ್ದರು. ಆರೋಪಿಗಳಿಗೂ ಬ್ಯಾಗ್ ಕೊಟ್ಟವರ ಹೆಸರು ಮತ್ತು ಗುರುತು ಗೊತ್ತಾಗದಂತೆ ಜುನೈದ್ ಆಪರೇಟ್ ಮಾಡುತ್ತಿದ್ದ. ಖುದ್ದಾಗಿ ಬಂದು ಮಾಡಬೇಕಾದ ಕೆಲಸ ಏನು, ಹೇಗೆ, ಯಾವಾಗ ಮಾಡಬೇಕು ಎಂಬುದಾಗಿ ತಿಳಿಸುತ್ತೇನೆ ಎಂದು ಜುನೈದ್ ಹೇಳಿದ್ದ. ಹಿಂದೂ ನಾಯಕರ ಹತ್ಯೆ ಸಂಚು ಆಯಾಮದಲ್ಲಿಯೂ ಸಿಸಿಬಿ ತನಿಖೆ ನಡೆಸಿದ್ದು, ಮೊಬೈಲ್ ರಿಟ್ರೀವ್‌ಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Terrorists in Bengaluru : ಜೈಲಲ್ಲಿ ಟ್ರೇನಿಂಗ್, ಹಿಂದು ಮನೆಯಲ್ಲಿ ವಾಸ; ಏನಿದು ಬೆಂಗಳೂರು ಸ್ಫೋಟದ ಉಗ್ರ ಸಂಚು?